ಗುಬ್ಬಿ :
ಹೇಮಾವತಿ ನೀರಿನಿಂದ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಿದ್ದು ಗುಬ್ಬಿ ಅಮಾನಿಕೆರೆ ಕೋಡಿ ಬಿದ್ದಿದ್ದು ಹರಿದ ಕೋಡಿ ನೀರು ನೇರ ಕಡಬ ಕೆರೆಗೆ ಹರಿದಿದೆ. ಜಿಲ್ಲೆಯಲ್ಲೇ ದೊಡ್ಡ ಕೆರೆ ಎನಿಸಿಕೊಂಡ ಕಡಬ ಕೆರೆ ಪ್ರತಿ ವರ್ಷ ಶೇ.60 ರಷ್ಟು ತುಂಬಿಸಲಷ್ಟೇ ಸಾಧ್ಯವಾಗುತ್ತಿತ್ತು. ಆದರೆ ಈ ಬಾರಿ ಬಹು ದಿನ ಹರಿದ ನೀರು ಕಡಬ ಕೆರೆಯನ್ನೂ ಸಹ ಭರ್ತಿ ಮಾಡಿದೆ. ಕೋಡಿಯ ಅಂಚಿನಲ್ಲಿ ಕೆರೆ ನೀರು ಮೈದುಂಬಿ ನಿಂತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಅಮಾನಿಕೆರೆಗೆ ಹೇಮಾವತಿ ನೀರು ಹರಿದು ಕೋಡಿ ಬಿದ್ದ ಹಿನ್ನಲೆ ಬಾಗಿನ ಅರ್ಪಿಸಿ ಗಂಗಾಪೂಜೆ ನೆರವೇರಿಸಿದ ಅವರು, ಜೆಡಿಎಸ್ ಪಕ್ಷ ಸಂಘಟನೆಯ ಹೊಸ ಸಮಿತಿ ರಚನೆ ಬಗ್ಗೆ ಪ್ರತಿಕ್ರಿಯಿಸಿ ಬೂತ್ಮಟ್ಟ, ಹೋಬಳಿ ಮಟ್ಟ ನಾಯಕತ್ವ ವಹಿಸುವ ರೀತಿ ತಾಲ್ಲೂಕು ಸಂಘಟನೆಗೆ ನಾನು ಸೀಮಿತ ಎಂಬ ನಿಲುವು ದೊಡ್ಡವರಲ್ಲಿದ್ದೆ. ನಾನು ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುವವ. ಜಿಲ್ಲಾ ಸಂಘಟನೆಗೆ ಅರ್ಹರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲೆಯ ಜೆಡಿಎಸ್ ಸಂಘಟನೆ ಜವಾಬ್ದಾರಿಗೆ ಅರ್ಹರನ್ನು ಗುರುತಿಸಿ ಆಯ್ಕೆ ಮಾಡಿರುವ ಜೆಡಿಎಸ್ ವರಿಷ್ಠರು ನನ್ನನ್ನು ತಾಲ್ಲೂಕಿಗೆ ಸೀಮಿತಗೊಳಿಸಿದ್ದಾರೆ. ತಾಲ್ಲೂಕಿನ ಸಂಘಟನೆಗೆ ಇರುವ ಸಮಯ ಸಾಲದಾಗಿದೆ ಎಂದ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಕೊಡಬೇಕು ಎನ್ನುವ ಸಿಎಂ ಠಾಕ್ರೆ ಮಾತು ಬಾಯಿ ಚಪಲಕ್ಕೆ ಹೇಳಿದಂತಿದೆ. ಗಡಿಭಾಗದಲ್ಲಿ ಬೆಳಗಾವಿ ನಮ್ಮ ರಾಜ್ಯದ ಮುಖ್ಯವಾದ ಜಿಲ್ಲೆಯಾಗಿದೆ. ಈ ಬಗ್ಗೆ ಮನಬಂದಂತೆ ಮಾತನಾಡುವುದು ಅಸಹಜ ವರ್ತನೆ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರನ್ನು ಪದಚ್ಯುತಿಗೊಳಿಸಲು ಪ್ರಯತ್ನ ನಡೆದಿದೆ. ರವಿಕುಮಾರ್ ಅವರು ಶಿರಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ನತ್ತ ಒಲವು ತೋರಿದ ಹಿನ್ನಲೆ ಅವಿಶ್ವಾಸ ನಿರ್ಣಯ ಮಾಡಿ ಸ್ಥಾನದಿಂದ ಕೆಳಗಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದ ಅವರು, ಹೇಮಾವತಿ ನೀರು ಹರಿಸುವ ಯೋಜನೆಗಳ ಪೈಕಿ ಬಿಕ್ಕೇಗುಡ್ಡ ಯೋಜನೆಗೆ ಚಾಲನೆ ದೊರೆಕಿದೆ. ಈ ವರ್ಷದಲ್ಲಿ ಪೂರ್ಣಗೊಳಿಸುವ ನಿರ್ಣಯದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್, ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಸದಸ್ಯರಾದ ಕುಮಾರ್, ಸಿ.ಮೋಹನ್, ಶೌಕತ್ ಆಲಿ, ಮಂಗಳಮ್ಮ, ಮಮತಾ, ಮಹಮದ್ ಸಾದಿಕ್ ಮುಖಂಡರಾದ ಕೆ.ಆರ್.ವೆಂಕಟೇಶ್, ಜಿ.ಸಿ.ಲೋಕೇಶ್ಬಾಬು, ಜಿ.ಎಸ್.ಮಂಜುನಾಥ್, ಪಟೇಲ್ ಕೆಂಪೇಗೌಡ, ಶಿವಪ್ಪ, ಚನ್ನಬಸವಯ್ಯ, ಪಾಳ್ಯ ಬಸವರಾಜು, ಎಚ್.ಡಿ.ರಂಗಸ್ವಾಮಿ, ಕುಂಭಯ್ಯ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ