ಗುಬ್ಬಿ:
ಕೊರೋನಾದಂತಹ ಸಂಕಷ್ಟ ಸಮಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೆ ಇಲ್ಲ. ಯಾರೋ ಎಲ್ಲಿಯೋ ಕುಳಿತು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಲು ಸಾಧ್ಯವಾ? ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ. ಮುಖ್ಯಮಂತ್ರಿಯಾಗಿ ಸಿ.ಎಂ.ಯಡಿಯೂರಪ್ಪನವರೆ ಮುಂದುವರಿಯುತ್ತಾರೆ. ಇದರಲ್ಲಿ ಬದಲಾವಣೆಯ ಮಾತೇ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ತಾಲೂಕಿನ ನಿಟ್ಟೂರಿನ ಶ್ರೀವಿನಾಯಕ ಪದವಿ ಪೂರ್ವ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಮೊದಲೆರಡು ಸ್ಥಾನದಿಂದ 7 ನೇ ಸ್ಥಾನಕ್ಕೆ ಬಂದಿದ್ದು ಕೆಂಪು ವಲಯದಿಂದ ಹಳದಿ ವಲಯಕ್ಕೆ ಬಂದಿದೆ. ಜಿಲ್ಲೆಯಲ್ಲಿ 19 ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆಯಲಾಗಿದ್ದು ಕೊರೊನಾ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್‍ಗೆ ಸೇರಿಸುತ್ತಿರುವುದರಿಂದ ಪಾಸಿಟಿವ್ ಹರಡುತ್ತಿರುವುದು ಸಹ ಕಡಿಮೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅಧಿಕಾರಿಗಳು ಲಾಕ್‍ಡೌನ್ ಅನ್ನು ಬಹಳ ಶಿಸ್ತಿನಿಂದ ಮಾಡುತ್ತಿರುವುದರಿಂದ ಹತೋಟಿಗೆ ಬರುತ್ತಿದೆ. ಇನ್ನೂ 15 ದಿನಗಳಲ್ಲಿ ಕಡಿಮೆಯಾಗುವ ಲಕ್ಷಣಗಳು ಕಂಡು ಬರುತ್ತಿದ್ದು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಕಂಡು ಬರುತ್ತಿಲ್ಲ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಮನೆಗೆ ಬೆಂಕಿ ಬಿದ್ದಾಗ ಯಾರಾದರೂ ಮದುವೆ ಮಾಡುತ್ತಾರ ಎಂದು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ ಅವರು ದೇಶ ರಾಜ್ಯದಲ್ಲಿ ಇರುವ ಕೊರೊನ ಸಂಕಷ್ಟದಲ್ಲಿ ನಮ್ಮ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದನ್ನು ಹತೋಟಿಗೆ ತರಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ ಆರೋಗ್ಯದ ವಿಚಾರದಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಯಾಗದಂತೆ ನೋಡಿ ಕೊಳ್ಳುತ್ತಿದೆ ಇಂತಹ ಸಮಯದಲ್ಲಿ ಜನರ ಆರೋಗ್ಯ ಮುಖ್ಯವೆ ಹೊರತು ಬೇರೆ ಯಾವುದು ಅಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಕೋವಿಡ್ ಸೆಂಟರ್‍ಗಳು, ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿರುವವುದರಿಂದ ಸುಧಾರಣೆ ಯಾಗುತ್ತಿದೆ ಆದರೂ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ತಾಲೂಕಿನ ಎಲ್ಲಾ ಭಾಗದಲ್ಲಿಯು ಸಹ ಕೋವಿಡ್ ಟಾಸ್ಕ್’ಫೋರ್ಸ್ ರಚನೆ ಮಾಡಿ ಆ ಮೂಲಕ ಗ್ರಾಮೀಣ ಭಾಗದಲ್ಲಿ ಹರಡುತ್ತಿರುವ ಸೋಂಕನ್ನು ತಡೆಗಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೆ ತಾಲ್ಲೂಕಿನಲ್ಲಿ 4 ಕೋವಿಡ್ ಸೆಂಟರ್‍ಗಳು ಪ್ರಾರಂಭವಾಗಿರುವುದರಿಂದ ಬೆಡ್ ಸಮಸ್ಯೆ, ಚಿಕಿತ್ಸೆಯ ಸಮಸ್ಯೆ ಕಂಡು ಬರುತ್ತಿಲ್ಲ ಗ್ರಾಮೀಣ ಭಾಗದಲ್ಲಿ ಸೋಂಕು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಡಾ.ನವ್ಯಬಾಬು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಎನ್.ಸಿ.ಪ್ರಕಾಶ್, ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ, ಮುಖಂಡರುಗಳಾದ ಜಿ.ಎನ್.ಬೆಟ್ಟಸ್ವಾಮಿ, ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್‍ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮ, ಡಿ.ಎಚ್.ಓ.ನಾಗೇಂದ್ರಪ್ಪ, ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿಂದುಮಾಧವ. ಡಿ.ವೈ.ಎಸ್.ಪಿ ಕುಮಾರಪ್ಪ, ಕಂದಾಯ ನಿರೀಕ್ಷ ಕೆ.ವಿ.ನಾರಾಯಣ್ ಸೇರಿದಂತೆ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ