
ಗುಬ್ಬಿ: ತಾಲೂಕಿನ ಪ್ರತಿಷ್ಠಿತ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ (ಸಿ.ಐ.ಟಿ) ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶನಿವಾರ ದೇವರಾಯನದುರ್ಗದ ಸಮೀಪವಿರುವ ನಾಮದ ಚೆಲುಮೆಯ ಅರಣ್ಯ ಪ್ರದೇಶದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ಆಯುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಸುಮಾರು 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಂಡು ಅರಣ್ಯದ ಮೂಲೆ ಮೂಲೆಗಳಲ್ಲಿ ಬಿದ್ದಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಯುವಜನತೆಗೆ ಮಾದರಿ ಸಂದೇಶ ನೀಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪನೆಯಾಗಿ 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಸಂಸ್ಥೆಯು ಗುಬ್ಬಿ ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ತಯಾರು ಮಾಡಿದೆ. ಈಗ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುವ ಮೂಲಕ ತನ್ನ ಸಾಮಾಜಿಕ ಕಾಳಜಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಾಲೇಜಿನ ನಿರ್ದೇಶಕರಾದ ಡಾ. ಡಿ.ಎಸ್. ಸುರೇಶ್ ಕುಮಾರ್ ಅವರ ಕ್ರಿಯಾಶೀಲ ಕಾಳಜಿಯಿಂದಾಗಿ ಇಂದು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುವ ಈ ಸಂಸ್ಥೆ, ಸದಾ ಇಂತಹ ಜನಪರ ಕೆಲಸಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ.

ಬ್ರಾಂಡ್ಹೆ ಸರಿಸಿದ ಹುಡುಗಿಯರು!
ಸಾಮಾನ್ಯವಾಗಿ ಕುಡಕರಿಗೆ ಮಾತ್ರ ಮದ್ಯದ ಬ್ರ್ಯಾಂಡ್‌ಗಳ ಹೆಸರು ತಿಳಿದಿರುತ್ತದೆ. ಆದರೆ ಇಲ್ಲಿನ ಸ್ವಚ್ಛತಾ ಕಾರ್ಯದ ವೇಳೆ ವಿದ್ಯಾರ್ಥಿನಿಯೊಬ್ಬಳು ತನಗೆ ಸಿಕ್ಕ ಮದ್ಯದ ಬಾಟಲಿಗಳ ಹೆಸರುಗಳನ್ನು ನಿರಾಯಾಸವಾಗಿ ಹೇಳುತ್ತಿದ್ದುದು ನೆರೆದಿದ್ದವರಲ್ಲಿ ಅಚ್ಚರಿ ಮೂಡಿಸಿತು. ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿನಿಯರು ಕುತೂಹಲಕ್ಕಾಗಿ ಚಾಟ್ ಜಿಪಿಟಿಯಂತಹ ತಂತ್ರಜ್ಞಾನ ಬಳಸಿ ಮಾಹಿತಿ ತಿಳಿದುಕೊಂಡಿರಬಹುದು ಎಂಬ ಚರ್ಚೆಯೂ ಈ ಸಂದರ್ಭದಲ್ಲಿ ಕೇಳಿಬಂದಿತು.








