ನ್ಯಾಯಬೆಲೆ ಅಂಗಡಿಗಳ ಕಮಿಷನ್ 48 ಕೋಟಿ ರೂ. ಬಿಡುಗಡೆ

 ಗುಬ್ಬಿ :

     ಆಹಾರ ಇಲಾಖೆಯ ಅಧಿಕಾರಿಗಳಿಂದ ಆಗಿದ್ದ ನೂನ್ಯತೆ ಸರಿಪಡಿಸಿ 48 ಕೋಟಿ ರೂ.ಗಳ ನ್ಯಾಯಬೆಲೆ ಅಂಗಡಿಗಳ ಕಮಿಷನ್ ಹಣ ಬಿಡುಗಡೆ ಮಾಡಲಾಗಿದೆ ಎಂದು ಆಹಾರ ನಾಗರೀಕ ಸರಬರಾಜು ಇಲಾಖೆಯ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.

      ಪಟ್ಟಣದ ಟಿಎಪಿಸಿಎಂಎಸ್ ಕಚೇರಿಗೆ ಸೋಮವಾರ ಭೇಟಿ ನೀಡಿ ಡಾಟಾ ಎಂಟ್ರಿ ಆಪರೇಟರ್‍ಗಳ ಬೇಡಿಕೆಯ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಅವರು ಈ ಹಿಂದೆ ಅಧಿಕಾರಿಗಳಿಂದ ಆಗಿದ್ದ ಲೋಪ ಸರಿಪಡಿಸಲು ಸಮಯ ತೆಗೆದುಕೊಳ್ಳಲಾಗಿತ್ತು. ಎಲ್ಲವೂ ಸರಿಪಡಿಸಿ ಹಣಕಾಸು ಇಲಾಖೆ ಸಮ್ಮತಿ ಸೂಚಿಸಿ ಆಹಾರ ಇಲಾಖೆಗೆ ಸಂಬಂಧಿಸಿದ ಎಲ್ಲಾ ಹೊಸ ಯೋಜನೆಗೆ ಅಸ್ತು ದೊರೆಕಿದೆ ಎಂದರು.

      ಆಹಾರ ಇಲಾಖೆಯಲ್ಲಿ ಕಂಪ್ಯೂಟರೀಕರಣಗೊಳಿಸಿದ ಬಳಿಕ ಚುರುಕಿನ ಕೆಲಸ ನಡೆದಿದೆ. ಆದರೆ ಕೆಲ ತಾಂತ್ರಿಕ ಸಮಸ್ಯೆ ಕೂಡಾ ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಕೂಲಂಕುಷ ಪರಿಶೀಲನೆ ನಡೆಸಿ ಆಧುನಿಕತೆಗೆ ತಕ್ಕಂತೆ ಆಹಾರ ಪಡಿತರ ವಿತರಣೆ ಮಾಡಲಾಗುವುದು. ಕೊರೋನಾ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿದ ಆಹಾರ ಪಡಿತರ ವಿತರಣೆ ಸಂದರ್ಭದಲ್ಲಿ ಎಲ್ಲಾ ಅಧಿಕಾರಿಗಳ ಸಹಕಾರ ದೊರೆಕಿದೆ ಎಂದ ಅವರು ಮುಂದಿನ 15 ದಿನಗಳಲ್ಲಿ ತುಮಕೂರು ಜಿಲ್ಲೆಯ ವಿವಿದೆಡೆ ಪ್ರವಾಸ ಕೈಗೊಂಡು ಈ ಭಾಗದ ಸಮಸ್ಯೆ ಆಲಿಸುವುದಾಗಿ ಭರವಸೆ ನೀಡಿದರು.

      ಶಿರಾ ಮತ್ತು ಆರ್‍ಆರ್ ನಗರ ಉಪಚುನಾವಣೆಯಲ್ಲಿ ಸ್ಪಷ್ಟ ಗೆಲುವು ಬಿಜೆಪಿಗೆ ದೊರೆಯಲಿದೆ. ಸಂಪ್ರದಾಯದಂತೆ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷಕ್ಕೆ ಮತದಾರ ಒಲವು ತೋರುತ್ತಾನೆ. ಈ ಜತೆಯಲ್ಲಿ ಬಿಜೆಪಿಯ ಜನಪರ ಕೆಲಸಗಳು ಮನಸೆಳೆದಿವೆ. ಈ ನಿಟ್ಟಿನಲ್ಲಿ ಈ ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ವಿಜಯಮಾಲೆ ದೊರೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಆಹಾರ ಇಲಾಖೆಯ ಡಾಟಾ ಎಂಟ್ರಿ ಆಪರೇಟರ್‍ಗಳ ಕೆಲಸ ಖಾಯಂಗೊಳಿಸುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ರಾಜ್ಯದ 240 ಮಂದಿ ಆಪರೇಟರ್‍ಗಳ ಬಗ್ಗೆ ಈಗಾಗಲೇ ಇಲಾಖೆಯಿಂದ ಮಾಹಿತಿ ಪಡೆದಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

      ಇದೇ ಸಂದರ್ಭದಲ್ಲಿ ಡಾಟಾ ಎಂಟ್ರಿ ಆಪರೇಟರ್‍ಗಳ ಸಂಘದ ವತಿಯಿಂದ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ಟಿಎಪಿಸಿಎಂಎಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೆಟ್ಟದಹಳ್ಳಿ ಸಮೀಪದಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದರು.

      ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಎಸ್.ಕಿಡಿಗಣಪ್ಪ, ನಿರ್ಧೇಶಕರಾದ ಟಿ.ಎಸ್.ಆಂಜಿನಪ್ಪ, ಪರಮಣ್ಣ, ಕಾರ್ಯದರ್ಶಿ ಶ್ರೀನಾಥ್, ಶ್ರೀಧರ್, ಲವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link