ಬೆಂಗಳೂರು:
ಜಿಎಸ್’ಟಿ ದರ ಬದಲಾವಣೆಯಿಂದಾಗಿ ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಕುಸಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ಈ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಅವರು, ಸೆಸ್‌ನಿಂದ ಸಂಗ್ರಹವಾಗುವ ಆದಾಯದ ಅರ್ಧದಷ್ಟು ಭಾಗವನ್ನು ರಾಜ್ಯದೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಜಿಎಸ್ಟಿ ದರ ಸರಳೀಕರಣದಿಂದ ರಾಜ್ಯಗಳ ಆದಾಯಕ್ಕೆ ನಷ್ಟ ಉಂಟಾಗಿದೆ. ಜಿಎಸ್’ಟಿ ಕೌನ್ಸಿಲ್ ಸಭೆಯಲ್ಲಿ ನಾಗರಿಕರ ಹೊರೆ ಕಡಿಮೆ ಮಾಡಲು ರಾಜ್ಯಗಳು ಬೆಂಬಲ ಸೂಚಿಸಿವೆ. ಆದರೆ, ದೇಶದ ಜಿಎಸ್’ಟಿ ಸಂಗ್ರಹದಲ್ಲಿ ಭಾರಿ ಕುಸಿತ ಕಂಡಿದೆ ಎಂದು ಹೇಳಿದ್ದಾರೆ.
ನ .2025-26ರಲ್ಲಿ ಜಿಎಸ್’ಟಿ ಸಂಗ್ರಹದಲ್ಲಿ ಶೇ.2ರಷ್ಟು ಕುಸಿತ ದಾಖಲಾಗಿದೆ. ಕಳೆದ ವರ್ಷ ನವೆಂಬರ್ 2024ರಲ್ಲಿ ಜಿಎಸ್’ಟಿ ಶೇ.9.3 ಬೆಳವಣಿಗೆ ಆಗಿತ್ತು. ನಿವ್ವಳ ದೇಶೀಯ ಜಿಎಸ್’ಟಿ ಬೆಳವಣಿಗೆ ದರ ಇಳಿಕೆಯಾಗಿದೆ. ದರ ಸರಳೀಕರಣ ಬಳಿಕ 3 ತಿಂಗಳಲ್ಲಿ ಶೇ.1.7 ಮಾತ್ರ ಬೆಳವಣಿಗೆ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.8.9 ಬೆಳವಣಿಗೆ ಇತ್ತು. ಇದರಿಂದ ಕರ್ನಾಟಕದ ಬೊಕ್ಕಸಕ್ಕೆ 18,500 ಕೋಟಿ ರೂ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದ ಜಿಎಸ್ಟಿ ಸಂಗ್ರಹಣೆಯೂ ಕುಸಿದಿದೆ. ರಾಜ್ಯದ ನಿವ್ವಳ ಜಿಎಸ್’ಟಿ ಸಂಗ್ರಹಣೆಯಲ್ಲಿ ಶೇ.3.1 ಬೆಳವಣಿಗೆ ಹೊಂದಿದ್ದು, ರಾಜ್ಯದ ಬೊಕ್ಕಸಕ್ಕೆ 18,500 ಕೋಟಿ ರೂ. ನಷ್ಟದ ಭೀತಿ ಎದುರಾಗಿದೆ. ಈ ವರ್ಷ 9,000 ಕೋಟಿಗಳ ಆದಾಯ ಕೊರತೆ ಸಾಧ್ಯತೆ ಇದೆ. ವಿಲೀನಗೊಳಿಸದಿರುವಿಕೆಯಿಂದ 9,500 ಕೋಟಿ ರೂ. ನಷ್ಟವಾಗಲಿದೆ. ಈ ನಷ್ಟವನ್ನು ಕೇಂದ್ರವು ರಾಜ್ಯಗಳಿಗೆ ಸರಿದೂಗಿಸಬೇಕು. ಪಾನ್ ಮಸಾಲಾ ಸೆಸ್ ಆದಾಯವನ್ನು 50:50 ಆಧಾರದ ಮೇಲೆ ರಾಜ್ಯಗಳೊಂದಿಗೆ ಹಂಚಿಕೆಗೆ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ.








