ಗುಬ್ಬಿ :
ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂಗಳನ್ನು ಕೂಡಲೆ ವಾಪಸ್ ಪಡೆಯಬೇಕು ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕವಾದ ಬೆಂಬಲ ಬೆಲೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಲಕ್ಷಾಂತರ ರೈತರು ಕಳೆದ 6 ತಿಂಗಳುಗಳಿಂದ ದೆಹಲಿ ಗಡಿಯ ರಸ್ತೆಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು ಕಿಸಾನ್ ರೈತ ಮೋರ್ಚಾದ ಕರೆಯಂತೆ ದೇಶಾದಾದ್ಯಂತ ತಾವು ಇದ್ದಲ್ಲೆ ಕಪ್ಪು ಬಟ್ಟೆ ಕಪ್ಪು ಪಟ್ಟಿ ಧರಿಸಿ ರೈತ ವಿರೋಧಿ ಮತ್ತು ಜನವಿರೋಧಿ ನೀತಿಯನ್ನು ಖಂಡಿಸಿ ಕರಾಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದರು.
ತಾಲ್ಲೂಕಿನ ಎಸ್.ಕೊಡಗೀಹಳ್ಳಿಪಾಳ್ಯ ಗ್ರಾಮದಲ್ಲಿ ರೈತ ಸಂಘದವತಿಯಿಂದ ನಡೆಸಿದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತೆಯಿಂದಾಗಿ ಕೋವಿಡ್ ತೀವೃಗೊಂಡಿದ್ದು ಸಾವಿರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ತಜ್ಞರ ಅಭಿಪ್ರಾಯ ಪರಿಗಣಿಸಿದ್ದರೆ ಲಕ್ಷಾಂತರ ಜನರ ಪ್ರಾಣ ಉಳಿಸಬಹುದಾಗಿತ್ತು. ಇಂದು ಗ್ರಾಮೀಣ ಭಾಗದಲ್ಲಿಯೂ ಕೊವಿಡ್ ವ್ಯಾಪಕವಾಗಿ ಹರಡುತ್ತಿದ್ದು ಚಿಕಿತ್ಸೆಗಾಗಿ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಪ್ರತಿ ಮನೆಮನೆಗೆ ಅಭಿಯಾನ ಆರಂಭಿಸಿ ಸಮರೋಪಾದಿಯಲ್ಲಿ ಸೋಂಕಿತರಿಗೆ ಸೂಕ್ತವಾದ ಚಿಕಿತ್ಸೆ ಕೊಡಿಸಿ ಜೀವ ಉಳಿಸುವಂತಹ ಮಹತ್ವದ ಕಾರ್ಯಕ್ಕೆ ಮುಂದಾಗಬೇಕು. ಕೊರೋನಾದಿಂದ ಆರ್ಥಿಕವಾಗಿ ತೀವೃತರ ಸಂಕಷ್ಟದಲ್ಲಿರುವ ರೈತರಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯೋಪಚಾರದ ಕೊರತೆಯಿಂದಾಗಿ ಕೊರೋನ ಸೋಂಕು ಹಾಗೂ ಸಾವುಗಳ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತವು ಈ ಕೂಡಲೇ ಗ್ರಾಮೀಣ ಭಾಗಗಳಲ್ಲಿ ಮನೆಮನೆ ಅಭಿಯಾನವನ್ನು ಪ್ರಾರಂಭಿಸಿ ಸೋಂಕಿತರಿಗೆ ಚಿಕಿತ್ಸೆ ತಲುಪಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು. ಸರ್ಕಾರವು ಇತ್ತೀಚೆಗೆ ಘೋಷಿಸಿದ ಲಾಕ್‍ಡೌನ್ ಪರಿಹಾರವು ಕೇವಲ ನೆಪಮಾತ್ರಕ್ಕೆ ಎನಿಸುವಂತಿದೆ. ಎಲ್ಲಾ ವರ್ಗದ ರೈತರನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಪರಿಹಾರ ಘೋಷಣೆಯನ್ನು ನೀಡಬೇಕು. ಮೈಕ್ರೋಫೈನಾನ್ಸ್ ಒಳಗೊಂಡಂತೆ ಎಲ್ಲಾ ರೀತಿಯ ಬ್ಯಾಂಕುಗಳ ಸಾಲ ವಸೂಲಾತಿಯನ್ನು ನಿಲ್ಲಿಸುವಂತೆ ಸರ್ಕಾರ ನಿರ್ದೇಶನ ನೀಡುವುದರ ಜೊತೆಗೆ ಎಲ್ಲಾ ಎಪಿಎಲ್ ಹಾಗೂ ಬಿಪಿಎಲ್ ಪಡಿತರದಾರರಿಗೆ ಕನಿಷ್ಠ 25 ಕೆಜಿ ಆಹಾರಧಾನ್ಯಗಳನ್ನು ವಿತರಿಸಬೇಕು ಮತ್ತು ಕೊರೋನ ಸೋಂಕಿನಿಂದ ಮೃತಪಟ್ಟ ರೈತ ಕುಟುಂಬಗಳಿಗೆ ಕನಿಷ್ಠ 5ಲಕ್ಷ ರೂಗಳ ಪರಿಹಾರವನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು. ಪ್ರತಿ ಹಳ್ಳಿಗಳಿಗೂ ಸರ್ಕಾರ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳ ಪೂರೈಸಿ, ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮಾರುಕಟ್ಟೆ ಸೌಲಭ್ಯವನ್ನು ಒದಗಿಸಿ ಕೊಡಬೇಕು. ಸಂಕಷ್ಟದಲ್ಲಿರುವ ಎಲ್ಲಾ ರೈತರ ರಕ್ಷಣೆಗೆ ಸರ್ಕಾರ ಕೂಡಲೇ ನಿಲ್ಲಬೇಕು ಎಂದು ಆಗ್ರಹಿಸಿದರು .
ಈ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಎನ್.ವೆಂಕಟೇಗೌಡ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಬಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
