ಗುಬ್ಬಿ :
ಪಟ್ಟಣ ಪಂಚಾಯಿತಿಯ ಎಲ್ಲಾ ಸದಸ್ಯರು ಒಟ್ಟುಗೂಡಿ ವೈಯಕ್ತಿಕ ಕಾರಣಗಳನ್ನು ಬದಿಗೊತ್ತಿ ಪಟ್ಟಣದ ಅಭಿವೃದ್ಧಿಯ ಕಡೆ ಗಮನ ಹರಿಸಿ ಪಟ್ಟಣ ಪಂಚಾಯಿತಿಯನ್ನು ಉನ್ನತ ದರ್ಜೆಗೆ ಏರಿಸುವತ್ತ ಗಮನಹರಿಸಬೇಕು ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ 2021-22 ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಿ ಠರಾವು ಪಾಸು ಮಾಡುವುದು ಸದಸ್ಯರ ಕೆಲಸ ಅದನ್ನು ಬದಲಾಯಿಸಲು ಮುಖ್ಯಾಧಿಕಾರಿಗೆ ಯಾವುದೇ ಅಧಿಕಾರವು ಇಲ್ಲ. ಏನಾದರೂ ಹೆಚ್ಚುಕಮ್ಮಿಯಾದರೆ ಅದಕ್ಕೆ ಮುಖ್ಯಾಧಿಕಾರಿಗಳೆ ಜವಾಬ್ದಾರರಾಗಬೇಕಾಗುತ್ತದೆ ಎಂದು ನೇರವಾಗಿ ತಿಳಿಸಿದರು. ಬಜೆಟ್ ಮಂಡನೆ ಸಭೆಯ ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಸಿ.ಮೋಹನ್ ಮಾತನಾಡಿ ಪಟ್ಟಣದ ಹೊಸ ಬಡಾವಣೆ ನಿರ್ಮಾಣದಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಮಾಡಿರುವ ಠರಾವು ಸರಿಯಾಗಿಲ್ಲ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ವರದಿಯ ಬಗ್ಗೆ ಸದಸ್ಯರಿಗೆ ಯಾವುದೇ ಮಾಹಿತಿಯನ್ನು ಅಧ್ಯಕ್ಷರುಗಳು ನೀಡಿಲ್ಲ ಎಂದು ಬೇಸರವ್ಯಕ್ತಪಡಿಸಿದ ಅವರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮನೆಯ ಪರವಾನಗಿ ನೀಡುವ ವಿಚಾರದಲ್ಲಿ ಅಕ್ರಮ ಮತ್ತು ಅವ್ಯವಹಾರ ಮಾಡುತ್ತಿದ್ದಾರೆ. ನಿವೇಶನ ಖರೀದಿಸಿರುವವರು ಮನೆ ಕಟ್ಟಿಕೊಳ್ಳಲು ಪರವಾನಗಿ ಸಿಗದೆ ಪರದಾಡುತ್ತಿದ್ದಾರೆ. ಟೌನ್ ಪ್ಲಾನ್ ಸರಿಯಾಗಿಲ್ಲ ಎಂಬ ನೆಪವೊಡ್ಡಿ ಅಧಿಕಾರಿಗಳು ನಿವೇಶನದ ಮಾಲೀಕರನ್ನು ಕಚೇರಿಗೆ ಅಲೆದಾಡಿ ಸುತ್ತಿರುವುದು ಖಂಡನೀಯ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಕುಮಾರ್ ಮಾತನಾಡಿ ಅಧಿಕಾರಿಗಳು ಪಟ್ಟಣದ ವಾರ್ಡಗಳ ಕೆಲಸವನ್ನು ಮಾಡಲು ಬೇಧಭಾವ ಮಾಡುತ್ತಿದ್ದಾರೆ. ಸಭೆಯಲ್ಲಿ ಚರ್ಚಿಸಿದ ವಿಷಯಗಳನ್ನು ಕಾರ್ಯಗತಮಾಡದೆ ಅವರಿಗೆ ಬೇಕಾದವರ ಕೆಲಸಗಳನ್ನು ಮಾಡಿಕೊಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶಾಸಕರು ಸಭೆಯ ಮಧ್ಯದಲ್ಲೇ ತುರ್ತು ಕೆಲಸದ ನಿಮಿತ್ತ ಹೊರಟಾಗ ಅವರ ಜೊತೆಯಲ್ಲಿಯೇ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ಮಾಡಿದ ಬಗ್ಗೆ ಜೆಡಿಎಸ್ ಸದಸ್ಯರು ಪ್ರತಿಕ್ರಿಯಿಸುತ್ತಾ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಮೇಲೆ ಹೊಸ ಬಡಾವಣೆ ನಿರ್ಮಾಣದಲ್ಲಿ ಅವ್ಯವಹಾರ ಮಾಡಿರುವ ಬಗ್ಗೆ ಆರೋಪ ಇರುವುದರಿಂದ ಯಾವುದೇ ಕಾರಣಕ್ಕೂ ಅವರು ಬಜೆಟ್ ಮಂಡಿಸಲು ನಾವು ಸಹಕಾರ ನೀಡುವುದಿಲ್ಲ. ಆದ್ದರಿಂದ ನಾವು ಸಭಾತ್ಯಾಗ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಕಳೆದ ಸಭೆಯಲ್ಲಿ ಸದಸ್ಯರ ನಡುವೆ ಉಂಟಾದ ಘರ್ಷಣೆಗೆ ಅಧ್ಯಕ್ಷರೆ ನೇರ ಹೊಣೆ ಎಂದು ಆರೋಪಿಸಿದ ಸದಸ್ಯ ಕುಮಾರ್ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಈ ಜತೆಗೆ ಮನೆ ಕಟ್ಟಿಕೊಳ್ಳಲು ಲೈಸೆನ್ಸ್ ನೀಡುವಲ್ಲಿ ಸಲ್ಲದ ನಿಯಮ ಹೇರುತ್ತಿದ್ದಾರೆ. ನೆಲಮಹಡಿಗೆ ಅನುಮತಿ ನೀಡಿ ಈಗ ಒಂದನೇ ಮಹಡಿ ಕಟ್ಟಲು ಪರವಾನಗಿ ಸಿಗುವುದಿಲ್ಲ ಎನ್ನುತ್ತಿದ್ದಾರೆ. ಲೈಸೆನ್ಸ್‍ಗೆ ಈಗಾಗಲೇ ಫಲಾನುಭವಿಯಿಂದ 47 ಸಾವಿರ ರೂಗಳನ್ನು ಕಟ್ಟಿಸಿಕೊಳ್ಳಲಾಗಿದೆ. ಈ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಎಲ್ಲಾ ಸದಸ್ಯರು ಬಜೆಟ್ ಮೇಲಿನ ಚರ್ಚೆಯನ್ನು ಬಿಟ್ಟು ಹಿಂದಿನ ಸಭೆಯ ವಿಷಯವನ್ನು ಚರ್ಚಿಸುವುದರಲ್ಲಿ ಹೆಚ್ಚು ಕಾಲ ಚರ್ಚೆ ನಡೆಸಿದರು. ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ ಹಾಗೂ ಶಶಿಧರ್ ಕೂಡ ಅಧ್ಯಕ್ಷರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಿದರು. ಇವರೆಲ್ಲರನ್ನೂ ಸಮಾಧಾನಪಡಿಸುವ ಪ್ರಯತ್ನ ಮಾಡುವಲ್ಲಿ ಸದಸ್ಯರಾದ ಜಿ.ಆರ್.ಶಿವಕುಮಾರ್ ಮತ್ತು ಮಹಮ್ಮದ್‍ಸಾಧಿಕ್ ಮುಂದಾದರು. ಬಜೆಟ್ ಮಂಡನೆ ವಿಷಯದ ಬಗ್ಗೆ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಮಾತನಾಡಿ ಬಜೆಟ್ ಮಂಡನೆ ಮಾಡಲು ಅಗತ್ಯವಿರುವ ಮೂರನೇ ಒಂದು ಭಾಗದಷ್ಟು ಸದಸ್ಯರು ಉಪಸ್ಥಿತರಿದ್ದರು. ಹಾಗಾಗಿ ನಾನು 2021-22ನೇ ಸಾಲಿನ ಜಮಾ ಖರ್ಚು ಕಳೆದು ಒಟ್ಟು 16.73 ಲಕ್ಷ ಉಳಿತಾಯ ಬಜೆಟ್‍ನ್ನು ಮಂಡಿಸಿದ್ದೇನೆ. ಪಟ್ಟಣದ ಎಲ್ಲಾ ನಡಾವಣೆಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಧ್ಯೇಯ ಎಂದು ತಿಳಿಸಿದ ಅವರು ನನ್ನ ಮೇಲೆ ವೈಯಕ್ತಿಕವಾಗಿ ಬೇಸರ ಪಟ್ಟುಕೊಂಡಿರುವ ಸದಸ್ಯರೊಡನೆ ಮಾತನಾಡಿ ಉತ್ತಮ ವಾತಾವರಣವನ್ನು ಕಲ್ಪಿಸಿಕೊಂಡು ಪಟ್ಟಣದ ಅಭಿವೃದ್ಧಿಯನ್ನು ಮಾಡಲಾಗುವುದು ಅವರು ಎಂದು ತಿಳಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಕೆ.ಮಹಾಲಕ್ಷೀ, ಸದಸ್ಯರಾದ ರೇಣುಕಾಪ್ರಸಾದ್, ಶೌಕತ್ ಆಲಿ, ಮಂಗಳಮ್ಮ, ಶ್ವೇತ, ಸವಿತ, ಶಶಿಕಲಾ, ಮುಖ್ಯಾಧಿಕಾರಿ ಯೋಗೇಶ್, ಸಿಬ್ಬಂದಿ ಪ್ರೀತಂ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
