ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮುಖ್ಯ

 ಗುಬ್ಬಿ :

      ಪ್ರಜಾಪ್ರಭುತ್ವದಲ್ಲಿ ಆಡಳಿತ ನಿರ್ವಹಣೆ ಸಮರ್ಪಕವಾಗಿ ಮತ್ತು ಸುಭದ್ರವಾಗಿ ಇರಬೇಕಾದರೆ ಮತದಾರರ ಪಾತ್ರ ಮುಖ್ಯವಾಗಿದೆ. ಮತದಾರರು ಇದರ ಮಹತ್ವ ಅರಿತು ಅರ್ಹ ವ್ಯಕ್ತಿಗೆ ಮತ ಚಲಾಯಿಸಬೇಕಾದ ಅಗತ್ಯ ಇದೆ ಎಂದು ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವರಾಜ್ ವಿ ಸಿದ್ದೇಶ್ವರರವರು ತಿಳಿಸಿದರು.

      ಪಟ್ಟಣದ ಕಂದಾಯ ಭವನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಮತ್ತು ಮತದಾನ ಪ್ರಮುಖ ಅಂಗವಾಗಿವೆ. ಮತ ಚಲಾಯಿಸುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ ಮತ ಚಲಾವಣೆಯಲ್ಲಿ ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲ ಲಿಂಗಬೇಧ, ಜಾತಿಬೇಧ, ಧರ್ಮಬೇಧ ಯಾವುದನ್ನು ಪರಿಗಣಿಸದೆ ನಿರ್ಭಯವಾಗಿ ಮತ ಚಲಾಯಿಸಲು ಸಂವಿಧಾನವು ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದರು.

      ಅಧಿಕ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಎನ್.ಗಣೇಶ್‍ರವರು ಮಾತನಾಡಿ, ಮತದಾನ ಜನತೆಯು ಯಾವುದಾದರೂ ಅಭ್ಯರ್ಥಿಗಳ ಬಗ್ಗೆ ತಮ್ಮ ನಿರ್ಣಯಗಳನ್ನು ಸೂಚಿಸಲು ಅನುವು ಮಾಡಿಕೊಡುವ ಒಂದು ಪ್ರಕ್ರಿಯೆಯಾಗಿದೆ. 18 ವರ್ಷ ತುಂಬಿದ ಎಲ್ಲರಿಗೂ ಮತಚಲಾಯಿಸುವ ಹಕ್ಕನ್ನು ಸಂವಿಧಾನವು ಒದಗಿಸಿಕೊಟ್ಟಿದೆ. ಅರ್ಹ ವಿರುವ ಎಲ್ಲಾ ಮತದಾರರನ್ನು ಚುನಾವಣೆಗಳಲ್ಲಿ ಮತ ಚಲಾಯಿಸುವಂತೆ ಅರಿವು ಮೂಡಿಸುವ ಅಗತ್ಯಇದೆ ಎಂದು ಹೇಳಿದರು.

      ಅಧ್ಯಕ್ಷತೆವಹಿಸಿದ್ದ ತಾಲ್ಲೂಕು ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ್ ಮಾತನಾಡಿ, ದೇಶದ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಲ್ಲಾ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮತದಾರರನ್ನು ಜಾಗೃತಿ ಗೊಳಿಸಿ ಪೂರ್ಣ ಪ್ರಮಾಣದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಜೊತೆಗೆ ಮತದಾರರು ಪೂರ್ಣಪ್ರಮಾಣದಲ್ಲಿ ಮತದಾನದಲ್ಲಿ ಪಾಲ್ಗೊಂಡಾಗ ಆರೋಗ್ಯಕರ ಪ್ರಜಾಪ್ರಭುತ್ವಕ್ಕಾಗಿ ಯೋಗ್ಯರನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

      ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತದಾರರಿಗೆ ತಹಶೀಲ್ದಾರ್ ಸಾಂಕೇತಿಕವಾಗಿ ಸ್ಮಾರ್ಟ್ ಎಪಿಕ್ ಕಾರ್ಡನ್ನು ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿದ್ದ ಎಲ್ಲರಿಗೂ ಮತದಾರರ ಪ್ರತಿಜ್ಞಾ ವಿಧಿಯನ್ನು ನ್ಯಾಯಾಧೀಶರಾದ ಶಿವರಾಜ್ ಸಿದ್ದೇಶ್ವರ ಅವರು ಬೋಧಿಸಿದರು.

      ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ಶಶಿಕಲಾ, ಉಪತಹಶೀಲ್ದಾರ್ ಖಾನ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಕ್ಷರಿ, ಶಿರಸ್ತೇದಾರ್ ಶ್ರೀರಂಗ, ಆರ್‍ಆರ್‍ಟಿ ಶಿರಸ್ತೇದಾರ್ ಲೋಕೇಶ್, ಕಸಬಾ ಕಂದಾಯ ನಿರೀಕ್ಷಕ ರಮೇಶ್‍ಕುಮಾರ್, ಆಹಾರ ನಿರೀಕ್ಷಕ ಸಿದ್ದೇಗೌಡ ಹಾಗೂ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link