ಗುಬ್ಬಿ : ನ್ಯಾಯಾಲಯದ ಆದೇಶವಿದ್ದರೂ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳು

 ಗುಬ್ಬಿ :

      ಅಪರೂಪದ ಬಾವಲಿ ಹಕ್ಕಿ ಸಂಕುಲ ಉಳಿಸಲು ಅವುಗಳ ವಾಸಸ್ಥಾನವಾದ ಎರಡು ಬೃಹತ್ ಮರಗಳನ್ನು ಕಡಿಯದಂತೆ ನ್ಯಾಯಾಲಯದ ಆದೇಶವಿದ್ದರೂ ಹಠಕ್ಕೆ ಬಿದ್ದಂತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮರ ಕಡಿಯುವ ಸಲುವಾಗಿ ಸರ್ವೆ ಮಾಡುವ ನೆಪದಲ್ಲಿ ಗ್ರಾಮಸ್ಥರಲ್ಲಿ ಗುಂಪು ಹುಟ್ಟು ಹಾಕುತ್ತಿರುವ ಕಾರಣ ದಿಢೀರ್ ಪ್ರತಿಭಟನೆ ನಡೆಸಿ ಮರ ಕಡಿಯದಂತೆ ಒತ್ತಾಯಿಸಿದ ಘಟನೆಯು ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಪನಹಳ್ಳಿ ಬಳಿ ನಡೆಯಿತು.

      ಹೆದ್ದಾರಿ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಸೋಪನಹಳ್ಳಿ ಬಳಿಯ ಎರಡು ಬೃಹತ್ ಮರಗಳು ಸುಮಾರು ಐದು ಸಾವಿರ ಬಾವಲಿ ಹಕ್ಕಿಗಳ ವಾಸಸ್ಥಳವಾಗಿರುವ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿತ್ತು. ಅರಣ್ಯ ಇಲಾಖೆಗೂ ಸಹ ಈ ಅಪರೂಪದ ಸಂಕುಲ ಉಳಿಸಲು ಮನವಿ ಮಾಡಿದ್ದ ಗ್ರಾಮಸ್ಥರು ಇಲ್ಲಿನ ಈ ಮರಗಳನ್ನು ಪೂಜೆ ಮಾಡುವ ತಮ್ಮ ಧಾರ್ಮಿಕ ಭಾವನೆಯನ್ನೂ ಸಹ ಹಂಚಿಕೊಂಡಿದ್ದರು ಆ ಸಮಯದಲ್ಲಿ ಈ ಮರಗಳನ್ನು ಉಳಿಸುವ ಮಾತುಗಳಾಡಿದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕಳೆದ ಆರು ತಿಂಗಳ ಹಿಂದೆ ಮರಗಳನ್ನು ಕಡಿದು ರಸ್ತೆ ನಿರ್ಮಾಣ ಮಾಡಲು ಮುಂದಾದರು ಅಂದಿನಿಂದ ವಿರೋಧವನ್ನೇ ಎದುರಿಸಿದ ಅಧಿಕಾರಿಗಳು ಕೆಲ ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

     ಅರಣ್ಯ ಇಲಾಖೆ ಸಿಬ್ಬಂದಿ ಜಾಣ ಮೌನ ವಹಿಸಿರುವ ಕಾರಣ ರಸ್ತೆ ಗುತ್ತಿಗೆದಾರರು ಬಾವಲಿ ಹಕ್ಕಿಗಳ ಮಾರಣಹೋಮಕ್ಕೆ ಮುಂದಾಗಿದ್ದರು ಆರು ತಿಂಗಳ ಹಿಂದೆ ಗ್ರಾಮಸ್ಥರ ವಿರೋಧದ ಹಿನ್ನಲೆ ತಡರಾತ್ರಿ ಸದ್ದಿಲ್ಲದೆ ಆಗಮಿಸಿ ಕ್ಷಣಾರ್ಧದಲ್ಲಿ ಮರದ ಒಂದು ಕೊಂಬೆ ಧರೆಗುರುಳಿಸಿದ್ದರು.ಅಲ್ಲಿದ್ದ ಸಾವಿರಾರು ಬಾವಲಿಗಳು ತಮ್ಮ ವಾಸಸ್ಥಾನಕ್ಕೆ ಚ್ಯುತಿ ಬಂದ ಕಾರಣ ದಿನವಿಡೀ ಆಕಾಶದಲ್ಲೇ ಹಾರಾಡಿ ಕರ್ಕಶವಾಗಿ ಕೂಗಿ ತಮ್ಮ ಆಕ್ರಂದನವನ್ನು ಅಲ್ಲಿಯೇ ಸುತ್ತಿ ಅಳಲು ತೋಡಿಕೊಂಡವು ಅವುಗಳ ಅರಚಾಟಕ್ಕೆ ಕರಳು ಕಿತ್ತು ಬರುತ್ತಿತ್ತು ಎಂದು ಜಿ.ಪಂ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರಬಾಬು ಆಕ್ರೋಶ ಹೊರಹಾಕಿದರು.

      ಸ್ಥಳಕ್ಕೆ ಧಾವಿಸಿದ ಹೆದ್ದಾರಿ ಪ್ರಾದಿಕಾರಿದ ಅಧಿಕಾರಿಗಳಾದ ಯಶಸ್ವಿನಿ ಮತ್ತು ಸಿದ್ದರಾಮಪ್ಪ ಪ್ರತಿಭಟನಾ ನಿರತರೊಂದಿಗೆ ಚರ್ಚಿಸಿ ರಸ್ತೆ ಅಗಲೀಕರಣ ಬಗ್ಗೆ ಆಲೋಚಿಸಿ ಈ ಮರಗಳನ್ನು ಕಡಿಯಲು ಸೂಚಿಸಿಲ್ಲ. ಈ ಮರಗಳು ಹಾಗೇಯೆ ಉಳಿಸುವ ಪ್ರಯತ್ನ ನಮ್ಮದಾಗಿದೆ ಎಂದು ತಿಳಿಸಿ ಪರಿಸ್ಥಿತಿ ತಿಳಿಗೊಳಿಸಿದರು. ದಾರ್ಮಿಕ ಭಾವನೆಯ ಈ ಮರಗಳನ್ನು ಕಡಿಯುವ ಚಿಂತನೆ ಮಾಡಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿ ಸದ್ಯಕ್ಕೆ ಪ್ರತಿಭಟನೆ ಹಿಂಪಡೆದರು ಈ ಸಂದರ್ಭದಲ್ಲಿ ರೈತ ಸಂಘದ ಮಹದೇವಯ್ಯ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap