ಕೊಳ್ಳವವರಿಲ್ಲದೆ ಚಂಡು ಹೂವನ್ನು ಮಣ್ಣು ಪಾಲು ಮಾಡಿದ ರೈತ

 ಗುಬ್ಬಿ:

      ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಪ್ರಗತಿ ಪರ ರಾಮಚಂದ್ರು ಬೆಳೆದಿರುವ ಚಂಡು ಹೂವು ಲಾಕ್‍ಡೌನ್ ನಿಂದಾಗಿ ಮಾರಾಟವಾಗದ ಕಾರಣ ತೋಟವನ್ನು ಹೂವಿನ ಸಮೇತ ಟ್ರಾಕ್ಟರ್‍ನಲ್ಲಿ ಉಳುಮೆ ಮಾಡುತ್ತಿರುವುದು.

      ಕಳೆದ ವರ್ಷ ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಿ ಸುಮಾರು ಮೂರುವರೆ ಎಕರೆ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಜಾತಿಯ ಚಂಡು ಹೂಗಳು ಮಾರಾಟವಾಗದೆ ಲಕ್ಷಾಂತರ ರೂ.ನಷ್ಟ ಅನುಭವಿಸಿದ್ದ ಪಟ್ಟಣದ ಹೊರವಲಯದ ಪ್ರಗತಿಪರ ರೈತ ಜಿ.ಸಿ.ರಾಮಚಂದ್ರುಗೆ ಈ ಭಾರಿಯ ಕೊರೋನಾ ಲಾಕ್‍ಡೌನ್ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

      ಈ ಬಾರಿಯಾದರೂ ಚೆನ್ನಾಗಿ ಬೆಳೆ ಬೆಳೆದು ಹೆಚ್ಚಿನ ಹಣ ಸಂಪಾದಿಸಬಹುದೆಂಬ ಉದ್ದೇಶದಿಂದ ಸುಮಾರು ಐದು ಲಕ್ಷ ರೂ. ಖರ್ಚು ಮಾಡಿ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿರುವ ಚಂಡು ಹೂ ಇನ್ನೇನು ಕಟಾವು ಮಾಡಬೇಕೆನ್ನುವಷ್ಟರಲ್ಲಿ ಮತ್ತೆ ಲಾಕ್ ಡೌನ್ ಜಾರಿಯಾಗಿದ್ದು, ಬೆಳೆದು ಅರಳಿರುವ ಹೂವನ್ನು ಕೊಯ್ಲು ಮಾಡಲಾಗದೆ ಮತ್ತಷ್ಟು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ನಾಲ್ಕು ಎಕರೆ ಪ್ರದೇಶದಲ್ಲಿ ಸಿಂಗಾರಗೊಂಡ ತೇರಿನಂತೆ ಅರಳಿದ್ದ ಚಂಡು ಹೂ ಕೊಳ್ಳುವವರಿಲ್ಲದೆ ಬೇಸತ್ತು ಟ್ರಾಕ್ರರ್‍ನಲ್ಲಿ ಹೂ ಸಮೇತ ಉಳುಮೆ ಮಾಡಿರುವ ಘಟನೆ ನಡೆದಿದೆ.

      ಪ್ರತಿವರ್ಷವೂ ಇದೇ ಪರಿಸ್ಥಿತಿ ಎದುರಾದರೆ ರೈತರು ಜೀವನ ಸಾಗಿಸುವುದು ಹೇಗೆ ಎನ್ನುವ ಪ್ರಶ್ನೆ ರೈತ ರಾಮಚಂದ್ರು ಅವರನ್ನು ಕಾಡುತ್ತಿದೆ. ಕಳೆದ ಬಾರಿ ಸರ್ಕಾರ ಹೂ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ನೆರವು ನೀಡುವ ಯೋಜನೆ ಜಾರಿಗೊಳಿಸಿತ್ತಾದರೂ ಈವರೆಗೂ ನಷ್ಟದ ಪರಿಹಾರದ ಹಣ ರೈತರ ಕೈಸೇರಿಲ್ಲ ಎನ್ನುತ್ತಾರೆ ರೈತ ರಾಮಚಂದ್ರು. ಕಳೆದ ಬಾರಿ ಲಕ್ಷಾಂತರ ರೂ.ನಷ್ಟ ಅನುಭವಿಸಿ ಬೇಸತ್ತ ರೈತ ಈ ಬಾರಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಹೂ ಕಟಾವಿಗೆ ಬರುವಷ್ಟರಲ್ಲಿ ಮತ್ತೆ ಲಾಕ್‍ಡೌನ್ ಜಾರಿಯಾಗಿ ಬೆಳೆದು ನಿಂತಿದ್ದ ಹೂವನ್ನು ಕೆಳುವವರಿಲ್ಲದೆ ದಿನ ನಿತ್ಯ ಚಂಡು ಹೂವಿನ ತೋಟವನ್ನು ನೋಡಿ ಬೇಸತ್ತು ಟ್ರಾಕ್ಟರ್‍ನಲ್ಲಿ ಉಳುಮೆ ಮಾಡಿಸಿ ಮಣ್ಣು ಪಾಲು ಮಾಡಿದ್ದಾರೆ.

      ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಪ್ರಗತಿ ಪರ ರಾಮಚಂದ್ರು ಬೆಳೆದಿರುವ ಚಂಡು ಹೂವಿನ ತೋಟ ಕೊರೊನಾ ಲಾಕ್‍ಡೌನ್‍ನಿಂದಾಗಿ ಕಟಾವು ಮಾಡಲಾಗದೆ ಲಕ್ಷಾಂತರ ರೂ.ಬೆಲೆ ಬಾಳುವ ಚಂಡು ಹೂ ತೋಟದಲ್ಲಿ ಹಾಗೆ ಉಳಿದಿರುವುದು

      ಇತ್ತೀಚಿನ ದಿನಗಳಲ್ಲಿ ಆಳುಗಳು ಸಿಗದೆ ಕಷ್ಟಪಟ್ಟು ಭೂಮಿ ಉಳುಮೆ ಮಾಡಿಸಿ ಕಳೆ ತೆಗೆಸಿ ಲಕ್ಷಾಂತರ ರೂ.ಖರ್ಚು ಮಾಡಿ ಗೊಬ್ಬರ, ರಾಸಾಯನಿಕ ಸಿಂಪಡಣೆ ಮತ್ತು ಚಂಡು ಹೂವಿನ ಸಸಿಗಳನ್ನು ಖರೀದಿಸಿ ನಾಟಿ ಮಾಡಿಸಿದ್ದು ಇದೀಗ ಹೂಗಳು ಕೊಯ್ಲ್ಲಿಗೆ ಬಂದಿದ್ದು ಲಾಕ್‍ಡೌನ್ ನಿಂದಾಗಿ ಹೂ ಕಟಾವು ಮಾಡಿ, ಎಲ್ಲಿ ಮಾರಾಟ ಮಾಡುವುದು, ಯಾರು ಕೊಳ್ಳುತ್ತಾರೆ, ಎಂಬ ಚಿಂತೆ ಕಾಡಲಾರಂಭಿಸಿತ್ತು. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 2 ರೂ.ಗೆ ಒಂದು ಕೆಜಿಯಂತೆ ಕೇಳುತ್ತಾರೆ ಹೂ ಕೀಳಲು ಆಳುಗಳ ಖರ್ಚು, ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಸಾರಿಗೆ ವೆಚ್ಚವನ್ನು ಲೆಕ್ಕಾ ಹಾಕಿದರೆ ಹೂ ಕೀಳುವುದೇ ಬೇಡ ಎಂದು ಬೇಸತ್ತು ಉತ್ತಮವಾಗಿ ಬೆಳೆದು ನಿಂತಿದ್ದ ಚಂಡು ಹೂವಿನ ತೋಟವನ್ನು ಸಂಪೂರ್ಣವಾಗಿ ಟ್ರಾಕ್ಟರ್‍ನಲ್ಲಿ ಉಳುಮೆ ಮಾಡಿಸಿದ್ದಾರೆ ಇದರಿಂದ ಚಂಡು ಹೂ ಬೆಳೆಯಲು ಖರ್ಚುಮಾಡಿದ್ದ ಐದು ಲಕ್ಷ ರೂ.ಮಣ್ಣು ಪಾಲಾಗಿದೆ. ಸರ್ಕಾರ ಈ ಬಾರಿಯಾದರೂ ತೀವ್ರ ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತವಾದ ಪರಿಹಾರ ನೀಡುತ್ತದೆಯೆ ಎಂಬುದನ್ನು ಕಾದುನೋಡಬೇಕಾಗಿದೆ ಎನ್ನುತ್ತಾರೆ ನೊಂದ ರೈತ ರಾಮಚಂದ್ರು.

      ಲಾಕ್‍ಡೌನ್‍ನಿಂದಾಗಿ ಮದುವೆ, ಜಾತ್ರೆ ಸೇರಿದಂತೆ ಇತೆರೆ ಶುಭ ಕಾರ್ಯಗಳು ನಿಂತುಹೋಗಿದ್ದು ಹೊರ ರಾಜ್ಯಗಳಿಗೆ ಕಳುಹಿಸಲು ಸಾಧ್ಯವಾಗದೆ ಕಷ್ಟಪಟ್ಟು ಬೆಳೆದ ಚಂಡು ಹೂವನ್ನು ನೋಡಿಕೊಂಡು ಬದುಕು ಸಾಗಿಸುವಂತಾಗಿತ್ತು ಹಾಗಾಗಿ ಬೇಸತ್ತು ಹೂವಿನ ಬೆಳೆಯನ್ನು ಉಳುಮೆ ಮಾಡಿಸಬೇಕಾಯಿತು ಎನ್ನುತ್ತಾರೆ ನೊಂದ ರೈತ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ರೈತರು ಬೆಳೆದ ಉತ್ಪನ್ನಗಳು ಹಾಳಾಗದಂತೆ ಸೂಕ್ತವಾದ ಮಾರುಕಟ್ಟೆ ಸೌಲಭ್ಯ ಒದಗಿಸಿ ರೈತರ ಸಂಕಷ್ಠಕ್ಕೆ ಸಹಕರಿಸಬೇಕೆಂದು ರೈತ ರಾಮಚಂದ್ರು ಮನವಿ ಮಾಡಿಕೊಂಡಿದ್ದಾರೆ.

      ಬೆಳೆದು ನಿಂತಿರುವ ಚಂಡು ಹೂಗಳನ್ನು ಕಟಾವು ಮಾರಾಟ ಮಾಡೊಣ ಎಂದರೆ ಮಾರುಕಟ್ಟೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಅಲ್ಲದೆ ಕೆ.ಜಿ ಚಂಡು ಹೂಗೆ ಕೇವಲ 2.ರೂ ನಂತೆ ಕೇಳುತ್ತಾರೆ. ಆಳುಗಳ ಸಹಾಯದಿಂದ ಹೂ ಕಟಾವು ಮಾಡಿಸಿ ಮಾರುಕಟ್ಟೆಗೆ ಸಾಗಿಸಲು ಸಾವಿರಾರು ರೂ. ಖರ್ಚಾಗುತ್ತದೆ ಇದರಿಂದ ಹೆಚ್ಚು ನಷ್ಟ ಉಂಟಾಗಿದೆ. ಮಾರುಕಟ್ಟೆಗಳಲ್ಲಿ ಉತ್ತಮವಾದ ಬೆಲೆ ದೊರೆತರೆ ಮಾತ್ರ ರೈತರ ಬದುಕು ಹಸನಾಗಲು ಸಾಧ್ಯ. ಆದರೆ ಕೊರೋನಾ ಲಾಕ್‍ಡೌನ್ ಕಳೆದ ವರ್ಷದಂತೆ ಈ ಬಾರಿಯೂ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎನ್ನುತ್ತಾರೆ ರಾಮಚಂದ್ರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap