ಮುಜರಾಯಿ ದೇವಾಲಯದ ಆದಾಯವನ್ನು ಧಾರ್ಮಿಕ ಕಾರ್ಯಗಳಿಗೆ ನೀಡಲು ಮನವಿ

 ಗುಬ್ಬಿ : 

      ದೇವಾಲಯದ ಆದಾಯವನ್ನು ಪಡೆಯುವ ಮುಜರಾಯಿ ಇಲಾಖೆ ದೇವಾಲಯದಲ್ಲಿ ನಡೆಯುವ ಜಾತ್ರೆ ಇನ್ನಿತರೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳಿಗೆ ಆದಾಯದ ಹಣ ನೀಡಿದಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಹದಿನೆಂಟು ಕೋಮಿನ ಮುಖಂಡರು, ಹುಂಡಿ ಹಣವನ್ನು ಪಡೆಯುವ ಅಧಿಕಾರಿಗಳು ದೇವಾಲಯ ಅಭಿವೃದ್ದಿ ಮತ್ತು ಪೂಜಾ ಕೈಂಕರ್ಯಗಳಿಗೆ ಹಣ ನಿಗದಿ ಮಾಡಿ ಮೀಸಲಿಡುವಂತೆ ಮನವಿ ಮಾಡಿದರು.

      ಪಟ್ಟಣದ ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಹೂವಿನ ವಾಹನ ವಿಶೇಷ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಮುಖಂಡರು, ಪ್ರತಿ ಬಾರಿ ಹೂವಿನವಾಹನ, ರಥೋತ್ಸವ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಭಕ್ತರಿಂದ ದೇಣಿಗೆ ಪಡೆದೆ ನಡೆಸುವಂತಾಗಿದೆ. ಪ್ರವಾಸಿ ತಾಣವಾಗಿರುವ ಇಲ್ಲಿ ಯಾವುದೇ ಅಭಿವೃದ್ದಿಗೆ ಇಲಾಖೆ ಮುಂದಾಗಿಲ್ಲ. ಮುಜರಾಯಿ ಇಲಾಖೆ ಎಲ್ಲಾ ಕಾರ್ಯಗಳಿಗೆ ದೇವಾಲಯದ ಆದಾಯದಲ್ಲಿ ಹಣ ನೀಡಬೇಕು ಎಂದು ಒಕ್ಕೊರಲಿನಲ್ಲಿ ಮನವಿ ಮಾಡಿದರು.

      ದೇವಾಲಯಕ್ಕೆ ಬರುವ ಭಕ್ತರು ನೀಡುವ ಹುಂಡಿ ಹಣ ಸಂಪೂರ್ಣ ಸರ್ಕಾರದ ಲೆಕ್ಕಕ್ಕೆ ಪಡೆಯುತ್ತಿದೆ. ಆದರೆ ಪ್ರತಿ ಧಾರ್ಮಿಕ ಚಟುವಟಿಕೆಗೆ ಮರಳಿ ಪದೆ ಪದೆ ಭಕ್ತರಿಂದಲೆ ದೇಣಿಗೆ ಪಡೆಯುವುದು ಸರಿಯೆ ಎಂದು ಪ್ರಶ್ನಿಸಿದ ಕೆಲ ಮುಖಂಡರು, ದೇವಾಲಯದಲ್ಲಿನ ಬಸವವಾಹನ, ರುದ್ರಾಕ್ಷಿವಾಹನ, ಪಲ್ಲಕ್ಕಿ ಸೇರಿದಂತೆ ಹಲವು ವಸ್ತುಗಳು ದುರಸ್ತಿಗೆ ಬಂದಿವೆ. ಅದನ್ನು ಸರಿಪಡಿಸುವ ಕೆಲಸವನ್ನು ಧಾರ್ಮಿಕ ದತ್ತಿ ಇಲಾಖೆ ನಡೆಸಬೇಕು. ಕೇವಲ ಹುಂಡಿ ಹಣ ಪಡೆಯಲು ಮಾತ್ರ ಇಲಾಖೆ ಬರುವ ಅಗತ್ಯವಿಲ್ಲ. ಎಲ್ಲಾ ಧಾರ್ಮಿಕ ಕಾರ್ಯಗಳಿಗೂ ಇಲಾಖೆಯಿಂದ ಸಹಕಾರ ಸಿಗಬೇಕು ಎಂದು ಮನವಿ ಮಾಡಿದರು.

     ನಂತರ ಇದೇ ತಿಂಗಳ 14 ರಂದು ಹೂವಿನವಾಹನ ನಡೆಸುವ ಬಗ್ಗೆ ಶಿರಸ್ತೇದಾರ್ ಶ್ರೀರಂಗ ಅವರ ನೇತೃತ್ವದಲ್ಲಿ ಚರ್ಚಿಸಿ, ಕೋವಿಡ್ ಹಿನ್ನೆಲೆ ಸರಳವಾಗಿ ವಾಹನ ಆಚರಣೆ ನಡೆಸಲು ನಿರ್ಧರಿಸಲಾಯಿತು. ಕೊರೋನಾ ವೈರಸ್ ಭೀತಿ ಹುಟ್ಟಿಸಿರುವ ಕಾರಣ ಪಟಾಕಿ ಸಿಡಿಸುವ ಕಾರ್ಯಕ್ರಮ ರದ್ದು ಮಾಡುವಂತೆ ಅಧಿಕಾರಿಗಳು ಮನವಿ ಮಾಡಿದರು. ಹೂವಿನ ವಾಹನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಮಾರ್ಗ ಮಧ್ಯೆ ಭಕ್ತರು ತಮ್ಮ ಮನೆ ಮತ್ತು ಅಂಗಡಿಗಳ ಮುಂದೆ ಬಾಳೆ ಅಂಬು ಹಾಯುವ ಮೂಲಕ ಭಕ್ತಿ ಸಮರ್ಪಣೆ ಎಂದಿನಂತೆ ನಡೆಸಲಾಗುವುದು. ಸರಳ ಹಬ್ಬ ಮಾಡುವ ಜತೆಗೆ ಮನೆ ಕಾರ್ಯಕ್ರಮಗಳಿಗೆ ಸೀಮಿತವಾಗಿ ನಡೆಸುವುದು ಹಾಗೂ ಬೆಳಗ್ಗೆ ಧೂಳು ಮೆರವಣಿಗೆ ಕೂಡ ಅತ್ಯಂತ ಸರಳವಾಗಿ ನಡೆಸಲು ಭಕ್ತರು ಸಹಕರಿಸುವಂತೆ ಮನವಿ ಮಾಡಿದರು.

      ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ವೇತ, ಕಂದಾಯ ನಿರೀಕ್ಷಕ ರಮೇಶ್ ಕುಮಾರ್, ಪಟೇಲ್ ಕೆಂಪೇಗೌಡ, ಪಪಂ ಸದಸ್ಯ ರೇಣುಕಾಪ್ರಸಾದ್, ಪಣಗಾರ್ ಸೋಮಶೇಖರ್, ಕುಮಾರಯ್ಯ, ಅರ್ಚಕ ಮಲ್ಲಿಕಾರ್ಜುನ್, ಶಿವಕುಮಾರಸ್ವಾಮಿ ಸೇರಿದಂತೆ ಹದಿನೆಂಟು ಕೋಮಿನ ಮುಖಂಡರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link