ಮಂಜೂರಾದ ಎಕ್ಸ್‍ರೆ ಯಂತ್ರವನ್ನು ಕಿತ್ತುಕೊಂಡ ಆರೋಗ್ಯ ಇಲಾಖೆ

ಗುಬ್ಬಿ : 

      ಕಳೆದ ನಾಲ್ಕು ವರ್ಷದ ಹಿಂದೆ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಅಳವಡಿಸಿದ್ದ ಆಧುನಿಕ ಡಿಜಿಟಲ್ ಅಳವಡಿಸಿದ ಎರಡೇ ದಿನದಲ್ಲಿ ಮರಳಿ ವಾಪಸ್ ಪಡೆದ ಆರೋಗ್ಯ ಇಲಾಖೆಯ ಧೋರಣೆಯನ್ನು ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರರಿಗೆ ಉಡಾಫೆ ಉತ್ತರ ನೀಡಿದ ಡಿಎಚ್‍ಓ ಡಾ.ನಾಗೇಂದ್ರಪ್ಪ ಅವರ ಸರ್ಕಾರಿ ವಾಹನವನ್ನು ಅಡ್ಡಗಟ್ಟಿ ಘೇರಾವ್ ಹಾಕಿದ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.

      ಮಂಗಳವಾರ ಪಟ್ಟಣದ ಆಸ್ಪತ್ರೆಯಲ್ಲಿ ನಡೆದ ವೈದ್ಯರ ದಿನಾಚರಣೆ ಕಾರ್ಯಕ್ರಮಕ್ಕೆ ಹಾಜರಾಗಿದ್ದ ಡಿಎಚ್‍ಓ ಡಾ.ನಾಗೇಂದ್ರಪ್ಪ ಅವರನ್ನು ಕಾರ್ಯಕ್ರಮ ಮುಗಿದ ಬಳಿಕ ಸಾಮಾಜಿಕ ಹೋರಾಟಗಾರರು ಭೇಟಿ ಮಾಡಿ ಡಿಜಿಟಲ್ ಎಕ್ಸರೆ ಯಂತ್ರದ ಬಗ್ಗೆ ಪ್ರಶ್ನಿಸಿದರು.

      ಎಕ್ಸ್ ರೆ ಯಂತ್ರ ಕೊಟ್ಟು ನಂತರ ಕಿತ್ತುಕೊಂಡರು :

      ಮೇಲ್ದರ್ಜೆಗೇರಿಸಿದ ಗುಬ್ಬಿ ಆಸ್ಪತ್ರೆಯನ್ನು ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯನ್ನಾಗಿಸಿ ಆಧುನಿಕ ಯಂತ್ರಗಳ ಅಳವಡಿಕೆಗೆ ಮುಂದಾಗಿದ್ದ ಆರೋಗ್ಯ ಇಲಾಖೆಯು ಅತ್ಯವಶ್ಯಕವಾಗಿದ್ದ ಡಿಜಿಟಲ್ ಎಕ್ಸರೇ ಯಂತ್ರವನ್ನು ಅಳವಡಿಸಿತ್ತು. ಆದರೆ ಮತ್ತೊಂದು ಯಂತ್ರ ನೀಡುವ ಮಾತು ಕೊಟ್ಟು ಅಳವಡಿಸಿದ್ದ ಯಂತ್ರವನ್ನು ವಾಪಸ್ ಪಡೆದಿದ್ದು, ಇಲಾಖೆ ವಚನ ಭ್ರಷ್ಟವಾಗಿದೆ ಎಂದು ಸಾಮಾಜಿಕ ಹೋರಾಟಗಾರರ ತಂಡ ಆಕ್ರೋಶ ಹೊರ ಹಾಕಿತು.

  ಡಿಎಚ್‍ಓ ಬೇಜವಾಬ್ದಾರಿ ಉತ್ತರ :

        ಸೌಜನ್ಯವಾಗಿಯೆ ಪ್ರಶ್ನಿಸಿದ ಹೋರಾಟಗಾರರ ತಂಡಕ್ಕೆ ಬೇಜವಾಬ್ದಾರಿ ಉತ್ತರ ನೀಡಿದ ಡಿಎಚ್‍ಓ ಅವರು ಯಂತ್ರವನ್ನು ಕೊಡೋಣ ಬಿಡಿ ಎಂದು ಹಾರಿಕೆ ಉತ್ತರ ನೀಡಿದರು. ನಾಲ್ಕು ವರ್ಷದಿಂದ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಕೇಳಿದರೆ ಬೇಕಾಬಿಟ್ಟಿ ಉತ್ತರ ನೀಡಿ ಹೋರಾಟಗಾರರನ್ನು ತಾತ್ಸರವಾಗಿ ಕಂಡು ಹೊರಟಿದ್ದನ್ನು ಕಂಡ ಹೋರಾಟಗಾರರು ಸಿಟ್ಟಿಗೆದ್ದು ಅವರ ವಾಹನಕ್ಕೆ ಅಡ್ಡಲಾಗಿ ಕುಳಿತು ಸಮಂಜಸ ಉತ್ತರಕ್ಕೆ ಒತ್ತಾಯಿಸಿ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದರು.

      ಪ್ರತಿಭಟನಾ ನಿರತರ ಸ್ಥಳಕ್ಕೆ ಧಾವಿಸಿದ ಆಡಳಿತ ವೈದ್ಯಾಧಿಕಾರಿ ಡಾ.ದಿವಾಕರ್ ಮತ್ತು ಟಿಎಚ್‍ಓ ಡಾ.ಬಿಂದುಮಾಧವ ಅವರು ಧರಣಿ ನಿರತರೊಂದಿಗೆ ಚರ್ಚಿಸಿ ಕೋವಿಡ್ ಹಿನ್ನಲೆಯಲ್ಲಿ ಈ ಸಂಬಂಧ ಪತ್ರ ವ್ಯವಹಾರ ತಡವಾಗಿದೆ ಎಂದು ಸಮಜಾಯಿಶಿ ನೀಡಿ ಮನವೊಲಿಸಿದ ಬಳಿಕ ಹಾಗೂ ಡಿಎಚ್‍ಓ ಡಾ.ನಾಗೇಂದ್ರಪ್ಪ ಅವರು ಇನ್ನೆರಡು ತಿಂಗಳಲ್ಲಿ ಡಿಜಟಲ್ ಎಕ್ಸರೇ ಯಂತ್ರ ಅಳವಡಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

      ಈ ಸಂದರ್ಭದಲ್ಲಿ ಜಿ.ಆರ್.ರಮೇಶ್, ಮುನಿಯಪ್ಪ ಹನುಮಂತು, ಗುಬ್ಬಿ ಹಿತರಕ್ಷಣಾ ಸಮಿತಿ ಸದಸ್ಯರು, ಇತರರು ಹಾಜರಿದ್ದರು.

       ಅಳವಡಿಸಿದ್ದ ಕೇವಲ ಮೂರೇ ದಿನದಲ್ಲಿ ಈ ಯಂತ್ರವನ್ನು ಕಳಚಿ ಬೆಂಗಳೂರಿನ ಎಲ್‍ಎಚ್‍ಗೆ ಕೊಂಡೊಯ್ಯಲಾಗುವುದು ಎಂದು ಹೇಳಿ ವಾಪಸ್ ಪಡೆದ ಇಲಾಖೆ, ಪರ್ಯಾಯವಾಗಿ ಮತ್ತೊಂದು ಯಂತ್ರ ಕೊಡುವ ಭರವಸೆ ನೀಡಿ ನಾಲ್ಕು ವರ್ಷವಾದರೂ ಇತ್ತ ಕಡೆ ಗಮನ ನೀಡಿಲ್ಲ, ಈ ಹಿಂದೆ ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ ಅವರು ನೀಡಿದ್ದ 60 ಲಕ್ಷ ರೂ.ಗಳ ಅತ್ಯಾಧುನಿಕ ಪರಿಕರಗಳನ್ನು ಅಳವಡಿಸಿಕೊಳ್ಳುವಲ್ಲಿಯೂ ಸಹ ಈ ಆಸ್ಪತ್ರೆ ವೈಫಲ್ಯ ಕಂಡಿದೆ. ಅಭಿವೃದ್ಧಿಗೆ ಬಂದ ಈ ಅನುದಾನ ಹಣ ವಾಪಸ್ ಆಗಿರುವುದು ಸಾರ್ವಜನಿಕರಿಗೆ ತಿಳಿದಿದೆ. ಈ ಬಗ್ಗೆ ಕೆಲದಿನಗಳ ಹಿಂದೆ ಡಿಎಚ್‍ಓ ಅವರಿಗೆ ಕರೆ ಮಾಡಿದರೆ ಸಮಂಜಸ ಉತ್ತರ ನೀಡದೆ ಆಲಸ್ಯದ ನುಡಿಗಳನ್ನಾಡಿದ್ದರು.

– ನಾಗಸಂದ್ರ ವಿಜಯ್‍ಕುಮಾರ್, ಸಾಮಾಜಿಕ ಹೋರಾಟಗಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link