‘ಬಿಜೆಪಿ ಸರ್ಕಾರದ ಆಡಳಿತ ಕುಸಿಯುತ್ತಿದೆ’ – ಡಾ.ಜಿ.ಪರಮೇಶ್ವರ್

 ಗುಬ್ಬಿ : 

      ಸಾರಿಗೆ ನೌಕರರ ಬೇಡಿಕೆಗಳನ್ನು ಆಲಿಸಬೇಕಾದ ರಾಜ್ಯ ಬಿಜೆಪಿ ಸರ್ಕಾರ ಎಸ್ಮಾ ಜಾರಿ ಮಾಡುವ ಬೆದರಿಕೆಯೊಡ್ಡಿರುವುದು ವಿಪರ್ಯಾಸ ಸರ್ಕಾರದ ಆಡಳಿತ ಕುಸಿಯುತ್ತಿದೆ ಎಂಬುದಕ್ಕೆ ಈ ಸಾರಿಗೆ ನೌಕರರ ಮುಷ್ಕರ ನಿದರ್ಶನವಾಗಿದೆ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ತಿಳಿಸಿದರು.

      ತಾಲ್ಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎನಿಸಿರುವ ಸಾರಿಗೆ ಸಿಬ್ಬಂದಿಗಳ ಧರಣಿ ಅಂತ್ಯಕ್ಕೆ ಸರ್ಕಾರ ಮುಂದಾಗದೇ ಸಿಬ್ಬಂದಿಗಳಿಗೆ ಬೆದರಿಸುವ ತಂತ್ರ ಬಳಸಿದೆ. ಪ್ರತಿಭಟನಾ ನಿರತರೊಂದಿಗೆ ಚರ್ಚಿಸುವ ಸೌಹಾರ್ದ ಮನೋಭಾವ ಸಚಿವರಲ್ಲಿ ಕಾಣುತ್ತಿಲ್ಲ. ದಬ್ಬಾಳಿಕೆ ನಡೆಸುವ ಪ್ರವೃತ್ತಿ ಬಿಜೆಪಿಗೆ ಅಂಟಿಕೊಂಡಿದೆ ಎಂದು ತಿಳಿಸಿದರು.

     ಆರ್ಥಿಕವಾಗಿ ತೊಂದರೆ ಎದುರಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಲ್ಲದ ಕೃಷಿ ವಿರೋಧಿ ನೀತಿಗೆ ಆದ್ಯತೆ ನೀಡಿದೆ. ಶೇ.60 ರಷ್ಟು ಮಂದಿ ಕೃಷಿ ಕಾರ್ಮಿಕರ ಕಷ್ಟ ಆಲಿಸದೇ ಕೇವಲ ಬಂಡವಾಳಶಾಹಿಗಳ ಪರ ನಿಲ್ಲುವ ಸರ್ಕಾರ ಹೌಸ್ ರೂಲ್ಸ್‍ಗಳನ್ನು ಮುರಿದು ಎಲ್ಲಾ ಬಿಲ್ ಪಾಸ್ ಮಾಡುತ್ತಿದೆ. ಮಂಡನೆ ಮಾಡುವ ಮುನ್ನ ಯಾವುದೇ ವಿಚಾರವನ್ನು ಶಾಸಕರಿಗೆ ಅದರ ಪ್ರತಿ ನೀಡಿ ಸಾಧಕ ಬಾಧಕ ಚರ್ಚಿಸಬೇಕಿದೆ. ಸದನದಲ್ಲಿ ಕಾಲಿಟ್ಟ ತಕ್ಷಣ ಗೋಹತ್ಯೆ ನಿಷೇಧದ ಬಗ್ಗೆ ಪಾಸ್ ಎನ್ನುತ್ತಾರೆ. ಕೃಷಿಕರ ಆಧಾರವಾದ ಗೋವುಗಳನ್ನು ಸಾಕಿ ಸಲಹಿದ ರೈತ ಸಂಕಷ್ಟದಲ್ಲಿ ಮಾರಾಟ ಮಾಡುವಂತಿಲ್ಲ. 12 ವರ್ಷದ ಬಳಿಕ ಮಾರಾಟ ಮಾಡಲು ಅವಕಾಶ ನೀಡದೆ ಮುದಿತನದ ಗೋವುಗಳನ್ನು ಸಾಕಿ ಸಲಹಿಸುವ ಚೈತನ್ಯ ರೈತರಲಿಲ್ಲ. ನಿತ್ಯ ನೂರು ರೂಗಳ ಮೇವು ಹೊಂಚಬೇಕಿದೆ. ಸಂಕಷ್ಟದಲ್ಲಿ ಹೇಗೆ ಮೇವು ಹೊಂಚುತ್ತಾರೆ. 40 ಲಕ್ಷ ಟನ್ ಮೇವು ಅಗತ್ಯತೆ ಸರ್ಕಾರ ಹೇಗೆ ಪೊರೈಸುತ್ತದೆ. ಎಲ್ಲವನ್ನೂ ತಾಂತ್ರಿಕ ಅಂಶದಲ್ಲಿ ಚರ್ಚಿಸದೇ ಕಾನೂನು ಮಂಡನೆ ಅಷ್ಟೇ ಮಾಡಿರುವುದು ದುರುದ್ದೇಶವೆನಿಸಿದೆ ಎಂದರು.

      ಕೇಂದ್ರ ಸರ್ಕಾರದಿಂದ ಯಾವುದೇ ಸಹಕಾರ ರಾಜ್ಯಕ್ಕೆ ದೊರೆಕಿಲ್ಲ. ನೆರೆಹಾವಳಿ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ನೀಡಿದ ಅಂಕಿಅಂಶ ಪ್ರಕಾರ 35 ಸಾವಿರ ಕೋಟಿ ರೂಗಳ ನಷ್ಟ ಸಂಭವಿಸಿದೆ. ಮರಳಿ ಮತ್ತೊಮ್ಮೆ 12 ಸಾವಿರ ಕೋಟಿ ಮತ್ತು ಆರು ಜಿಲ್ಲೆಗಳಿಂದ 9 ಸಾವಿರ ಕೋಟಿ ರೂಗಳ ನಷ್ಟ ಲೆಕ್ಕ ನೀಡಲಾಗಿತ್ತು. ಆದರೆ ಸರ್ಕಾರ ನಮ್ಮ ಪಾಲಿನ ತೆರಿಗೆ ಹಣದ ಶೇರು ಹಣವನ್ನು ನೀಡದೆ ಸತಾಯಿಸಿದೆ.

      ಇಂತಹ ಸಂದಿಗ್ಧ ಪರಿಸ್ಥಿತಿ ತಂದ ಬಿಜೆಪಿ ಬಗ್ಗೆ ಜನವಿರೋಧಿ ಅಭಿಪ್ರಾಯ ಬಂದಿದೆ ಎಂದ ಅವರು, ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಗೆ ಪರಾಮರ್ಶೆ ನಡೆಸುವ ಅಗತ್ಯವಿಲ್ಲ. ಅಲ್ಲಿ ಜೆಡಿಎಸ್ ಮತಗಳು ಬಿಜೆಪಿಗೆ ಹರಿದ ಕಾರಣ ನಮಗೆ ಸೋಲು ಕಂಡಿದೆ. ಜೆಡಿಎಸ್ ಜತೆ ಹೊಂದಾಣಿಕೆ ರಾಜಕಾರಣ ನಡೆಸಿದ ಬಿಜೆಪಿ ಹಣದ ಹೊಳೆ ಹರಿಸಿತ್ತು. ಅಧಿಕಾರ ದುರ್ಬಳಕೆ ಕೂಡಾ ಮಾಡಲಾಗಿತ್ತು. ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ಮತ್ತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು.

      ನಿಗಮ ಸ್ಥಾಪನೆಯನ್ನು ಜಾತಿಗೊಂದರಂತೆ ರಚಿಸಬೇಕಿದೆ. ಬಿಜೆಪಿ ಮತ ಬೇಟೆಗೆ ಸಲ್ಲದ ತಂತ್ರ ರಚಿಸಿಕೊಂಡು ಈಗ ಎಲ್ಲಾ ಜಾತಿಯೂ ಕೇಳುತ್ತಿರುವ ನಿಗಮ ಸ್ಥಾಪನೆ ಮಾಡಲೇಬೇಕಿದೆ. ಇದೇ ರೀತಿ ಮುಂದುವರೆದಲ್ಲಿ ನಿಗಮದ ಮಹತ್ವ ಕಳೆದುಹೋಗುತ್ತದೆ. ಈ ಜತೆಗೆ ತಮಗೆ ಬೇಕಾದ ರೀತಿ ಕಾನೂನು ತಿದ್ದುಪಡಿ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಶೋಷಿತರ ಉದ್ದಾರಕ್ಕೆ ಕನಸು ಕಂಡ ದೇವರಾಜು ಅರಸು ಅವರ ಕನಸು ನುಚ್ಚುನೂರು ಮಾಡುತ್ತಿರುವ ಇಂದಿನ ಸರ್ಕಾರ ಮನಬಂದಂತೆ ನಿಗಮ ರಚನೆ ಹಾಗೂ ಉಳುವವನೇ ಭೂಮಿ ಒಡೆಯ ಎಂಬ ಕಾಯಿದೆ ತಿದ್ದುಪಡಿ ಕೇವಲ ಬಂಡವಾಳಶಾಹಿಗಳ ಮನವೊಲಿಸಲು ನಡೆದಿದೆ ಎಂದು ಆರೋಪಿಸಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷ ಸಂಘಟನೆ ನಡೆಸಲಾಗುವುದು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಗೆ ತಾಲ್ಲೂಕಿನ ಕಾಂಗ್ರೆಸ್ ಮುಖಂಡರನ್ನು ಒಗ್ಗೂಡಿಸಿ ನಡೆಸಲು ಕಾರ್ಯತಂತ್ರ ನಡೆಸಲಾಗಿದೆ. ಭಿನ್ನಾಭಿಪ್ರಾಯಗಳಿಂದ ಹೊರತಂದು ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡಲಾಗುವುದು ಎಂದರು.

      ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಮಾತನಾಡಿ, ಗೋಮಾಂಸ ರಫ್ತು ಮಾಡುವ ಕಂಪನಿಗಳು ಅತೀ ಹೆಚ್ಚು ಬಿಜೆಪಿ ಮುಖಂಡರ ಒಡೆತನದಲ್ಲಿವೆ. ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಿಂದ ಗೋಮಾಂಸ ರಫ್ತು ದ್ವಿಗುಣಗೊಂಡಿರುವುದು ಅಂಕಿಅಂಶದಲ್ಲಿವೆ ಎಂದು ತಿಳಿಸಿದ ಅವರು, ಗೋಹತ್ಯೆ ನಿಷೇಧ ಕಾನೂನು ತರುವ ಮುನ್ನ ಅದರ ಆಗುಹೋಗು ಚರ್ಚಿಸಬೇಕಿತ್ತು. ಕೇವಲ ಕಾರ್ಪೋರೆಟ್ ಸಂಸ್ಥೆಗಳ ಅಧೀನದಲ್ಲಿ ಕೇಂದ್ರ ಸರ್ಕಾರ ನಡೆದಿದೆ. ಎಲ್ಲವೂ ಬಂಡವಾಳಶಾಹಿಗಳ ಕಂಪೆನಿಯದ್ದಾಗಿದೆ. ನಾಲ್ಕನೇ ಅಂಗವಾದ ಮಾಧ್ಯಮ ಸಂಸ್ಥೆಗಳು ಕಾರ್ಪೋರೆಟ್ ಸಂಸ್ಥೆಗಳು ನಡೆಸಿರುವುದು ಮತ್ತೊಂದು ವಿಪರ್ಯಾಸ ಎನಿಸಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.

      ದೇಶದೆಲ್ಲಡೆ ಗೋಹತ್ಯೆ ನಿಷೇಧದ ಒಂದೇ ಕಾನೂನು ಜಾರಿ ಮಾಡಲಾಗದೆ ಆಯ್ದ ಕೆಲ ರಾಜ್ಯಗಳಲ್ಲಿ ಕಾಯಿದೆ ಜಾರಿಯ ಹಿಂದೆ ಕೂಡಾ ಬಂಡವಾಳಶಾಹಿಗಳ ಕಂಪೆನಿಗಳಿವೆ. ಒಟ್ಟಾರೆ ಅನಿಯಮಿತ ಎಮರ್ಜೆನ್ಸಿ ದೇಶದಲ್ಲಿ ಕಣ್ಣಿಗೆ ಕಾಣದಂತೆ ಜಾರಿಯಾಗುತ್ತಿದೆ. ವಿರೋಧ ಪಕ್ಷ, ಚುನಾಯಿತ ಪ್ರತಿನಿಧಿಗಳ ಚರ್ಚೆಗೆ ಅವಕಾಶವಿಲ್ಲ. ಯಾರೊಬ್ಬರೂ ಇವರ ಆಡಳಿತ ಬಗ್ಗೆ ಮಾತನಾಡುವಂತಿಲ್ಲ ಎಂದು ತಿಳಿಸಿದ ಅವರು ಮೋದಿ ಅವರ ಸುಳ್ಳು ಆಶ್ವಾಸನೆ ಪಟ್ಟಿ ಬೆಳೆದಿದೆ. 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ಕಪ್ಪುಹಣ ತಂದು ಬಡವರಿಗೆ 15 ಲಕ್ಷ ಹಂಚುವ ಸುಳ್ಳು ಭರವಸೆಗೆ ಜನ ಮರಳಾಗಿದ್ದರು. ಅವರ ನಿಜವಾದ ಬಣ್ಣ ಈಗ ಜನರಿಗೆ ತಿಳಿಯುತ್ತಿದೆ. ಇಂತಹ ಪಕ್ಷಕ್ಕೆ ನಾನು ಹೋಗುವುದಾಗಿ ವದಂತಿ ಹಬ್ಬಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭ ಕೆಲ ಭಿನ್ನ ವರ್ತನೆ ತೋರಿದ್ದು ಸಹಜ ಆದರೆ ಕಾಂಗ್ರೆಸ್ ಬಿಡುವ ಮಾತು ಆಡಿರಲಿಲ್ಲ ಎಂದರು.

      ಈ ಸಂದರ್ಭದಲ್ಲಿ ಮಾಜಿ ಶಾಸಕ ಷಫಿ ಅಹಮದ್, ಕೆಪಿಸಿಸಿ ವಕ್ತಾರ ಮುರುಳೀಧರ್ ಹಾಲಪ್ಪ, ರೇವಣ್ಣಸಿದ್ದಯ್ಯ, ಗುಬ್ಬಿ ಬ್ಲಾಕ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ, ನಿಟ್ಟೂರು ಬ್ಲಾಕ್ ಅಧ್ಯಕ್ಷ ನಿಂಬೆಕಟ್ಟೆ ಜಯಣ್ಣ, ಮುಖಂಡರಾದ ಹೊನ್ನಗಿರಿಗೌಡ, ಶಂಕರಾನಂದ್, ಮಹಮದ್ ಸಾದಿಕ್, ಬಿ.ಅರ್.ಭರತ್‍ಗೌಡ, ಸಲೀಂಪಾಷ, ಜಿ.ವಿ.ಮಂಜುನಾಥ್, ಜಿ.ಎಸ್.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link