ತುಮಕೂರು :
ಅನುಮತಿಯನ್ನು ಪಡೆಯದೆ ಸಾಗುವಳಿ ಭೂಮಿಯಲ್ಲಿ ಇಟ್ಟಿಗೆ ಕಾರ್ಖಾನೆಗೆ ಟ್ರಾಕ್ಟರ್ ಮೂಲಕ ಮಣ್ಣು ಸಾಗಿಸಲಾಗುತ್ತಿದ್ದು ಇದರಿಂದ ರಸ್ತೆಯಲ್ಲಿ ಮಣ್ಣು ಚೆಲ್ಲಿ ವಾಹನ ಸವಾರರಿಗೆ ತೀವ್ರತರ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಕೋಣನಕಲ್ಲು ಸಮೀಪ ಉಳುಮೆ ಮಾಡುವ ಭೂಮಿಯಲ್ಲಿ ಜೆಸಿಬಿ ಯಂತ್ರದ ಮೂಲಕ ಆಳದವರೆಗೆ ಮಣ್ಣು ತೆಗೆಯಲಾಗಿದ್ದು. ಮಳೆ ಬಂದು ನೀರು ನಿಂತರೆ ಅಕ್ಕ ಪಕ್ಕದ ಜಮೀನುಗಳಿಗೂ ತೊಂದರೆ ಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಂಬಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮಣ್ಣು ತೆಗೆಯದಂತೆ ಅಗತ್ಯ ಎಚ್ಚರಿಕೆ ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಓಡಾಡುವುದಕ್ಕೆ ತೊಂದರೆ ಯಾಗುವುದರ ಜತೆಗೆ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಸಣ್ಣ ಪುಟ್ಟ ಗಾಯ ಮಾಡಿಕೊಂಡು ನೋವು ಅನುಭವಿಸುತ್ತಿರುವುದು ಸಾಮಾನ್ಯವಾಗಿದೆ. ರಸ್ತೆಯಲ್ಲಿ ಈ ರೀತಿ ಮಣ್ಣು ತುಂಬಿದ ಟ್ರಾಕ್ಟರ್‍ಗಳು ಓಡಾಡಿ ರಸ್ತೆಯಲ್ಲಿ ಮಣ್ಣು ಬಿದ್ದು ರಸ್ತೆ ಹಾಳಾಗಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಉಸಿರಾಟದ ತೊಂದರೆಯನ್ನು ಅನುಭವಿಸುವಂತಾಗಿದೆ ಎಂದು ಕೋಣನಕಲ್ಲು ಗ್ರಾಮಸ್ಥರು ತಿಳಿಸಿದ್ದಾರೆ.
ಆಳವಾಗಿ ಮಣ್ಣು ತೆಗೆಯುವುದರಿಂದ ಅಕ್ಕಪಕ್ಕದ ಜಮೀನಿನಲ್ಲಿ ನೀರಿನ ಬಸಿ ಉಂಟಾಗಿ ಸುತ್ತ ಮುತ್ತಲಿನ ಗಿಡ ಮರಗಳು ಹಾನಿಗೊಳಗಾಗುತ್ತವೆ. ಜತೆಗೆ ಈ ಆಳವಾದ ಗುಂಡಿಯು ರಸ್ತೆ ಪಕ್ಕದಲ್ಲಿದ್ದು ವಾಹನ ಸವಾರರಿಗೆ ಹಾಗೂ ದನಗಳಿಗೆ ತೀವ್ರತರ ತೊಂದರೆಯಾಗುತ್ತದೆ. ಎಂದು ಊರಿನ ಗ್ರಾಮಸ್ಥರು ತಿಳಿಸುತ್ತಾರೆ.
ಕೋಣನಕಲ್ಲು ಗ್ರಾಮದ ಹಿಡುವಳಿ ಭೂಮಿಯಲ್ಲಿ ಅಕ್ರಮವಾಗಿ 3 ಆಡಿಗಿಂತ ಹೆಚ್ಚು ಆಳವಾಗಿ ಮಣ್ಣು ತೆಗೆಯುತ್ತಿದ್ದಾರೆ. ಎಂಬ ಮಾಹಿತಿ ತಿಳಿದ ಕೂಡಲೆ ನಮ್ಮ ಸಿಬ್ಬಂಧಿಯಾದ ಕಂದಾಯ ನೀರಿಕ್ಷಕ ಹಾಗೂ ಗ್ರಾಮ ಲೆಕ್ಕಿಗರನ್ನು ಸ್ಥಳಕ್ಕೆ ಕಳುಹಿಸಿ ಮಣ್ಣು ತುಂಬುವುದನ್ನು ನಿಲ್ಲಿಸಲಾಗಿದ್ದು, ಮತ್ತೆ ಮಣ್ಣು ತುಂಬಿದರೆ ನಿರ್ದಾಕ್ಷೀಣ್ಯವಾಗಿ ಶಿಸ್ತುಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಎಂದು ಎಚ್ಚರಿಕೆ ನೀಡಿದ್ದೇನೆ ಎಂದು ಪ್ರಭಾರ ತಹಸೀಲ್ದಾರ್ ಶಶಿಕಲಾ ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ