ವೈದ್ಯರ ನಿರ್ಲಕ್ಷ್ಯ : ಮಗು ಸಾವು ; ಆಸ್ಪತ್ರೆಯಲ್ಲಿ ಶವವಿಟ್ಟು ಪ್ರತಿಭಟನೆ!

ಗುಬ್ಬಿ :


      ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ದಿವ್ಯ ನಿರ್ಲಕ್ಷ್ಯದಿಂದ ಹೆರಿಗೆ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಮತ್ತು ಸಂಬಂಧಿಕರು ಮಗುವಿನ ಶವವಿಟ್ಟು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.

      ತಾಲ್ಲೂಕಿನ ಕೋಣನಕೆರೆ ಗ್ರಾಮದ ಗರ್ಭಿಣ ಮಂಜಮ್ಮ ಅವರನ್ನು ಸೋಮವಾರ ರಾತ್ರಿ ಹೆರಿಗೆ ನೋವು ಬಂದ ಹಿನ್ನಲೆ ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ತಡರಾತ್ರಿ ತೀವ್ರ ಹೊಟ್ಟೆನೋವಿನಿಂದ ನರಳಿದರೂ ವೈದ್ಯರು ಮತ್ತು ಸಿಬ್ಬಂದಿ ತೋರಿದ ನಿರ್ಲಕ್ಷ್ಯಕ್ಕೆ ಮಗು ಹೊಟ್ಟೆಯಲ್ಲೆ ಸಾವನ್ನಪ್ಪಿದೆ. ಬೆಳಿಗ್ಗೆ ವೈದ್ಯೆ ರೇಖಾ ಅವರು ಶಸ್ತ್ರ ಚಿಕಿತ್ಸೆ ನಡೆಸಿ ಮಗು ಸಾವನ್ನಪ್ಪಿರುವ ಬಗ್ಗೆ ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ವೈದ್ಯರ ನಿರ್ಲಕ್ಷ್ಯವನ್ನು ಖಂಡಿಸಿ ಸಾವನ್ನಪ್ಪಿದ ಮಗುವಿನ ಶವದೊಂದಿಗೆ ದಿಢೀರ್ ಪ್ರತಿಭಟನೆಯನ್ನು ನಡೆಸಿದರು.

ಕಂಗಾಲದ ಕುಟುಂಬಸ್ಥರು :

      ರಾತ್ರಿ ವೇಳೆ ಸಮಸ್ಯೆ ಕಂಡುಬಂದಲ್ಲಿ ಪೆÇೀಷಕರಿಗೆ ತಿಳಿಸಬೇಕಿತ್ತು. ಒಂದು ತಿಂಗಳಿಂದ ಮಗುವಿನ ಬೆಳವಣಿಗೆ ಕುಂಠಿತ ಎಂಬ ಕಾರಣ ನೀಡುತ್ತಿದ್ದಾರೆ. ಆದರೆ ಗರ್ಭಿಣಿ ಮಂಜಮ್ಮ ಪ್ರತಿ ತಿಂಗಳು ಇಲ್ಲೇ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆಗ ಕಾಣದ ಕುಂಠಿತ ಬೆಳವಣಿಗೆ ಈಗ ಕಾಣಸಿಕೊಂಡಿತೇ? ಇದು ತಮ್ಮ ತಪ್ಪು ಮುಚ್ಚಿಕೊಳ್ಳುವ ಪ್ರಯತ್ನ ಎಂದು ಮೃತ ಮಗುವಿನ ಕಡೆಯವರು ಕಿಡಿಕಾರಿದರು. 7 ವರ್ಷದ ನಂತರ ಗರ್ಭಿಣಿಯಾಗಿದ್ದ ಮಂಜಮ್ಮ ಅವರಿಗೆ ಎರಡು ಕುಟುಂಬಗಳು ಸಾಕಷ್ಟು ಆರೈಕೆಯಲ್ಲಿ ನೋಡಿಕೊಂಡಿದ್ದು, ತಮ್ಮ ನಿರೀಕ್ಷೆಯನ್ನು ಹುಸಿ ಮಾಡಿದ ವೈದ್ಯರ ಬೇಜವಾಬ್ದಾರಿತನಕ್ಕೆ ಕಂಗಾಲದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ವೈದ್ಯರ ವಿರುದ್ಧ ಘೋಷಣೆ :

      ತೀವ್ರ ಆಕ್ರೋಶಗೊಂಡ ಸಂಬಂಧಿಕರು ವೈದ್ಯರ ವಿರುದ್ಧ ಘೋಷಣೆ ಕೂಗಿ ಸುಮಾರು 4 ತಾಸು ಪ್ರತಿಭಟಿಸಿದರು. ಸ್ಥಳಕ್ಕೆ ಮೇಲಾಧಿಕಾರಿಗಳು ಬಂದು ಸಮಂಜಸ ಉತ್ತರ ನೀಡಲಿಲ್ಲ ಎಂದು ಕಿಡಿಕಾರಿದ ಸಂತ್ರಸ್ತ ಕುಟುಂಬಸ್ಥರು ತಹಸೀಲ್ದಾರ್ ಸ್ಥಳಕ್ಕೆ ಬರುವಂತೆ ಆಗ್ರಹಿಸಿದರು. ಗುಬ್ಬಿ ಪಿಎಸ್‍ಐ ಜ್ಞಾನಮೂರ್ತಿ ಕೂಡಲೇ ಆಗಮಿಸಿ ಪ್ರತಿಭಟನಾನಿರತರನ್ನು ಸಮಾಧಾನಗೊಳಿಸುವ ಪ್ರಯತ್ನ ಮಾಡಿದರು. ಆದರೂ ಬಿಗಿಪಟ್ಟು ಹಿಡಿದ ಧರಣಿ ನಿರತರು ಕರ್ತವ್ಯ ಲೋಕವೆಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ನಂತರ ಸ್ಥಳಕ್ಕೆ ಧಾವಿಸಿದ ಗ್ರೇಡ್-2 ತಹಸೀಲ್ದಾರ್ ಶಶಿಕಲಾ ಅವರು ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಮಗು ಕಳೆದುಕೊಂಡವರಿಗೆ ಸಾಂತ್ವಾನ ಹೇಳಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ತಿಳಿಸುವ ಭರವಸೆಯ ಬಳಿಕ ಪ್ರತಿಭಟನೆ ಹಿಂಪಡೆದರು.

ದುರಂತಗಳಿಗೆ ಯಾರು ಹೊಣೆ :

      ಗುಬ್ಬಿ ಆಸ್ಪತ್ರೆಯಲ್ಲಿ ಆಗಾಗ ನಡೆಯುವ ಇಂತಹ ದುರಂತಗಳಿಗೆ ಯಾರು ಹೊಣೆ ಹೊರುವುದಿಲ್ಲ ಮತ್ತು ಇಲ್ಲಿನ ಮುಖ್ಯ ವೈದ್ಯಾಧಿಕಾರಿ ಎಲ್ಲ ವಿಚಾರಗಳಲ್ಲೂ ಹಾರಿಕೆ ಉತ್ತರ ನೀಡುತ್ತಾರೆ. ಇವರು ಈಗಾಗಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಕೋಪಕ್ಕೆ ಗುರಿಯಾಗಿದ್ದರೂ ಸ್ಥಳೀಯ ಶಾಸಕರ ಬೆಂಬಲದಿಂದ ಗುಬ್ಬಿಯಲ್ಲೇ ಇದ್ದಾರೆ. ಇಂತಹ ವೈದ್ಯರನ್ನು ಯಾಕೆ ಉಳಿಸಬೇಕು ಇಂದು ಮಗುವಿನ ಜೀವ ಹೋದರೂ ಪೋಷಕರಿಗೆ ಪ್ರತಿಭಟನಕಾರರಿಗೆ ಸಮಾಧಾನ ಹೇಳಲಿಲ್ಲ ಇಂಥವರನ್ನು ಶಾಸಕರು ರಕ್ಷಿಸುವುದು ಎಷ್ಟು ಸೂಕ್ತ ಎಂದು ಜನ ಆಸ್ಪತ್ರೆಯ ಮುಂದೆ ದೂರಿಕೊಳ್ಳುತ್ತಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link