ಗುಬ್ಬಿ : ಯುಜಿಡಿ ಯೋಜನೆಯ ಕಳಪೆ ಕಾಮಗಾರಿ

 ಗುಬ್ಬಿ : 

      ಆಮೆಗತಿಯಲ್ಲಿ ಸಾಗಿರುವ ಯುಜಿಡಿ ಒಳಚರಂಡಿ ಯೋಜನೆಯು ಸಂಪೂರ್ಣ ಕಳಪೆ ಗುಣಮಟ್ಟದಲ್ಲಿದೆ. ಈಗಾಗಲೇ ಈ ಯೋಜನೆಯ ಭಾಗಶಃ ಹಣ ಮಂಜೂರು ಮಾಡಲಾಗಿ ಇನ್ನೂ ಸಾಕಷ್ಟು ಕೆಲಸ ಬಾಕಿ ಇದೆ. ಉಳಿದ ಹಣ ಮಂಜೂರಾತಿ ಮಾಡದೇ ಯೋಜನೆಯ ಹಲವಡೆ ದುರಸ್ಥಿ ಕಾರ್ಯ ಮೊದಲು ಮಾಡಬೇಕು ಎಂದು ಪಪಂ ಸದಸ್ಯರು ಒಕ್ಕೊರಲಿನ ಒತ್ತಾಯ ಮಾಡಿದರು.

     ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ನೇತೃತ್ವವಹಿಸಿ ಪಪಂ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದ ಎಲ್ಲಾ ಸದಸ್ಯರು ಒಳಚರಂಡಿ ಯೋಜನೆಯ ವೈಪಲ್ಯಕ್ಕೆ ಅಸಮಾಧಾನ ಹೊರಹಾಕಿದರು. 21.42 ಕೋಟಿ ರೂಗಳಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಆರಂಭವಾದ ಈ ಯುಜಿಡಿ ಒಳಚರಂಡಿ ಯೋಜನೆಯು ಆರಂಭದಿಂದಲೂ ಗುಣಮಟ್ಟ ಕೆಡಿಸಿಕೊಂಡು ಸಾಗಿದೆ ಎಂದು ದೂರಿದರು.

      ಈಗಾಗಲೇ 16 ಕೋಟಿ ರೂಗಳನ್ನು ನೀಡಲಾಗಿದೆ. ಆದರೆ ಗುತ್ತಿಗೆದಾರರು ಪಟ್ಟಣದಲ್ಲಿ ಅವಳಡಿಸಿದ ಚೇಂಬರ್‍ಗಳು ಒಡೆದುಹೋಗಿವೆ. ಹಲವು ಬಡಾವಣೆಯಲ್ಲಿ ನಿವಾಸಿಗಳು ಈ ಪೈಪ್‍ಲೈನ್ ಬಳಸಿಕೊಂಡಿದ್ದಾರೆ. ಇನ್ನೂ ಸಂಪೂರ್ಣಗೊಳ್ಳದ ಕಾಮಗಾರಿಗೆ ಪೂರ್ಣ ಹಣ ನೀಡಿದರೆ ಗುತ್ತಿಗೆದಾರರು ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಹುಡುಕಬೇಕಾಗುತ್ತದೆ ಎಂದು ಆರೋಪಿಸಿದ ಸದಸ್ಯ ಸಿ.ಮೋಹನ್ ಮತ್ತು ಕುಮಾರ್ ಪಟ್ಟಣದ ಬಹುತೇಕ ಬಡಾವಣೆಯಲ್ಲಿ ರಸ್ತೆ ಅಭಿವೃದ್ದಿ ಕೆಲಸ ನಡೆದಿದೆ. ಯುಜಿಡಿ ಪೈಪ್‍ಲೈನ್ ಹಾಳಾಗಿದ್ದರೆ ಮತ್ತೇ ಈ ರಸ್ತೆಗಳನ್ನು ಅಗೆಯಲಾಗುತ್ತದೆ. ಇದು ಪಟ್ಟಣ ಪಂಚಾಯಿತಿಗೆ ದೊಡ್ಡ ನಷ್ಟವಾಗಲಿದೆ ಎಂದು ಕಿಡಿಕಾರಿದರು.

      ರಾಜ್ಯ ಹೆದ್ದಾರಿಯಾಗಲಿರುವ ಪಟ್ಟಣದ ಎಂ.ಜಿ.ರಸ್ತೆಯ ನಿರ್ವಹಣೆ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಸಲ್ಲದು. ಇದರ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಬೇಕಿದೆ. ಈ ಬಗ್ಗೆ ಪತ್ರ ಮೂಲಕ ಇಲಾಖೆಗೆ ಹಸ್ತಾಂತರಿಸಲು ಸದಸ್ಯ ಜಿ.ಸಿ.ಕೃಷ್ಣಮೂರ್ತಿ ಒತ್ತಾಯಿಸಿ ಸಂತೇಮೈದಾನವೇ ಕಸ ವಿಲೇವಾರಿ ಘಟಕವಾಗಿರುವುದು ವಿಷಾದನೀಯ. ಸಂಬಂಧಿಸಿದ ಅಧಿಕಾರಿಗಳು ಸಂತೇಮೈದಾನದತ್ತ ಸುಳಿದಿಲ್ಲ. ಈ ಬಗ್ಗೆ ವರ್ಷದಿಂದ ದೂರು ಬರುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯ ಕಾಣುತ್ತಿದೆ ಎಂದು ದೂರಿದರು.

      ಪಟ್ಟಣ ಪಂಚಾಯಿತಿಗೆ ಆದಾಯದ ಮೂಲವಾದ ತೆರಿಗೆ ಸಂಗ್ರಹ ವಿಳಂಬವಾಗುತ್ತಿದೆ. ಸಿಬ್ಬಂದಿಗಳು ಚುರುಕಿನ ಕೆಲಸ ಮಾಡಿ ಬಾಕಿ ಇರುವ ತೆರಿಗೆ ಹಣ ಸಂಗ್ರಹಿಸಬೇಕು ಎಂದು ಸೂಚಿಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಪಪಂ ವ್ಯಾಪ್ತಿಯ ಅಂಗಡಿ ಮಳಿಗೆ ಸಂಕೀರ್ಣದ ಬಾಡಿಗೆದಾರರು ಬಾಕಿ ನಿಲ್ಲಿಸಿರುವ ಹಣ ಸುಮಾರು 85 ಲಕ್ಷ ರೂಗಳಾಗಿವೆ. ಈ ಬಗ್ಗೆ ಗಂಭೀರ ಕ್ರಮವಹಿಸಬೇಕಿದೆ. ಮುಂದಿನ ಸೋಮವಾರ ಗಡುವು ನೀಡಿ ಬಾಕಿ ವಸೂಲಿ ಮಾಡಬೇಕು. ಹಣ ನೀಡದ ಅಂಗಡಿಗಳಿಗೆ ಪೊಲೀಸ್ ನೆರವಿನಲ್ಲಿ ಬೀಗ ಹಾಕಿಸುವ ಕೆಲಸ ಮಾಡಲು ಸೂಚಿಸಿದರು.

      ಯುಜಿಡಿ ಯೋಜನೆಯ ವಿಳಂಬ ಮತ್ತು ಕಳಪೆ ಬಗ್ಗೆ ಬಂದ ದೂರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಹತ್ತಾರು ವರ್ಷದಿಂದ ಈ ಯೋಜನೆಯ ಗುಣಮಟ್ಟ ಪರಿಶೀಲನೆ ನಡೆಸದ ಅಧಿಕಾರಿಗಳಿಗೆ ನಾಚಿಕೇ ಇಲ್ಲವೇ ಎಂದು ಕಿಡಿಕಾರಿದರು. ಈ ಯೋಜನೆಯ ಅಂತಿಮ ಹಂತಕ್ಕೆ ಅವಶ್ಯವಿರುವ ಫ್ಲಾಂಟ್ ನಿರ್ಮಾಣಕ್ಕೆ 7 ಎಕರೆ ಪ್ರದೇಶ ಭೂ ವಶಕ್ಕೆ ಪಪಂ ಮುಂದಾಗಿದೆ. ಈ ಕ್ರಮಕ್ಕೆ ಸಂಬಂಧಿಸಿದ ರೈತರೊಂದಿಗೆ ಸೋಮವಾರ ಚರ್ಚಿಸಲು ಸಭೆ ಆಯೋಜನೆ ಮಾಡಲಾಗುವುದು. 90 ಲಕ್ಷ ರೂಗಳ ಬಾಕಿಯಲ್ಲಿ 44 ಲಕ್ಷ ರೂಗಳನ್ನು ಈಗಾಗಲೇ ನೀಡಲಾಗಿದೆ. ಉಳಿದ ಹಣ ನೀಡುವ ಮುನ್ನಾ ಎಲ್ಲಾ ಪ್ರಕ್ರಿಯೆ ಮುಗಿಸಿ ದುರಸ್ಥಿ ಕಾರ್ಯಕ್ಕೂ ಚಾಲನೆ ನೀಡಲು ಸೂಚಿಸಿರುವುದಾಗಿ ತಿಳಿಸಿದರು.

      ಈ ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಮಹಾಲಕ್ಷ್ಮೀ ಲೋಕೇಶ್‍ಬಾಬು, ಮುಖ್ಯಾಧಿಕಾರಿ ಯೋಗೀಶ್, ಇಂಜಿನಿಯರ್ ಸತ್ಯನಾರಾಯಣ್, ನೀರು ಸರಬರಾಜು ಮತ್ತು ಒಳಚರಂಡಿ ಉಪವಿಭಾಗದ ಎಇಇ ಕೆ.ಸಿದ್ದನಂಜಯ್ಯ, ಜೆಇ ಗಂಗಾರೆಡ್ಡಿ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap