ಕಲಬುರಗಿ:
200 ಯೂನಿಟ್ ಒಳಗೆ ವಿದ್ಯುತ್ ವೆಚ್ಚ ಮಾಡುವ ಗ್ರಾಹಕರಿಗೆ ಈ ಯೋಜನೆ ಲಭ್ಯವಾಗುತ್ತಿದ್ದು, ಇಂದು ಕಲಬುರಗಿಯಲ್ಲಿ ಗೃಹ ಜೋತಿ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದೆ. ಬೆಳಗ್ಗೆ 11 ಗಂಟೆಗೆ ವೇದಿಕೆ ಮೇಲೆ 10 ಜನರಿಗೆ ಸಾಂಕೇತಿಕವಾಗಿ ಜಿರೋ ಬಿಲ್ ವಿತರಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಖರ್ಗೆ ಚಾಲನೆ ನೀಡಲಿದ್ದಾರೆ.
ಗೃಹ ಜೋತಿ ಯೋಜನೆ ಚಾಲನೆ ಕಾರ್ಯಕ್ರಮವನ್ನು ಕಲಬುರಗಿ ನಗರದಲ್ಲಿ ಇಂಧನ ಇಲಾಖೆ ಆಯೋಜಿಸಿದೆ. ಉಚಿತ ಬೆಳಕು ಸುಸ್ಥಿರ ಬದುಕು ಎಂಬ ಘೋಷವಾಕ್ಯದೊಂದಿಗೆ ಬೆಳಗ್ಗೆ 11 ಗಂಟೆಗೆ, ನಗರದ ಎನ್ ವಿ ಮೈದಾನದಲ್ಲಿ ಗೃಹ ಜೋತಿ ಯೋಜನೆ ಅಧಿಕೃತವಾಗಿ ಜಾರಿಯಾಗಲಿದೆ. ಇನ್ನು ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಅನೇಕ ಸಚಿವರು, ಶಾಸಕರು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.