ಗುಬ್ಬಿ:
ಇತ್ತೀಚಗೆ ಹೊಸದಾಗಿ ನಿರ್ಮಾಣವಾದ ಡಾಂಬರ್ ರಸ್ತೆಗೆ ಮಣ್ಣು ಸುರಿದು ರಸ್ತೆಯ ಧೂಳಿನಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ತಂದ ಲೋಕೋಪಯೋಗಿ ಇಲಾಖೆ ಮಣ್ಣು ಸುರಿದ ಬಗ್ಗೆ ದೂರು ನೀಡಿದ್ದರೂ ಜಾಣಮೌನ ಪ್ರದರ್ಶಿಸಿರುವುದು ಜವರೇಗೌಡನಪಾಳ್ಯ ಹಾಗೂ ಗೋಳೇನಹಳ್ಳಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸುಮಾರು 2 ಕೋಟಿ ರೂಗಳ ಅನುದಾನದಲ್ಲಿ ಡಾಂಬರೀಕರಣಗೊಳಿಸಿದ ಮೂರು ಕಿಮೀ ದೂರದ ರಸ್ತೆ ಆಮೆಗತಿಯಲ್ಲಿ ಸಾಗಿ ಅಂತೂ ಇಂತೂ ಸಿದ್ದವಾಯಿತು. ಆದರೆ ಸಾರ್ವಜನಿಕರ ಉಪಯೋಗಕ್ಕೆ ಬರುವ ಮುನ್ನವೇ ಡಾಂಬರ್ ರಸ್ತೆಯ ಮೇಲೆ ಕೆರೆಕಟ್ಟೆಗಳ ಮಣ್ಣು ಲೋಡ್‍ಗಟ್ಟಲೇ ತಂದು ಪೂರಾ ಮೂರು ಕಿಮೀ ರಸ್ತೆಯ ಡಾಂಬರ್ ಕಾಣದಂತೆ ಮಾಡಿದ್ದಾರೆ. ಹೊಸ ರಸ್ತೆ ನಿರ್ಮಾಣವಾಗಿತ್ತೇ ಎಂಬಂತೆ ಭಾಸವಾಗಿದೆ. ಬರೀ ಧೂಳಿನಿಂದ ಕೂಡಿರುವ ಈ ರಸ್ತೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಪ್ರಮುಖ ಹೋಬಳಿ ಕಡಬ ಗ್ರಾಮಕ್ಕೆ ಸಂಪರ್ಕಿಸುವ ಜವರೇಗೌಡನಪಾಳ್ಯದಿಂದ ಗೋಳೇನಹಳ್ಳಿ ರಸ್ತೆಯು ನಿತ್ಯ ನೂರಾರು ವಾಹನಗಳ ಸಂಚಾರ ಕಾಣಬಹುದಾಗಿದೆ. ಸರ್ಕಾರಿ ಬಸ್‍ಗಳ ಸಂಚಾರ ಕೂಡಾ ಸಾಕಷ್ಟಿರುವ ಇಲ್ಲಿ ಲಾರಿಗಳು, ಗೂಡ್ಸ್‍ವಾಹನಗಳು ಓಡಾಡುತ್ತಲೇ ಇರುತ್ತವೆ. ವಾಹನ ದಟ್ಟಣೆ ಅರಿತು ಡಾಂಬರ್ ರಸ್ತೆ ನಿರ್ಮಾಣ ಮಾಡಲಾದರೂ ಡಾಂಬರ್ ರಸ್ತೆ ಮೇಲೆ ಸುರಿದ ಮಣ್ಣು ಎರಡೂ ಗ್ರಾಮಗಳ ಜನರ ಆರೋಗ್ಯಕ್ಕೆ ಕುತ್ತು ತಂದಿದೆ. ರಸ್ತೆಗೆ ಸುರಿದ ಮಣ್ಣು ಅಚ್ಚುಕಟ್ಟಾಗಿ ರಸ್ತೆ ತುಂಬ ಹರಡಲಾಗಿದೆ. ಬೈಕ್‍ಗಳಲ್ಲಿ ಸಂಚರಿಸುವ ಸವಾರರಿಗೆ ಮಣ್ಣು ಬಾಯಿ, ಮೂಗು ಹಾಗೂ ಕಣ್ಣಿಗೆ ಬೀಳುತ್ತಲೇ ಇದೆ. ಬೃಹತ್ ವಾಹನ ಸಂಚರಿಸಿದರೆ ಟಾರ್ ರಸ್ತೆಯ ತುಂಬ ಮಣ್ಣು ಧೂಳು ಎದ್ದು ಕನಿಷ್ಠ 15 ನಿಮಿಷಗಳ ಕಾಲ ಯಾವುದೇ ವಾಹನ ಇಲ್ಲಿ ಸಂಚರಿಸಲಾಗದು ಎಂದು ಗ್ರಾಪಂ ಸದಸ್ಯ ಹರ್ಷನ್ ಆರೋಪಿಸಿದರು.
ಡಾಂಬರ್ ರಸ್ತೆಗೆ ಮಣ್ಣು ಸರಿಯುವ ಕೆಲಸವನ್ನು ಇದೇ ಮೊದಲು ನೋಡಿದಂತಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಮಣ್ಣು ಹಾಕುವ ಕಾಮಗಾರಿಗೆ ಬದಲು ಇಡೀ ಡಾಂಬರ್ ರಸ್ತೆಯನ್ನೇ ಮುಚ್ಚುವ ರೀತಿ ಮಣ್ಣು ಸುರಿದಿರುವುದು ಕೆಲಸಗಾರರಲ್ಲ ಎನ್ನಬೇಕಿದೆ. ಈ ಬಗ್ಗೆ ಗಮನಹರಿಸಬೇಕಾದ ಅಧಿಕಾರಿಗಳು ಸಹ ಏನೋ ಗೊತ್ತಿಲ್ಲದಂತೆ ಮೌನ ತೋರುತ್ತಿರುವುದು ವಿಪರ್ಯಾಸ ಎನಿಸಿದೆ. ಕಳೆದ ವಾರದಿಂದ ಎಂಜಿನಿಯರ್‍ಗೆ ಪೋನ್ ಕರೆ ಮಾಡಿದರೂ ರಸ್ತೆಯ ಮೇಲಿನ ಮಣ್ಣು ತೆರವು ಮಾಡಿಲ್ಲ. ಪೂರ್ತಿ ಮೂರು ಕಿಮೀ ರಸ್ತೆಗೆ ಮಣ್ಣು ಸುರಿದ ಹಿನ್ನಲೆ ಅನುಮಾನಕ್ಕೂ ಕಾರಣವಾಗುತ್ತಿದೆ. ಗುಣಮಟ್ಟದ ಪರಿಶೀಲನೆ ನಡೆದಿತ್ತೇ ಎಂಬುದು ಅಧಿಕಾರಿಗಳು ತಿಳಿಸಬೇಕಿದೆ. ಈ ಕೂಡಲೇ ಸರಿಪಡಿಸದಿದ್ದಲ್ಲಿ ನೂರಾರು ಗ್ರಾಮಸ್ಥರು ಇದೇ ರಸ್ತೆ ತಡೆ ನಡೆಸಿ ಪ್ರತಿಭಟಿಸಲಿದ್ದಾರೆ ಎಂದು ಗ್ರಾಪಂ ಸದಸ್ಯ ಜೆ.ಎಂ.ನರಸಿಂಹಮೂರ್ತಿ ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ