ಗುಬ್ಬಿ :
ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ತಾಲ್ಲೂಕಿನಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಹೇರೂರಿನಲ್ಲಿ 102 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ನ್ನು ಪ್ರಾರಂಭಿಸಲಾಗುತ್ತಿದ್ದು ರೋಗಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ತಾಲ್ಲೂಕು ಆಡಳಿತ ಕಂದಾಯ ಇಲಾಖೆ ಮತ್ತು ಪಟ್ಟಣ ಪಂಚಾಯ್ತಿ ವಿಶೇಷ ಒತ್ತು ನೀಡಲಾಗುತ್ತಿದೆ.
ಕೊರೋನ ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತಿತ್ತು ಆದರೆ ಇದೀಗ ಗ್ರಾಮೀಣ ಭಾಗಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ರೋಗ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತ ಹಲವು ಹಂತದ ಕ್ರಮಗಳನ್ನು ಕೈಗೊಳ್ಳುತ್ತಿದೆ ಆದರೆ ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳುತ್ತಿದೆ ತಾಲ್ಲೂಕಿನ ಹೇರೂರಿನಲ್ಲಿ ಪ್ರಾರಂಭಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾಗುವ ಪಾಸಿಟೀವ್ ಪ್ರಕರಣಗಳ ರೋಗಿಗಳನ್ನು ದಾಖಲು ಮಾಡಿಕೊಂಡು ಪ್ರತಿ ದಿನ ಸೂಕ್ತವಾದ ಚಿಕಿತ್ಸೆ ನೀಡುವುದರ ಜೊತೆಗೆ ರೋಗಿಯ ರೋಗ ಲಕ್ಷಣದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ. ಅಲ್ಲದೆ ಪ್ರತಿ ರೋಗಿಗೂ ಡಯಟ್ ಪುಡ್ ಬೆಳಗ್ಗೆ ತಿಂಡಿ, ಮದ್ಯಾನ್ನ ಊಟ, ಸಂಜೆ ಊಟ ಸೇರಿದಂತೆ ಸ್ನಾನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಅಲ್ಲದೆ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದು ತಾಲ್ಲೂಕು ವೈದ್ಯಾಧಿಕಾರಿ ಡಾ: ಬಿಂದೂಮಾದವ್ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 16 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಪ್ರಾರಂಭಿಸಲಾಗಿತ್ತು ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೀಗ 36 ಬೆಡ್‍ಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ವೆಂಟಿಲೇಷನ್ ಮತ್ತು ಐಸಿಯೂ ವ್ಯವಸ್ಥೆಗಳಿದ್ದು ರೋಗ ತೀವ್ರ ತರವಾಗಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೋಮ್ ಐಸೋಲೇಷನ್ ನಲ್ಲಿದ್ದು ಕೊಂಡು ಅಗತ್ಯ ಔಷಧಿ ಸೇವಿಸುತ್ತಿದ್ದಾರೆ ಅದರೆ ಮತ್ತೆ ಕೆಲವರು ಭಯದಿಂದಲೆ ಆಸ್ಪತ್ರೆ ಬೇಕು ಆಮ್ಲಜನಕ ಬೇಕು ಎಂದು ಹೋಗುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಪರದಾಟ ನಡೆಯುವಂತಾಗಿದೆ. ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಮಾಸ್ಕ್ ಧರಿಸುವುದು, ಸ್ಯಾನಿಟೈಸಿಂಗ್ ಬಳಕೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಿದ್ದು ಈ ಬಗ್ಗೆ ಪ್ರತಿಯೊಬ್ಬರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ತಾಲ್ಲೂಕಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಸೋಂಕಿನ ಜೊತೆಗೆ ಸಾವಿನ ಪ್ರಮಾಣವು ಹೆಚ್ಚಾಗುತ್ತಿರುವುದು ಆತಂಕವನ್ನು ಉಂಟುಮಾಡುತ್ತಿದೆ. ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದರೂ, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ನೀಡಿದ್ದ 6 ವೆಂಟಿಲೇಟರ್‍ಗಳು ತಾಂತ್ರಿಕ ತರಬೇತಿ ಪಡೆದ ಸಿಬ್ಬಂದಿ ವರ್ಗ ಇಲ್ಲದೆ ಉಪಯೋಗಕ್ಕೆ ಬಾರದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದು ಈ ವ್ಯವಸ್ಥೆಯನ್ನು ಸರಿ ಪಡಿಸಬಹುದಾಗಿದ್ದಾರೂ ಇದುವರೆಗೂ ಅಂತಹ ಯಾವುದೆ ಪ್ರಯತ್ನ ನಡೆದಿರುವಂತೆ ಕಾಣುತ್ತಿಲ್ಲ ಹೀಗಾಗಿ ಲಕ್ಷಾಂತರ ರೂ ಹಣಕೊಟ್ಟು ಖರೀದಿಸಿದ ವೆಂಟಿಲೇಟರ್‍ಗಳು ಉಪಯೋಗಕ್ಕೆ ಬಾರದಂತಾಗಿವೆ ಕೋವಿಡ್‍ನ ಎರಡನೇ ಅಲೆಯು ತಾಲ್ಲೂಕಿನಲ್ಲಿ ತೀವ್ರತರವಾಗಿ ಹರಡುತ್ತಿದ್ದು ಜಿಲ್ಲೆಯಾದ್ಯಂತ ಎಲ್ಲೂ ವೆಂಟಿಲೇಟರ್‍ಗಳು ದೊರಕದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದಲ್ಲಿ ತುರ್ತು ಸಿಬ್ಬಂದಿಯನ್ನು ನೇಮಿಸಿ ಈ ವೆಂಟಿಲೇಟರ್‍ಗಳ ಉಪಯೋಗವನ್ನು ಪಡೆಯ ಬಹುದಿತ್ತು. ಕೊನೆಯ ಪಕ್ಷ ತಾಲ್ಲೂಕು ಆಸ್ಪತ್ರೆಯಲ್ಲಿರುವ ಈ ವೆಂಟಿಲೇಟರ್‍ಗಳನ್ನು ಜಿಲ್ಲಾಸ್ಪತ್ರೆಗಾದರೂ ಕೊಂಡೊಯ್ದು ರೋಗಿಗಳ ಉಪಯೋಗಕ್ಕೆ ಬಳಸಬಹುದಿತ್ತು. ಆದರೆ ಅಂತಹ ಪ್ರಯತ್ನ ನಡೆದಂತೆ ಕಾಣುತ್ತಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತುರ್ತು ಕ್ರಮಕೈಗೊಳ್ಳುವ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು. ತಾಲ್ಲೂಕು ಆಡಳಿತ ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡು ಕ್ರಮ ವಹಿಸಬೇಕಾದ ಅಗತ್ಯವಿದೆ. ಸರ್ಕಾರವು ವೆಂಟಿಲೇಟರ್‍ಗಳನ್ನೆ ನೀಡಿದೆ. ಆದರೆ ಅದಕ್ಕೆ ತಕ್ಕ ಸಿಬ್ಬಂದಿಯನ್ನು ನೀಡದೆ ವೆಂಟಿಲೇಟರ್‍ಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ತಕ್ಕ ಸಿಬ್ಬಂದಿಯನ್ನು ನೀಡಿದರೆ ನಾವು ಅವುಗಳನ್ನು ಬಳಸಿಕೊಳ್ಳಲು ಸಿದ್ದರಿದ್ದೇವೆ ಎನ್ನುತ್ತಾರೆ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು.
ಕೋವಿಡ್ ಪಾಸಿಟೀವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೇರೂರಿನಲ್ಲಿ ಪ್ರಾರಂಭಿಸುತ್ತಿರುವ ಕೋವಿಡ್ ಕೇರ್ ಸೆಂಟರ್‍ಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಪಟ್ಟಣ ಪಂಚಾಯ್ತಿಯಿಂದ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ತಿಳಿಸಿದರು.
ಕಂದಾಯ ನಿರೀಕ್ಷರಾದ ರಮೇಶ್ ಕುಮಾರ್ ಮಾತನಾಡಿ ಹೇರೂರಿನಲ್ಲಿ ಪ್ರಾರಂಭಿಸ ಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ 102 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದ್ದು ಈಗಾಗಲೆ ಎಲ್ಲಾ ರೀತಿಯ ಅಗತ್ಯ ಸೌಲಭ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಇನ್ನು ವೈಧ್ಯಕೀಯ ಸಾಮಗ್ರಿಗಳನ್ನು ಆಳವಡಿಸುವುದು ಮಾತ್ರ ಬಾಕಿ ಇದ್ದು ಇನ್ನೆರಡು ದಿನಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ರೋಗಿಗಳನ್ನು ದಾಖಲಿಸಲು ಕ್ರಮವಹಿಸಲಾಗುವು ದೆಂದು ತಿಳಿಸಿದರು.
ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳು ನೂತನವಾಗಿ ಪ್ರಾರಂಬಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆಗಳ ಪರಿಶೀಲನೆಯನ್ನು ಈ ಸಂದರ್ಭದಲ್ಲಿ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ