ತುಮಕೂರು :
ಗುಬ್ಬಿ ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಾದರಿಯಾಗಿಸುವ ಗುರಿಯೊಂದಿಗೆ ಮೂಲಸೌಕರ್ಯ ಕಲ್ಪಿಸಲು ನಿರಂತರವಾಗಿ ಯತ್ನಿಸುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಅನುದಾನಗಳನ್ನು ವಾಪಸ್ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಸರಕಾರದ ಮೇಲೆ ಒತ್ತಡ ಹೇರಿ ಅಭಿವೃದ್ಧಿ ಯೋಜನೆಗಳಿಗೆ ಮರುಚಾಲನೆಗೊಳಿಸಲಾಗುತ್ತಿದೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಪ್ರಜಾಪ್ರಗತಿ-ಪ್ರಗತಿವಾಹಿನಿಯಿಂದ ಏರ್ಪಡಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗಿಯಾದ ಮಾಜಿ ಸಚಿವರೂ ಆದ ಶ್ರೀನಿವಾಸ್ ಅವರು 2004ರಿಂದ ಗುಬ್ಬಿ ಕ್ಷೇತ್ರದ ಶಾಸಕರಾಗಿ ನಿರಂತರವಾಗಿ ನಾಲ್ಕು ಅವಧಿಗೆ ಆಯ್ಕೆಯಾಗುತ್ತಾ ಬಂದಿದ್ದು, ಕ್ಷೇತ್ರದ ಹಳ್ಳಿ -ಹಳ್ಳಿಯನ್ನು ತಲುಪಿ ಮೂಲಸೌಕರ್ಯವನ್ನು ಕಲ್ಪಿಸುವ ಪ್ರಯತ್ನ ಮಾಡಿರುವೆ. ಕ್ಷೇತ್ರದ ಬಹುತೇಕ ಮುಖ್ಯರಸ್ತೆಗಳು ಡಾಂಬರ್ ಕಂಡಿದ್ದು, ಶುದ್ಧ ಕುಡಿಯುವ ನೀರು, ಬೀದಿದೀಪ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಗ್ರಾಮದ ಒಳರಸ್ತೆಗಳನ್ನು ಸಿ.ಸಿ.ರಸ್ತೆ, ಡಾಂಬರು ಮಾಡಲು ನಿರಂತರ ಪ್ರಯತ್ನ ಹಾಕುತ್ತಿದ್ದು, ಅನುದಾನದ ಲಭ್ಯತೆಯೊಂದಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗುವುದು ಎಂದು ಸಾರ್ವಜನಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಕರೆಯಲ್ಲಿ ಕೇಳಿಬಂದ ಸಮಸ್ಯೆಗಳು-ಶಾಸಕರ ಉತ್ತರ :
ಗೌರಿಪುರ ಮೋಹನ್ ಅವರು ಕರೆ ಮಾಡಿ ಸರ್ವೆ ನಂ 115-116ರಲ್ಲಿ ಕೆರೆ ಮಾಡಿಕೊಡುವಂತೆ ಕೋರಿದಾಗ ಸರಕಾರಕ್ಕೆ ಪ್ರಪೋಸಲ್ ಕಳುಹಿಸಲಾಗಿದೆ ಎಂದು ಶಾಸಕರು ಉತ್ತರಿಸಿದರು. ಶಿವಣ್ಣ ಗೊಲ್ಲರಹಟ್ಟಿ ಎಂಬುವರು ಕರೆ ತಮ್ಮ ಜಮೀನಿನ ಮಧ್ಯದಲ್ಲಿ ಹಾದು ಹೋಗಿರುವ ಸರ್ವೆ ನಂ 57/3ರಲ್ಲಿನ ವಿದ್ಯುತ್ ಕಂಬ ಸ್ಥಳಾಂತರಿಸುವಂತೆ ಕೋರಿದರು ಬೆಸ್ಕಾಂ ಅಧಿಕಾರಿಗಳು 6ತಿಂಗಳಿಂದ ಮಾಡುತ್ತಿಲ್ಲ ಎಂದು ದೂರಿದರು. ನಾಳೆಯೇ ಎಂಜಿನಿಯರ್ಸ್ ಕಳುಹಿಸಿ ಸ್ಥಳಪರಿಶೀಲಿಸುವುದಾಗಿ ತಿಳಿಸಿದರು.
6 ವರ್ಷದಿಂದ ಹಾಗಲವಾಡಿ ಕೆರೆ ನೀರಿನ ಯೋಜನೆ ಕಾರ್ಯಗತವಾಗಿಲ್ಲ:
ಹಾಗಲವಾಡಿ ಮಂಜುನಾಥ್ ಅವರು ಕರೆಮಾಡಿ ಹಾಗಲವಾಡಿ ಕೆರೆಗೆ 6 ವರ್ಷದಿಂದ ನೀರು ಹರಿದಿಲ್ಲ,ಎಂದರು. ಈ ವಿಚಾರದಲ್ಲಿ ಉಸ್ತುವಾರಿ ಸಚಿವರಿಂದ ಸ್ವಲ್ಪ ಗೊಂದಲವಾಯಿತು. ಅವರು ಪೈಪ್‍ಲೈನ್‍ನಲ್ಲೆ ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಆಗಿರುವ ಕೆಲಸಕ್ಕೆ ಹಿನ್ನಡೆಯಾಯಿತು. ಹೀಗಾಗಿ ಮತ್ತೆ ಸಚಿವರೊಡನೆಯೂ ಜನರನ್ನು ಕರೆದುಕೊಂಡು ಹೋಗಿ ಜಾಗದ ಸಮಸ್ಯೆ ಇತ್ಯರ್ಥ ಪಡಿಸಿ, ಪೈಪ್‍ಲೈನ್ ಹಾಗೂ ಹಾಲಿ ನಡೆಯುತ್ತಿರುವ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಎಂಡಿ ಜೊತೆ ಚರ್ಚಿಸಿರುವೆ. ಶೀಘ್ರವೇ ಅರ್ಥ್ ವರ್ಕ್ ಪೂರ್ಣಗೊಳಿಸಿ ನೀರು ಹರಿಸುವುದಾಗಿ ತಿಳಿಸಿದರು.
ಹರ್ಷಾ ಮಡೇನಹಳ್ಳಿ ಅವರು ಕರೆ ಮಾಡಿ ಡೈರಿ ಬಿಲ್ಡಿಂಗ್ ಅಲ್ಲಿ ಆಸ್ಪತ್ರೆಯಿದ್ದು, ಹೊಸ ಆಸ್ಪತ್ರೆ ಕಟ್ಟಡ ಬೇಕೆಂದು ಕೋರಿದರು. ತಾಲೂಕಿಗೊಂದು ಆಸ್ಪತ್ರೆ ಪ್ರಸ್ತಾಪವಿದ್ದು ನಿಮ್ಮೂರಿಗೆ ಮಾಡಿಸಿಕೊಡುವುದಾಗಿ ತಿಳಿಸಿದರು. ಗುಬ್ಬಿ ಮಂಚಲದೊರೆಯಿಂದ ಮಹಿಳೆಯೊಬ್ಬರು ಕರೆ ಮಾಡಿ ಮಠದ ಕೆರೆಗೆ ನೀರು ಯಾವಾಗ ಹರಿಸುತ್ತಿರೀ ಎಂದು ಕೇಳಿದಾಗ, 26 ಕೋಟಿ 50 ಲಕ್ಷ ಸಚಿವನಾಗಿದ್ದಾಗ ಟೆಂಡರ್ ಆಗಿದ್ದು, ಬಿಜೆಪಿ ಸರಕಾರ ಬಂದಾಗ ವಾಪಸ್ ಹೋಗಿತ್ತು. ಈಗ ಮತ್ತೆ ಎಸ್ಟಿಮೇಟ್ ಚೇಂಜ್ ಮಾಡಿ ಒಂದು ತಿಂಗಳಲ್ಲಿ ಕ್ಲಿಯರ್ ಮಾಡ್ತೇವೆ ಎಂದರು.
ಹೊಸಪಾಳ್ಯದ ಅಶ್ವತ್ಥ್ ಎಂಬುವರು ಕರೆ ಮಾಡಿ ವ್ಯಾಕ್ಸಿನೇಷನ್ ಕೊಡಿಸಬೇಕೆಂದು ಜೊತೆಗೆ ಎಸ್.ಕೊಡಗಿಹಳ್ಳಿ-ಹೊಸಪಾಳ್ಯ ಕಾರ್ನರ್‍ನಿಂದ ಗೇಟ್‍ಒಳಗಿನ ರಸ್ತೆ ಮಾಡಿಸಿಕೊಡುವಂತೆ ಮೊರೆಯಿಟ್ಟರು. ರಂಗರಾಜು ಎಂಬುವರು ಕರೆ ಮಾಡಿ ಪಟ್ರಾವತನಹಳ್ಳಿ ಗೋಮಾಳದಲ್ಲಿ ಜಾಗ ಮಂಜೂರಾತಿಗೆ ಕೋರಿದರು.ಶಾಸಕರು ಪ್ರತಿಕ್ರಿಯಿಸಿ ಬಗರ್‍ಹುಕುಂ ಸಮಿತಿ ರಚನೆಯಾದ ಕೂಡಲೇ ಮಂಜೂರು ಮಾಡಿಕೊಡಿಸುವುದಾಗಿ ಹೇಳಿದರು.
ಚೇಳೂರು ಗ್ರಾಪಂ ಅಧ್ಯಕ್ಷರಿಂದಲೇ ದೂರು:
ಚೇಳೂರಿ ಗ್ರಾಪಂ ಅಧ್ಯಕ್ಷ ಕಾರ್ತಿಕ್ ಅವರು ಕರೆ ಮಾಡಿ ಪಂಚಾಯ್ತಿ ವ್ಯಾಪ್ತಿಯಲ್ಲಿ 13 ಬೋರ್‍ವೆಲ್ ಇದ್ದು ದುರಸ್ಥಿಗೊಳಿಸಿ ಸಿಹಿನೀರನ್ನು ಬಿಡ್ತಿಲ್ಲ. ಪಿಡಿಓಗಳು ಸರಿಯಾಗಿ ಸ್ಪಂದಿಸೋಲ್ಲ. ದಿನ ಒಂದು ಕಥೆ ಹೇಳ್ತಾರೆ. ಕುರುಬರಕಾಲೋನಿಯಲ್ಲಿ ಚರಂಡಿ ನೀರು ಮನೆಗೆ ನುಗ್ಗಿ ಸಮಸ್ಯೆಯಾಗಿದ್ದರೂ ಸರಿಪಡಿಸ್ತಿಲ್ಲ ಎಂದರು. ಮಂಗಳವಾರ -ಬುಧವಾರ ತಾವೇ ಪಂಚಾಂಯಿತಿಗೆ ಬಂದು ಬಗೆಹರಿಸುವುದಾಗಿ ತಿಳಿಸಿದರು.
ಸಂತೆ ಮೈದಾನದ ಬಳಿ ಕುಡುಕರ ಹಾವಳಿ: ಅರುಣ್ ಗುಬ್ಬಿ ಅವರು ಕರೆ ಮಾಡಿ ಸಂತೆ ಮೈದಾನದ ಪಕ್ಕ ಮದ್ಯದಂಗಡಿಗಳಲ್ಲಿ ಎಣ್ಣೆ ಕುಡಿದು ಜಮೀನುಗಳಲ್ಲಿ ಬಿಸಾಡುತ್ತಿದ್ದಾರೆ ಎಂದರು. ಸೋಮವಾರ ಸಮಸ್ಯೆಗೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು. ಕೊಂಡ್ಲಿ ನವೀನ್ ಅವರ ರಸ್ತೆ ಸಮಸ್ಯೆ ಕರೆಗೆ ಪ್ರತಿಕ್ರಿಯಿಸಿದ ಶಆಸಕರು 75 ಲಕ್ಷ ಗಣಿಭಾದಿತ ನಿಧಿಯಡಿ ಕೊಂಡ್ಲಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಡುವುದಾಗಿ ಪ್ರತಿಕ್ರಿಯಿಸಿದರು. ಗುಬ್ಬಿ ತಾಲೂಕಿನ 1000 ಓಲಾ-ಊಬರ್ ಕ್ಯಾಬ್ ಡ್ರೈವರ್ ಇದ್ದು ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತುವಂತೆ ಕೋರಿದರು.
ಹಳೇ ಗುಬ್ಬಿ ಕುಂದೂರಣ್ಣ ಅವರು ಮಾತನಾಡಿ ಆದ್ಯತೆ ಮೇರೆಗೆ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವಂತೆ ಕೋರಿದರಲ್ಲದೆ, ರಸ್ತೆಗಳಲ್ಲಿನ ಜಂಗಲ್‍ಗಳನ್ನು ತೆಗೆಸಿ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದರು. ಎಲ್ಲಾ ಪಂಚಾಯ್ತಿಯಿಂದಲೂ ಜಂಗಲ್ ತೆರವುಗೊಳಿಸುವುದಾಗಿ ಕ್ರಮ ವಹಿಸಿರುವುದಾಗಿ ತಿಳಿಸಿದರು. ಬಯೋಮೆಟ್ರಿಕ್ ಹಾಜರಾತಿ ಮಾಡಬೇಕೆಂದು ಹೇಳಿದ್ದರೂ ಸರಕಾರಿ ಕಚೇರಿಯಲ್ಲಿ ಪಾಲಿಸುತ್ತಿಲ್ಲ ಎಂದರು.
ಸಂತೆ ಸ್ವಚ್ಛಗೊಳಿಸಲು ಮೊರೆ :
ಚೇಳೂರು ನವೀನ್ ಕರೆ ಮಾಡಿ ಮಾದೇಶನ ಬಡಾವಣೆ ಸುಮಾರು ವರ್ಷಗಳಿಂದ ರಸ್ತೆಗೆ ಜಲ್ಲಿ ಹೊಡಿಸಿ ಗುಂಡಿ ಮಾಡ್ತಾರೆ ಎಂಬ ದೂರಿಗೆ ಒಂದೂವರೆ ಕೋಟಿ ಕಾಂಗ್‍ರಸ್ತೆಗೆ ಹಾಕಿದ್ದು, ಸೋಮೇಶ್ ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ನಾಗರಾಜ್ ಕರೆ ಮಾಡಿ ಕೊಪ್ಪ ರಸ್ತೆ ದುರಸ್ತಿಪಡಿಸುವಂತೆ ಕೋರಿದರು. ಮಾಲಾ ಅವರು ಕರೆ ಮಾಡಿ ಲಾಕ್‍ಡೌನ್‍ನಿಂದ ಸಂತೆ ಸ್ವಚ್ಛಗೊಳಿಸಿಲ್ಲ. ಶುಚಿಗೊಳಿಸಿಕೊಡಬೇಕೆಂದು ಮನವಿ ಮಾಡಿದರು. ನಾಳೆಯೇ ಸಂಬಂಧಪಟ್ಟವರಿಂದ ಕ್ಲೀನ್ ಮಾಡಿಸುವುದಾಗಿ ತಿಳಿಸಿದರು.
ಕೆರೆಯಂಗಳ ರಸ್ತೆ ಅಭಿವೃದ್ಧಿಗೆ 10 ಕೋಟಿ:
ನಂದೀಶ್ ವಿಶೇಷಚೇತನ ಕರೆಮಾಡಿ ಅಂಗಡಿ ಮಾಡಿಕೊಡುವಂತೆ ಕೋರಿದರು. ಸೋಮವಾರ ಕಚೇರಿಗೆ ಬನ್ನಿ ಅಂಗಡಿ, ದ್ವಿಚಕ್ರವಾಹನ ಕೊಡಿಸಲು ಸಹಾಯಮಾಡುವುದಾಗಿ ತಿಳಿಸಿದರು.ದಯಾನಂದ್ ಗುಬ್ಬಿಯಿಂದ ಕರೆ ಮಾಡಿ ತೋಟದ ಸಾಲು, ಕೆರೆಯಂಗಳ ರಸ್ತೆ ಸರಿಪಡಿಸುವಂತೆ ಕೋರಿದರು. 10ಕೋಟಿ ಹೊಸ ಊರಲ್ಲಿ ರೋಡ್ ಮಾಡಿದ್ದು. 13 ಕೋಟಿ ಟೆಂಡರ್ ಆಗಿತ್ತು. ಹೊಸ ಸರಕಾರ ಬಂದು ವಾಪಸ್ ಪಡೆದಿತ್ತು. ಈಗ ಮತ್ತೆ 10 ಕೋಟಿ ಅನುದಾನ ತಂದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದರು. ಹಳೇಗುಬ್ಬಿ ವೆಂಕಟೇಶ್ ಅವರು ಮಳೆಬಂದಾಗ ರಸ್ತೆ ಹದಗೆಟ್ಟಿದೆ ಎಂದರು. ಶೀಘ್ರವೇ ಸರಿಪಡಿಸಿಕೊಡಿಡುವುದಾಗಿ ತಿಳಿಸಿದರು.
ಸುಭಾಷ್‍ನಗರದ ಮಹೇಶ್ ಕರೆ ಮಾಡಿ ಚರ್ಚ್ ಎದುರಿನ ರಸ್ತೆಯಲ್ಲಿ ಚರಂಡಿಯಿಲ್ಲ. ಮಳೆನೀರುಬಂದಾಗ ಮನೆಗೆ ನೀರು ನುಗ್ಗುತ್ತಿದೆ ಎಂದರು. ಈ ಬಾರಿ ಅನುದಾನ ಹಾಕಿ ಚರಂಡಿ ನಿರ್ಮಿಸಿಕೊಡುವುದಾಗಿ ಶಾಸಕರು ತಿಳಿಸಿದರು. ಸಾತೇನಹಳ್ಳಿ ಗೇಟ್ ಶ್ವೇತಾ ಅವರು ಕರೆ ಮಾಡಿ ಸ್ಟ್ರೀಟ್ ಲೈಟ್, ರೋಡ್ ಹಾಕಿಸಿಕೊಡುವಂತೆ ಕೋರಿದರು.
ರಸ್ತೆ ಸರಿಪಡಿಸುವಂತೆ ಕರೆಗಳೇ ಹೆಚ್ಚು:
ಧನಂಜಯ ಗೌರಿಪುರ ಕೊಳವೆಬಾವಿ ಮಂಜೂರಾತಿಗೆ ಕೋರಿದರೆ, ಚೇಳೂರಿನ ವಜ್ರಯ್ಯ ಎಂಬುವರು ಕರೆ ಮಾಡಿ ಮೂಗಹುಣಸೆ, ಗೊಲ್ಲರಹಟ್ಟಿ, ಕೊಡಿಯಾಲ ಗೇಟ್‍ನಿಂದ ರಸ್ತೆ ಮಾಡಿಸಿಕೊಡುವಂತೆ ಕೋರಿದರು. ಅದಲಗೆರೆ ಈಶ್ವರಯ್ಯ ಅವರು ಸಾಗರನಹಳ್ಳಿ ಗೇಟ್‍ನಿಂದ ವಿರೂಪಾಕ್ಷಪುರ ಡಾಂಬರೀಕರಣ ಆಗಬೇಕೆಂದರು. ಶಾಸಕರು ಮಾಡಿಸಿಕೊಡುವ ಭರವಸೆ ನೀಡಿದರು. ಮಹೇಶ್ ಜವರೇಗೌಡನಪಾಳ್ಯದಲ್ಲಿ ರಸ್ತೆ ಸಮಸ್ಯೆ ತುಂಬಾ ಆಗಿದ್ದು, ಇನ್ನೂ ಒಂದೂವರೆ ತಿಂಗಳಲ್ಲಿ 1 ಕೋಟಿ ಹಾಕಿ ಕಾಂಕ್ರೀಟ್ ರಸ್ತೆ ಮಾಡಿಸಿಕೊಡುವುದಾಗಿ ತಿಳಿಸಿದರು. ಶಿವನೇಹಳ್ಳಿ –ಮತ್ತಿಕೆರೆ ರಸ್ತೆ ಸರಿಪಡಿಸಿಕೊಡಬೇಕೆಂದು ಮಾಡಿದ ಕರೆಗೆ ಕೋವಿಡ್‍ನಿಂದ ಟೆಂಡರ್ ಆದರೂ ವಿಳಂಬವಾಗಿತ್ತು.
ಕುಡುಕರ ಹಾವಳಿ:
ಮಡೇನಹಳ್ಳಿ ಮಾದೇವಯ್ಯ ಹೊಸ ಬಡಾವಣೆ ರಸ್ತೆ ಮಾಡಿಸಿಕೊಡುವಂತೆ ಕೋರಿ, ಹೈಸ್ಕೂಲ್ ಬಳಿಯೆಕುಡುಕರ ಹಾವಳಿ ಹೆಚ್ಚಾಗಿದ್ದು ಧ್ವಜಸ್ತಂಬವನ್ನೇ ಕಿತ್ತುಹಾಕಿದ್ದಾರೆಂದರು. ಪೊಲೀಸರನ್ನು ಕಳುಹಿಸಿಕೊಡುವುದಾಗಿ ಶಾಸಕರು ತಿಳಿಸಿದರು. ಸೋಮ್ಲಾಪುರದಿಂದ ಕರೆ ಮಾಡಿ ಸ್ಕೂಲ್ ಬಳಿಯೇ ಮನೆಯವರು ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು ಕಡಿವಾಣ ಹಾಕುವಂತೆ ಕೋರಿದರು.
2000 ಖಾತೆ ಪೆಂಡಿಂಗ್:
ದೇವರಾಜು ಯರ್ರಬಳ್ಳಿಯಿಂದ ಕರೆ ಮಾಡಿ ಮಠದಹಳ್ಳಿ ಕೆರೆಗೆ ನೀರು ಹರಿಸುವಂತೆ ಕೋರಿದರು. ಮಂಜುನಾಥ್ ಜಿ.ಹರಿವೆಸಂದ್ರ ಕರೆ ಮಾಡಿ 16 ಜನಕ್ಕೆ ಸಾಗುವಳಿ ಚೀಟಿ ನೀಡಿದ್ದು, 7 ಜನರಿಗೆ ಖಾತೆ ಆಗಿಲ್ಲ. ಹಾಲಿಇದ್ದ ತಹಸೀಲ್ದಾರ್ ಸಮರ್ಪಕವಾಗಿ ಕೆಲ್ಸ ಮಾಡದೆ ತೊಂದರೆಯಾಗಿದ್ದು, ಕ್ಷೇತ್ರದಲ್ಲಿ 1500 ರಿಂದ 2000 ಖಾತೆ ಪೆಂಡಿಂಗ್ ಇದೆ. ಶೀಘ್ರ ಎಲ್ಲರಿಗೂ ಮಾಡಿಸಿಕೊಡುವುದಾಗಿ ತಿಳಿಸಿದರು.
ಸೈಯದ್ ಇಲಿಯಾಜ್ ಮಾತನಾಡಿ ಅಲ್ಪಸಂಖ್ಯಾತರಿಗೆ ಸಮುದಾಯಭವನ ಮಾಡಿಸಿಕೊಡುವಂತೆ ಕೋರಿದರು. ಸೋಮವಾರ ಅರ್ಜಿ ಕೊಡಿ ಎಂದರು. ಉಮಾದೇವಿ ಚೇಳೂರು ಗ್ರಾಪಂ ಸದಸ್ಯೆ 3ನೇ ವಾರ್ಡ್ ರೋಡ್, ಕುಡಿಯುವ ನೀರಿನ ಸಮಸ್ಯೆ ನೀಗಿಸುವಂತೆ ಕೋರಿದರು. ಬುಧವಾರ ಗ್ರಾಪಂಗೆ ಬರುವುದಾಗಿ ತಿಳಿಸಿದರು.
ಯೋಗೀಶ್ ಬಿಕೆಗುಡ್ಡ ಮಾತನಾಡಿ ನಮ್ಮೂರಿಗೆ ಮೂಲಸೌಕರ್ಯ ಎಲ್ಲಾ ಸಿಕ್ಕಿದ್ದು, ಬಸ್ ಸೌಕರ್ಯ ಕಲ್ಪಿಸುವಂತೆ ಕೋರಿದರು. ರಸ್ತೆ ನಿರ್ಮಾಣವಾದ ಮೇಲೆ ಗಳಗಕ್ಕೆ ಹೋಗುವ ಬಸ್ ಅನ್ನು ನಿಮ್ಮೂರಿನ ಮೇಲೆ ಹೋಗುವಂತೆ ಮಾಡುವುದಾಗಿ ಶಾಸಕರು ತಿಳಿಸಿದರು.
ಅಳಿಲುಘಟ್ಟದ ಕಿರಣ್‍ಕುಮಾರ್ ಕರೆ ಮಾಡಿ ದೇವಸ್ಥಾನ ಬೀದಿ ಸರಿಪಡಿಸುವಂತೆ ಕೋರಿದರೆ, ನಾಗರಾಜು ಕುಂಟರಾಮನಹಳ್ಳಿ ಅವರು ಕರೆ ಮಾಡಿ ಮಂಚಲದೊರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ನೀಡುವಂತೆ ಕೋರಿದರು. ಎಂಬಿಬಿಎಸ್ ಮಾಡಿರುವ ಡಾಕ್ಟರ್ ಊರಿಗೆ ಕೊಡಿ ಎಂದರು. ಮಣಿಕಂಠ ಎಂಬುವರು ಕರೆ ಮಾಡಿ ಡೇಟಾ ಎಂಟ್ರಿ ತರಬೇತಿ ಮುಗಿದರೂ ಪ್ರಮಾಣ ಪತ್ರ ಇನ್ನೂಪ.ಪಂ ಕೊಟ್ಟಿಲ್ಲ ಎಂದರು. ಸೋಮವಾರ ಕಚೇರಿಗೆ ಬನ್ನಿ, ಪ್ರಮಾಣಪತ್ರ ಕೊಡಿಸುವುದಾಗಿ ಶಾಸಕರು ತಿಳಿಸಿದರು. ಶಿವರಾಮಪುರ ರಾಘವ್, ಎಂಎಸ್.ಪಾಳ್ಯದಡಿ ವಸತಿ ನಿರ್ಮಾಣಕ್ಕೆ ಸಾಲಸೌಲಭ್ಯ ಕೊಡಿಸುವಂತೆ ಕೋರಿದರು. ಶ್ರೀನಿವಾಸಮೂರ್ತಿ ಎಂಬುವರು ಕರೆ ಮಾಡಿ ಹೇರೂರಿನ ಗ್ರಾಪಂ ವ್ಯಾಪ್ತಿಯ ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕೆಂದು ಕೋರಿದರು.
ಹೊಸಕರೆಯಿಂದ ಹರೀಶ್ ಕರೆ ಮಾಡಿ ಸೋಮ್ಲಾಪುರದಿಂದ ಹೊಸಕೆರೆ ರಸ್ತೆ ನಿರ್ಮಿಸುವಂತೆ ಕೋರಿದರು. ಕೋವಿಡ್‍ನಿಂದ ವಿಳಂಬವಾಗಿದ್ದು, ಶೀಘ್ರದಲ್ಲಿ ಚಾಲನೆ ಕೊಡಿಸುವುದಾಗಿ ತಿಳಿಸಿದರು.
ಚಂದನ್ ದೊಡ್ಡಕುನ್ನಾಲಕರೆ ಮಾಡಿ ನಮ್ಮ ದೊಡ್ಡ ಕುನ್ನಾಲ, ಕೋಡಹಳ್ಳಿಗೆ ಹೋಗುವ ರಸ್ತೆ, ಬಹಳಷ್ಟು ವರ್ಷಗಳಿಂದ ಹದಗೆಟ್ಟಿದೆ. ಈ ಬಗ್ಗೆ ಹಲವು ಬಾರಿ ಗಮನಕ್ಕೆ ತಂದಿದ್ದೇವೆ.ಕಂಬಯ್ಯನಪಾಳ್ಯದ ರಸ್ತೆ ಕಳಪೆಕಾಮಗಾರಿಯಾಗಿದೆ ಎಂದು ದೂರಿದರು. ಗುತ್ತಿಗೆದಾರರನ್ನು ಕರೆಸಿ ಮಾತಾಡುವುದಾಗಿ ತಿಳಿಸಿದರು.
ಎಂಕಾಂ ವಿದ್ಯಾರ್ಥಿನಿವಿದ್ಯಾ ಎಂಬುವರು ಕರೆ ಮಾಡಿ ವಾರಕ್ಕೊಮ್ಮೆ ಮಾತ್ರ ಚೇಳೂರು ಆಸ್ಪತ್ರೆಗೆ ಲಸಿಕೆ ಬರುತ್ತಿದ್ದು, ಲಸಿಕೆ ಹಾಕಿಸಿಕೊಡಿ ಎಂದು ಕೋರಿದರು. ಶಾಸಕರು ಹಾಕಿಸಿಕೊಡುವ ಭರವಸೆ ನೀಡಿದರು.
ಚೇಳೂರು ಗ್ರಾಪಂ ಭ್ರಷ್ಟಾಚಾರ ಬಯಲು :
ಚೇಳೂರಿಂದ ಮಹೇಶ್ ಎಂಬುವರು ಕರೆ ಮಾಡಿ ಗ್ರಾಪಂನಲ್ಲಿ ತುಂಬಾ ಅಕ್ರಮಗಳು ನಡೆಯುತ್ತಿದ್ದು, ಇಸ್ವತ್ತಿಗೆ 16 ರಿಂದ 20 ಸಾವಿರ, ಎನ್‍ಓಸಿ 6 ರಿಂದ 8 ಸಾವಿರ, ಮನೆ ಮಂಜೂರಾತಿಗೆ 25000 ಲಂಚ, ತ್ಯಾಜ್ಯ ಸಾಗಣೆ ವಾಹನಕ್ಕೆ 20 ಲಕ್ಷ ಬಿಲ್ ಮಾಡಿದ್ದು, ಒಂದೇ ಜಾಗಕ್ಕೆ ಮೂರು ಸರಿ ಬಿಲ್ ಮಾಡುತ್ತಿದ್ದು, 12ಸಾವಿರ ದುಡ್ಡುಕೊಟ್ಟರು ಕಾಪಿ ಕೊಡಲು ಮತ್ತೆ 2 ಸಾವಿರ ಕೇಳಿದ್ದಾರೆ ಎಂದು ದೂರಿದರು. ಬಸ್‍ಸ್ಟ್ಯಾಂಡ್ ತಿಪ್ಪೇ ಆಗಿದೆ. 3 ಕೋಟಿ ಬಸ್‍ಸ್ಟ್ಯಾಂಡ್ ವಿಸ್ತರಿಸಿ ತುಮಕೂರು ರಸ್ತೆಯಲ್ಲಿ ಚರಂಡಿ ಮಾಡಿ ಎಸ್ಟಿಮೇಟ್ ಕಳುಹಿಸಿದ್ದು ಅಪ್ರೂವಲ್ ಆಗಿದ್ದು ಮಾಡಿಸುವುದಾಗಿ ತಿಳಿಸಿದರು.
ಹೊಸಹಳ್ಳಿ ಕ್ರಾಸ್‍ನಲ್ಲಿ ಬಸ್‍ಡಿಪೋ, ಶೀಘ್ರ ಎಚ್‍ಎಎಲ್ ಲೋಕಾರ್ಪಣೆ :
ಜಿ.ಹೊಸಹಳ್ಳಿ ಕ್ರಾಸ್ ಸರಕಾರಿ ಲ್ಯಾಂಡ್ 5ಕಿಮಿ ವ್ಯಾಪ್ತಿಯಲ್ಲಿ ಒಂದೇ ಒಂದು ಗುಂಟೆ ಜಮೀನು ಸಿಗೊಲ್ಲ. ರೇಷ್ಮೆ ಇಲಾಖೆ ಜಾಗದಲ್ಲಿ ಪ್ರಪೋಸಲ್ ಮಾಡಿದ್ದು,ಕೆಎಸ್‍ಆರ್‍ಟಿಸಿ ಹ್ಯಾಂಡ್‍ಓವರ್ ಮಾಡಬೇಕಿದೆ ಎಂದರು. ಗಣಿಬಾಧಿತ ಪುನರ್ವಸತಿ ನಿಧಿಯಡಿ ಸಮಗ್ರವಾದ ಕ್ರಿಯಾಯೋಜನೆ ರೂಪಿಸಿ ಕಳುಹಿಸಿಕೊಡಲಾಗಿತ್ತು. ನಮ್ಮ ತಾಲೂಕಿಗೆ 12 ಕೋಟಿ ನಿಗದಿಯಾಗಿದೆ. ಆದರೆ ಹಣ ಬಿಡುಗಡೆಯಾಗುವಲ್ಲಿ ವಿಳಂಬವಾಗಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.ಎಚ್‍ಎಎಲ್‍ಗೆ 620 ಎಕರೆ ಜಾಗ ಮಂಜೂರು ಮಾಡಿ ಅಲ್ಲಿದ್ದ ಸಾಗುವಳಿದಾರರನ್ನು ಸ್ಥಳಾಂತರಿಸಿ ಕಾಂಪೌಂಡ್ ಹಾಕುವಲ್ಲೂ ಸಮಸ್ಯೆಯಾಯಿತು. ಈಗ ಕಾಮಗಾರಿ ಪೂರ್ಣವಾಗುತ್ತಿದ್ದು,ಶೀಘ್ರ ಲೋಕಾರ್ಪಣೆ ಆಗಲಿದೆ ಎಂದರು.
ಅಧಿಕಾರಿಗಳ ತಪ್ಪಿಗೆ ರೈತರ ಪರಿತಾಪ :
ಅಧಿಕಾರಿಗಳು ಕಚೇರಿಯಲ್ಲಿಕುಳಿತು ರೆವಿನ್ಯೂ ಗೋಮಾಳ, ಗೋಕಟ್ಟೆ ಜಾಗವನ್ನು ಸ್ಥಳಪರಿಶೀಲನೆ ನಡೆಸದೆ ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿದೆ ಎಂದು ಘೋಷಿಸಿ ಸುಪ್ರೀಂಕೋರ್ಟ್‍ಗೆ ಪ್ರಮಾಣ ಪತ್ರ ಸಲ್ಲಿಸಿದ್ದರಿಂದ ಅರಣ್ಯ ಇಲಾಖೆಯವರು ಹಾಗೂ ಹಾಗಲವಾಡಿ-ಚೇಳೂರು ಭಾಗದ ರೈತರ ನಡುವೆ ಆಗಾಗ್ಗೆ ಸಂಘರ್ಷ ನಡೆಯುತ್ತಿದೆ. ಅರಣ್ಯ ಇಲಾಖೆಯವರು ತಮಗೆ ಘೋಷಿತವಾದ ಜಾಗಕ್ಕೆ ಇನ್ನೂ ಖಾತೆ ಮಾಡಿಸಿಕೊಳ್ಳದೆ ಇರುವುದು ಕಂಡುಬಂದಿದೆ. ಪಹಣಿಯಲ್ಲಿ ಇನ್ನೂ ಗೋಮಾಳ, ಗುಂಡುತೋಪು ಎಂದೇ ಬರುತ್ತಿದ್ದು, ಬಗರ್‍ಹುಕುಂ ಸಮಿತಿ ಮಂಜೂರಾತಿ ಸಂದರ್ಭದಲ್ಲೂ ಈ ಲೋಪವನ್ನು ಅಧಿಕಾರಿಗಳು ನಿವಾರಿಸಿಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ ಎಂದು ಶಾಸಕ ಶ್ರೀನಿವಾಸ್ ಹೇಳಿ, ಬಹಳಷ್ಟು ರೈತರಿಗೆ ಸಾಗುವಳಿ ಚೀಟಿ ದೊರೆಯುವಂತಾಗಲು ಕಾಗೋಡು ತಿಮ್ಮಪ್ಪ ಅವರ ಇಚ್ಚಾಶಕ್ತಿ ಕಾರಣ. ಅಂತಹ ಸಚಿವರನ್ನೇ ನಾನು ಕಂಡಿಲ್ಲ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಹಕಾರ, ಅಭಿವೃದ್ಧಿ ಸ್ಮರಿಸಿದ ಜನತೆ :
ಭರತ್ ಕಿಟ್ಟದಗುಡ್ಡೆ ಎಂಬುವರು ಕರೆ ಮಾಡಿ ಹಿಂದೆ ಡಿಪ್ಲೊಮೋ ಮಾಡಲು ನೀವು ಸಹಾಯ ಮಾಡಿದ್ದ ಪರಿಣಾಮ 50 ಸಾವಿರ ವೇತನದ ಉದ್ಯೋಗ ಹಿಡಿದಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು. ಕರೆ ಮಾಡಿದ ಹಲವರು ನಮ್ಮೂರಿಗೆ ಆ ಸೌಲಭ್ಯ ಕೊಟ್ಟಿದ್ದೀರಿ, ಈ ಸೌಲಭ್ಯ ಕಲ್ಪಿಸಿದ್ದೀರಿ ಎನ್ನುತ್ತಲೇ ಮತ್ತಷ್ಟು ಅಭಿವೃದ್ಧಿ ಬೇಡಿಕೆಯನ್ನು ಶಾಸಕರ ಮುಂದೆ ಇಡುತ್ತಿದ್ದುದು ಫೋನ್‍ಇನ್‍ನಲ್ಲಿ ಕಂಡುಬಂತು. ಕರೆ ಮಾಡಿದ ಪ್ರತಿಯೊಬ್ಬರನ್ನು ಗುರುತಿಸಿ ಆತ್ಮೀಯರಂತೆ ಮಾತನಾಡಿಸಿದ ಶಾಸಕರು ಸಮಸ್ಯೆ ನಿವಾರಿಸಲು ಆಗಿರುವ ತೊಡಕುಗಳ ಬಗ್ಗೆಯೂ ನೇರವಾಗಿ ಜನರ ಮುಂದಿಟ್ಟು , ಪರಿಹಾರದ ಬಗ್ಗೆಯೂ ತಿಳಿಸಿದರು. ಜನಸಂಪರ್ಕದ ಉತ್ತಮ ವೇದಿಕೆ ಕಲ್ಪಿಸಿಕೊಟ್ಟ ಪ್ರಜಾಪ್ರಗತಿ-ಪ್ರಗತಿ ವಾಹಿನಿಗೂ ಕೃತಜ್ಞತೆ ಸಲ್ಲಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ