ಗುಬ್ಬಿ :
ತಾಲ್ಲೂಕಿನಲ್ಲಿ ಕೋವಿಡ್ ಪಾಸಿಟೀವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕ್ಕೆ ಯಾಗುತ್ತಿದ್ದು ತಾಲ್ಲೂಕಿನಲ್ಲಿ ಆತಂಕ ಮೂಡಿಸಿದೆ ಈ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಹೇರೂರಿನಲ್ಲಿ 102 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್‍ನ್ನು ಇಂದಿನಿಂದ ಅಧೀಕೃತವಾಗಿ ಪ್ರಾರಂಭಿಸಲಾಗುತ್ತಿದ್ದು. ಕೊರೋನಾ ರೋಗಿಗಳನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ:ಬಿಂದೂಮಾದವ್ ತಿಳಿಸಿದರು.
ಕೊರೋನ ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿ ಪಟ್ಟಣ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು ಆದರೆ ಇದೀಗ ಗ್ರಾಮೀಣ ಭಾಗಗಳಲ್ಲಿಯೂ ಹೆಚ್ಚಿನ ಪ್ರಮಾಣಗಳು ಕಾಣಿಸಿಕೊಳ್ಳುತ್ತಿದ್ದು. ರೋಗ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಆಡಳಿತದೊಂದಿಗೆ ಹಲವು ಹಂತದ ಜಾಗೃತಿ ಕ್ರಮಗಳನ್ನು ಕೈಗೊಂಡಿದ್ದು. ಆದರೆ ಕೋವಿಡ್ ಎರಡನೆ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಆರೋಗ್ಯ ಇಲಾಖೆ ಕೈಗೊಳ್ಳುತ್ತಿದೆ. ಎಂದು ತಿಳಿಸಿದ ಅವರು ಹೇರೂರಿನಲ್ಲಿ ಪ್ರಾಂರಭಿಸಲಾಗುತ್ತಿರುವ ಕೋವಿಡ್ ಕೇರ್ ಸೆಂಟರ್‍ನಲ್ಲಿ ದಾಖಲಾಗುವ ಪಾಸಿಟೀವ್ ಪ್ರಕರಣದ ರೋಗಿಗಳನ್ನು ದಾಖಲು ಮಾಡಿಕೊಂಡು ಪ್ರತಿ ದಿನ ಸೂಕ್ತವಾದ ಚಿಕಿತ್ಸೆ ನೀಡುವುದರ ಜೊತೆಗೆ ರೋಗಿಯ ರೋಗ ಲಕ್ಷಣದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ. ದಾಖಲಾಗುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆ ಸೇರಿದಂತೆ ರಾತ್ರಿ ಮತ್ತು ಹಗಲು ಪಾಳಿಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ ಪ್ರತಿ ರೋಗಿಗೂ ಡಯಟ್ ಪುಡ್ ಬೆಳಗ್ಗೆ ತಿಂಡಿ, ಮದ್ಯಾನ್ನ ಊಟ, ಸಂಜೆ ಊಟ ಸೇರಿದಂತೆ ಸ್ನಾನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ದೊರೆಯುವ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗುವುದೆಂದು ತಾಲ್ಲೂಕು ವೈದ್ಯಾಧಿಕಾರಿ ಡಾ:ಬಿಂದೂಮಾದವ್ ಅವರು ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 16 ಬೆಡ್‍ಗಳ ಕೋವಿಡ್ ಆಸ್ಪತ್ರೆಯನ್ನು ಪ್ರಾಂರಭಿಸಲಾಗಿತ್ತು ರೋಗಿಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಇದೀಗ 36 ಬೆಡ್‍ಗಳಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ವೆಂಟಿಲೇಷನ್ ಮತ್ತು ಐ.ಸಿ.ಯೂ.ವ್ಯವಸ್ಥೆಗಳಿದ್ದು ರೋಗ ತೀವ್ರತರವಾಗಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೋಮ್ ಐಸೋಲೇಷನ್‍ನಲ್ಲಿದ್ದುಕೊಂಡು ಅಗತ್ಯ ಔಷಧಿ ಸೇವಿಸುತ್ತಿದ್ದಾರೆ. ಅದರೆ ಮತ್ತೆ ಕೆಲವರು ಭಯದಿಂದಲೆ ಆಸ್ಪತ್ರೆ ಬೇಕು ಆಮ್ಲಜನಕ ಬೇಕು ಎಂದು ಹೋಗುತ್ತಿರುವವರ ಸಂಖ್ಯೆಯೂ ಅಧಿಕವಾಗಿದೆ ಇದರಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲದೆ ಪರದಾಟ ನಡೆಯುವಂತಾಗಿದೆ. ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಿದ್ದು. ಈ ಬಗ್ಗೆ ಪ್ರತಿಯೊಬ್ಬರೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ