ಗುಬ್ಬಿ :
ತಾಲ್ಲೂಕಿನಾಧ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ರೋಗದಿಂದ ತತ್ತರಿಸಿರುವ ಗ್ರಾಮೀಣ ಜನತೆ ದೇವರು ಮತ್ತು ಮೂಢನಂಬಿಕೆಗಳ ಮೊರೆಹೋಗಿದ್ದಾರೆ. ಈ ಹಿಂದೆ ಪ್ಲೇಗ್, ಮಲೇರಿಯಾದಂತಹ ರೋಗಗಳು ಕಾಣಿಸಿಕೊಂಡಾಗ ಊರು ಬಿಟ್ಟು ಹೊರ ಬೀಡು ಹೋಗಿ ಅಲ್ಲಿ ಸಾಮೂಹಿಕವಾಗಿ ಅಡುಗೆ ಮಾಡಿ ದೇವರ ಪೂಜೆ ಮಾಡಿ ಊಟ ಮಾಡಿಕೊಂಡು ಸಂಜೆಯವರೆಗೆ ಹೊರಗಡೆ ಇದ್ದು ರಾತ್ರಿ ಊರಿಗೆ ಬರುತ್ತಿದ್ದರು. ಕೊರೋನಾ ಮಹಾ ಮಾರಿ ವ್ಯಾಪಕವಾಗಿ ಹರಡುತ್ತಿರುವುದರ ಜೊತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಯಗೊಂಡಿರುವ ಗ್ರಾಮೀಣ ಜನತೆ ರೋಗ ಊರಿನಿಂದ ಹೊರ ಹೋಗುವಂತೆ ದೇವರು ಮತ್ತು ಮೂಢನಂಬಿಕೆಗಳ ಮೊರೆ ಹೋಗುತ್ತಿದ್ದಾರೆ.
ನಿನ್ನೆ ಅಮಾವಾಸ್ಯೆ ಮಂಗಳವಾರವಾಗಿದ್ದರಿಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕೊರೋನಜ್ಜಿ ಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ರೋಗ ಗ್ರಾಮದಿಂದ ಹೊರ ಹೋಗಲಿ ಗ್ರಾಮದ ಜನತೆ ಆರೋಗ್ಯವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಊರ ಹೊರಗಡೆ ಬೇವಿನ ಮರದಕ್ಕೆ ಸೀರೆ ಉಡಿಸಿ ಅಲಂಕರಿಸಿ ಗ್ರಾಮದ ಎಲ್ಲಾ ಮನೆಯವರು ಒಟ್ಟಾಗಿ ಭಕ್ತಿಯಿಂದ ವಿವಿಧ ರೀತಿಯ ನೈವೇಧ್ಯಗಳನ್ನು ಮಾಡಿಕೊಂಡು ವಿಶೇಷವಾಗಿ ಪೂಜೆ ಸಲ್ಲಿಸಿ ಮಡಿಯಿಂದ ಮಾಡಿಕೊಂಡು ಬಂದಿದ್ದ ನೈವೇಧ್ಯವನ್ನು ಸಮರ್ಪಿಸಿ ಕೊರೋನಜ್ಜಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕೊರೋನಜ್ಜಿ ಹಬ್ಬವನ್ನು ಸಂಪ್ರದಾಯಿಕವಾಗಿ ಆಚರಿಸುವ ಮೂಲಕ ನಮ್ಮ ಗ್ರಾಮಕ್ಕೆ ಬಂದಿರುವ ಕೊರೋನಾ ಮಹಾಮಾರಿ ದೂರವಾಗಲಿ ಎಂದು ಕೊರೋನಜ್ಜಿಯನ್ನು ವಿಶೇಷವಾಗಿ ಪ್ರಾರ್ಥಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ