ಗುಬ್ಬಿ :
ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳೆರಡು ಬಡವರ ನೆತ್ತರು ಹೀರಲು ಬಂಡವಾಳಶಾಹಿಗಳಿಗೆ ಅನುವು ಮಾಡಿಕೊಟ್ಟು ದುರಂಹಕಾರದ ವರ್ತನೆ ತೋರುತ್ತಿವೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಕಿಡಿಕಾರಿದರು.
ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಬಾಧಿತ ಸಂದರ್ಭದಲ್ಲಿ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಸಲ್ಲದ ತೆರಿಗೆ ಹೇರಿದ ಬಿಜೆಪಿಯ ಉಭಯ ಸರ್ಕಾರಗಳು ಪೆಟ್ರೋಲ್, ಡಿಸೇಲ್ ಮತ್ತು ಗ್ಯಾಸ್ ಬೆಲೆಯನ್ನು ಮನಸ್ಸೊ ಇಚ್ಚೆ ಹೆಚ್ಚಳ ಮಾಡಿ ಮತ್ತೊಮ್ಮೆ ಬಂಡವಾಳ ಶಾಹಿಗಳ ಪರ ಎಂಬುದನ್ನು ಸಾಬೀತು ಮಾಡಿವೆ ಎಂದು ದೂರಿದರು.
ಅಗತ್ಯ ವಸ್ತುಗಳ ಪೈಕಿ ಆಹಾರ ಪದಾರ್ಥ, ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿಸಿದ್ದು, ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ವಿರೋಧ ಪಕ್ಷಗಳು ಬೀದಿಗಿಳಿದು ಧರಣಿ ಮಾಡಿದರೂ ಕಿಂಚಿತ್ತೂ ತಲೆ ಕೆಡಿಸಿಕೊಳ್ಳದ ಮೋದಿ ಅವರು ಈ ಹಿಂದೆ ಬೀದಿಯಲ್ಲಿ ಧರಣಿ ಮಾಡಿದ್ದನ್ನು ಮರೆತಿದ್ದಾರೆ. ಈ ಜತೆಗೆ ಕೃಷಿ ಪರಿಕರಗಳನ್ನು ದುಬಾರಿ ಮಾಡಿದ ಕೇಂದ್ರ ಸರ್ಕಾರ ಪಿವಿಸಿ ಪೈಪ್‍ಗಳ ಬೆಲೆ ತ್ರಿಗುಣಗೊಳಿಸಿದ್ದಾರೆ. ಕೃಷಿ ನಡೆಸುವ ರೈತನ ಬದುಕು ಕೂಡಾ ಅತಂತ್ರವಾಗಿದೆ. ಈ ಕೋವಿಡ್ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ ಬಿಜೆಪಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮೂರನೆ ಅಲೆಯ ಭೀತಿಯಲ್ಲಿರುವಾಗ ಸ್ಥಳೀಯ ಜಿಪಂ ಮತ್ತು ತಾಪಂ ಚುನಾವಣೆಗೆ ಸಜ್ಜಾಗುತ್ತಿರುವುದು ಸರಿಯಲ್ಲ. ಚುನಾವಣೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ ಮಾಡಿದ ಬಿಜೆಪಿ ಸರ್ಕಾರ ಬಡ ಜನರ ದುಸ್ಥಿತಿ ಅರಿತಿಲ್ಲ. ಒಂದೊತ್ತಿನ ಊಟಕ್ಕೂ ಪರದಾಡುವ ಕೋವಿಡ್ ಸಂದರ್ಭದಲ್ಲಿ ಆಹಾರ ಪದಾರ್ಥಗಳ ಬೆಲೆಯನ್ನೂ ಏರಿಸಿರುವುದು ಅನ್ಯಾಯ ಎನಿಸಿದೆ. ನಿತ್ಯ ಬಳಕೆ ಮಾಡುವ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಇಳಿಸಿ ಶ್ರೀಸಾಮಾನ್ಯನನ್ನು ಉಳಿಸಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎಚ್.ಆರ್.ಗುರುರೇಣುಕಾರಾಧ್ಯ ಮಾತನಾಡಿ ಜನಪರ ನಿಲ್ಲದ ಬಿಜೆಪಿ ಸರ್ಕಾರ ಕೇವಲ ಕೈಗಾರಿಕೋದ್ಯಮಿಗಳ ವಶದಲ್ಲಿದೆ. ಬೆಲೆ ಏರಿಸುವ ಉದ್ದಿಮೆದಾರರಿಗೆ ಕಡಿವಾಣ ಹಾಕುವ ತಾಕತ್ತು ಸರ್ಕಾರ ಕಳೆದುಕೊಂಡಿದೆ ಎಂದು ಛೇಡಿಸಿದರು.
ಧರಣಿಯಲ್ಲಿ ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ಸು.ಮುನಿಯಪ್ಪ, ಪಪಂ ಸದಸ್ಯರಾದ ರೇಣುಕಾಪ್ರಸಾದ್, ಕುಮಾರ್, ಶೌಕತ್‍ಆಲಿ, ಮುಖಂಡರಾದ ಶಿವಾಜಿರಾವ್, ಜಿ.ಸಿ.ನರಸಿಂಹಮೂರ್ತಿ, ಚನ್ನಬಸವಯ್ಯ, ರಾಜಣ್ಣ, ಲಕ್ಷ್ಮೀಕಾಂತ್, ನರಸೇಗೌಡ, ನಾಗರಾಜು ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
