GTD ನೇತೃತ್ವದಲ್ಲಿ ಕೋರ್‌ ಕಮಿಟಿ ರಚನೆ : ದೇವೇಗೌಡ

ಬೆಂಗಳೂರು:

      ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಚಾಮುಂಡೇಶ್ವರಿ ಶಾಸಕ ಜಿ ಟಿ ದೇವೇಗೌಡ ನೇತೃತ್ವದಲ್ಲಿ ಪಕ್ಷದ ಕೋರ್ ಕಮಿಟಿ ರಚಿಸುವುದಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ ಸೋಮವಾರ ಘೋಷಿಸಿದ್ದಾರೆ. 

     ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿಯು ಸೆ.1ರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅಕ್ಟೋಬರ್‌ನಲ್ಲಿ ಪಕ್ಷದ ರಾಜ್ಯ ಮಟ್ಟದ ಸಮಿತಿಗೆ ಪಕ್ಷ ಸಂಘಟನೆ ಕುರಿತು ವರದಿ ಸಲ್ಲಿಸಲಿದೆ. ಪಕ್ಷ ಸಂಘಟನೆಗಾಗಿ ಪ್ರತಿ ಜಿಲ್ಲೆಯಲ್ಲೂ ಮಾಡಬೇಕಾದ ಬದಲಾವಣೆ ಕುರಿತು ಶಿಫಾರಸ್ಸು ಮಾಡಲಿದೆ ಎಂದು ಅವರು ತಿಳಿಸಿದರು.

     ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರನ್ನು ತನ್ನ ತೆಕ್ಕೆಗೆ ಸೆಳೆಯಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ವರದಿಗಳ ನಡುವೆ ಜೆಡಿಎಸ್ ಈ ನಿರ್ಧಾರ ಕೈಗೊಂಡಿದೆ. ರಾಜ್ಯ ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

     2019 ರ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದುಕೊಂಡಿತು, ಆದರೆ ಪಕ್ಷದ ಬೆಂಬಲಿತ ಅಭ್ಯರ್ಥಿ ಕೂಡ ವಿಜಯಶಾಲಿಯಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಪಡೆದುಕೊಂಡಿವೆ. ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು.

    ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ನಮ್ಮ 19 ಶಾಸಕರು ಮತ್ತು ಎಂಟು ಎಂಎಲ್‌ಸಿಗಳು ಜಿಟಿ ದೇವೇಗೌಡ ನೇತೃತ್ವದಲ್ಲಿ 12 ಸದಸ್ಯರ ಕೋರ್ ಕಮಿಟಿ ರಚಿಸಲು ಅವಿರೋಧವಾಗಿ ನಿರ್ಧರಿಸಿದ್ದಾರೆ. ಸಮಿತಿಯು ರಾಜ್ಯದಾದ್ಯಂತ ಸಂಚರಿಸಲಿದೆ ಎಂದು ಮಾಜಿ ಪ್ರಧಾನಿ ಹೇಳಿದರು.

    2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿ ದೇವೇಗೌಡರು ಸೋಲಿಸಿದ್ದರು. ಆದರೆ, ಆಗ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ ಗೆದ್ದಿದ್ದರು. ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಪಂಚಾಯತ್‌ಗಳ ಚುನಾವಣೆಯ ಕಾರ್ಯತಂತ್ರವನ್ನು ಸಮಿತಿಯು ನಿರ್ಧರಿಸುತ್ತದೆ ಎಂದು ಹೆಚ್ ಡಿ ದೇವೇಗೌಡ ಹೇಳಿದರು.

 

Recent Articles

spot_img

Related Stories

Share via
Copy link
Powered by Social Snap