ಗುಬ್ಬಿ :
ಸಂವಿಧಾನದ ಅಡಿಯಲ್ಲಿ ನ್ಯಾಯಾಂಗವು ಒಂದು ಭಾಗವಾಗಿದ್ದುಕೊಂಡು ಕಾರ್ಯನಿರ್ವಹಿಸುತ್ತಿರುವ ವಕೀಲರುಗಳಿಗೆ ಸೂಕ್ತವಾದ ರಕ್ಷಣೆ ಇಲ್ಲದಂತಾಗಿರುವುದು ದುರದೃಷ್ಟಕರ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಜಿ.ಷಡಕ್ಷರಿ ತಿಳಿಸಿದರು.
ಪಟ್ಟಣದಲ್ಲಿ ವಕೀಲರ ಸಂಘದವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳು ವಕೀಲರ ಸಂರಕ್ಷಣಾ ಕಾಯಿದೆಯ ಕರಡುಪ್ರತಿಯನ್ನು ಸಿದ್ದಪಡಿಸಿ 2019ರಲ್ಲಿಯೇ ಸರ್ಕಾರಕ್ಕೆ ಸಲ್ಲಿಸಿದ್ದರೂ ಸರ್ಕಾರವು ಇದುವರೆಗೂ ಜಾರಿಗೆ ಕ್ರಮವಹಿಸಿಲ್ಲ,. ಸರ್ಕಾರವು ತಕ್ಷಣವೇ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದು ವಕೀಲರ ರಕ್ಷಣೆಗೆ ಮುಂದಾಗಬೇಕಾದ ಅಗತ್ಯ ಇದೆ ಎಂದರು.
ಸರ್ಕಾರವು ಕಾನೂನನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ವಕೀಲರಾದ ಮಂಜುನಾಥ್ ಮಾತನಾಡಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿರುವ ಕರಡು ಪ್ರತಿಯನ್ನು ಕಾನೂನಾಗಿ ಮಾರ್ಪಡಿಸಿ ಜಾರಿಗೆ ತರಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ.್ಲ ವಕೀಲರ ಮೇಲೆ ಪದೇಪದೇ ನಡೆಯುತ್ತಿರುವ ಹಲ್ಲೆಗಳನ್ನು ತಡೆಯುವ ನಿಟ್ಟಿನಲ್ಲಿ ಸರಕಾರವು ತಕ್ಷಣವೇ ವಕೀಲ ಸಂರಕ್ಷಣೆ ಕಾನೂನನ್ನು ಜಾರಿಗೆ ತರಬೇಕಾಗಿದೆ ಎಂದು ತಿಳಿಸಿದರು.
ಕಳೆದ ಫೆಬ್ರವರಿ 27 ರಂದು ಹೊಸಪೇಟೆ ನ್ಯಾಯಾಲಯದ ಆವರಣದಲ್ಲಿ ಹತ್ಯೆಗೀಡಾದ ವಕೀಲ ವೆಂಕಟೇಶ್ ಹತ್ಯೆಯನ್ನು ಖಂಡಿಸಿ ಹಿನ್ನೆಲೆಯಲ್ಲಿ ಗುಬ್ಬಿ ವಕೀಲರುಗಳು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ನ್ಯಾಯಾಲಯದ ಆವರಣದಿಂದ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಗ್ರೇಡ್-2 ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಕೀಲ ಸಂಘದ ಉಪಾಧ್ಯಕ್ಷರಾದ ಶಶಿಧರ, ಕಾರ್ಯದರ್ಶಿ ಮೋಹನ್, ಜಂಟಿ ಕಾರ್ಯದರ್ಶಿ ರವೀಶ್, ಖಜಾಂಚಿ ಯೋಗೇಶ್, ಮಹಿಳಾ ವಕೀಲರು ಹಾಗೂ ಸಂಘದ ಎಲ್ಲಾ ವಕೀಲರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
