ಗುಬ್ಬಿ :
ತಾಲ್ಲೂಕಿನ 32 ಗ್ರಾಮಪಂಚಾಯ್ತಿಗಳಿಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು.
ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು 9 ಗಂಟೆ ವೇಳೆಗೆ ಶೇ7.19 ರಷ್ಟು ಮತದಾನವಾಗಿತ್ತು ನಂತರ 11 ಗಂಟೆ ವೇಳೆಗೆ ಶೇ. 22.23ರಷ್ಟು ಮತದಾನವಾಗಿತ್ತು ಮಧ್ಯಾಹ್ನದ ವೇಳೆಗೆ ಶೇ. 62ರಷ್ಟು ಮತದಾನವಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದಲೇ ಬಿರುಸಿನಿಂದ ಮತದಾನವಾದರೆ ಇನ್ನು ಕೆಲ ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆಯಿತು. 10 ಗಂಟೆಯ ನಂತರ ಮತದಾನ ಬಹುತೇಕ ಮತಗಟ್ಟೆಗಳಲ್ಲಿ ಬಿರುಸುಪಡೆದುಕೊಂಡಿತು.
ಮಂಚಲದೊರೆ ಮತ್ತು ಅಂಕಸಂದ್ರ ಗ್ರಾಮ ಪಂಚಾಯಿತಿ ಹೊರತಾಗಿ ಉಳಿದಂತೆ ತಾಲ್ಲೂಕಿನ 32 ಪಂಚಾಯಿತಿ ವ್ಯಾಪ್ತಿಯ 300 ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ನಡೆದು ಸಂಜೆ 4 ರ ವೇಳೆಗೆ ಶೇ.75 ಕ್ಕೂ ಅಧಿಕ ಮತದಾನ ನಡೆದಿರುವ ಬಗ್ಗೆ ವರದಿಯಾಗಿತ್ತು.
ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 25 ಗ್ರಾಮ ಪಂಚಾಯಿತಿಯಲ್ಲಿ ಬಿರುಸಿನ ಚಟುವಟಿಕೆ ಕಂಡು ಬಂದಿದೆ. ಉಳಿದ 7 ಪಂಚಾಯಿತಿ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟು ಅಲ್ಲಿ ಪ್ರತಿಷ್ಠೆಯ ಕಣವಾಗಿ ಹಲವು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿ ಸ್ಪರ್ಧೆ ಏರ್ಪಟ್ಟಿದೆ.
ಸಂಜೆ ವೇಳೆಗೆ ಮತದಾರರ ಹುಡುಕಿ ಕರೆ ತರುವ ಕೆಲಸವನ್ನು ಅಭ್ಯರ್ಥಿಗಳು ನಡೆಸಿದ್ದು ಕಂಡಿದೆ. ಮತದಾನ ಬಹುತೇಕ ಶಾಂತಿಯುತವಾಗಿ ನಡೆದು ಎಲ್ಲಿಯೂ ಅಹಿತಕರ ಘಟನೆಗೆ ಪೊಲೀಸ್ ಸಿಬ್ಬಂದಿ ಆಸ್ಪದ ನೀಡಿಲ್ಲ. ಚುನಾವಣಾಧಿಕಾರಿಗಳು ಮತಗಟ್ಟೆಯಲ್ಲಿ ಕೊರೊನಾ ನಿಯಮಗಳ ಪಾಲನೆಗೆ ಸ್ಯಾನಿಟೇಜರ್ ಬಳಕೆ ಹಾಗೂ ಮಾಸ್ಕ್ ಕಡ್ಡಾಯ ಧರಿಸುವ ಬಗ್ಗೆ ಎಚ್ಚರಿಕೆ ವಹಿಸಿದ್ದರು. ಮತದಾನದ ಅವಧಿ ಮುಗಿದರೂ 9 ಮತಗಟ್ಟೆಗಳಲ್ಲಿ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ತಹಸೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ಹಾಗೂ ಸಿಬ್ಬಂದಿ ವರ್ಗ ಎಲ್ಲಾ ರೀತಿಯ ಪೂರ್ವ ಭಾವಿ ಸಿದ್ದತೆಗಳನ್ನು ಮಾಡಿಕೊಂಡಿದ್ದರಿಂದ ಮತದಾನ ಪ್ರಕ್ರಿಯೆ ಸುವ್ಯವಸ್ಥಿತವಾಗಿ ನಡೆಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ