ಗುಬ್ಬಿ :
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ವಿರೂಪಗೊಳಿಸಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ವಿಳಂಬ ಅನುಸರಿಸಿ ಒಂದು ವರ್ಷ ಪೊರೈಸಿದ ಹಿನ್ನಲೆಯಲ್ಲಿ ಹೋರಾಟಗಾರರು ಕರಾಳ ದಿನವಾಗಿ ಪ್ರತಿಭಟನೆ ನಡೆಸಿದರು.
ಸಾಮಾಜಿಕ ಹೋರಾಟಗಾರರು ಹಾಗೂ ವಿವಿಧ ಸಂಘಟನೆಯ ಪದಾಧಿಕಾರಿಗಳು ಶಿಕ್ಷಣ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ಸಿಬ್ಬಂದಿಗಳಿಗೆ ಗುಲಾಬಿ ಹೂವು ನೀಡಿ ಸಿಹಿ ಹಂಚಿ ವಿಭಿನ್ನವಾಗಿ ಆಕ್ರೋಶ ಹೊರಹಾಕಿದರು. ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು.
ಕಳೆದ ವರ್ಷ ಡಿಸೆಂಬರ್ ಮಾಹೆ 13 ರಂದು ಸರ್ಕಾರಿ ಪ್ರೌಢಶಾಲೆಯ ಕೊಠಡಿಯೊಂದರಲ್ಲಿ ರಾಷ್ಟ್ರಧ್ವಜವನ್ನು ವಿರೂಪಗೊಳಿಸಿ ಬಿಸಾಡಿದ ಘಟನೆ ತಾಲ್ಲೂಕಿನಾದ್ಯಂತ ವೈರಲ್ ಆಗಿದ್ದ ವಿಚಾರವಾಗಿತ್ತು. ಈ ಪ್ರಕರಣಕ್ಕೆ ಮೊದಲು ತನಿಖೆ ಆರಂಭಿಸಿ ತಾಲ್ಲೂಕು ಆಡಳಿತ ಆರಂಭದಲ್ಲಿ ಒಂದು ತಿಂಗಳ ವಿಳಂಬ ಅನುಸರಿಸಿದೆ. ನಂತರ ದೇಶಪ್ರೇಮಿಗಳ ಹೋರಾಟದ ಮುನ್ಸೂಚನೆ ಕಂಡ ತಕ್ಷಣ ಪೊಲೀಸ್ ಠಾಣೆಯಲ್ಲಿ 40 ದಿನಗಳ ನಂತರ ಎಫ್ಐಆರ್ ಹಾಕಲಾಗಿ ಇಡೀ ಘಟನೆಗೆ ಪ್ರಮುಖ ಸಾಕ್ಷಿಯಾಗಿದ್ದ ಸಿಸಿ ಕ್ಯಾಮರಾ ಫೂಟೇಜ್ ಹಾಗೂ ಹಾರ್ಡಿಸ್ಕ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೂಲಕ ಪೊಲೀಸ್ ಇಲಾಖೆ ಕೈಕಟ್ಟಿ ಕೂತಿದೆ. ಅಲ್ಲಿನ ವರದಿಗಾಗಿ ಕಾಯುವ ಮೂಲಕ ಕಾಲಹರಣ ಮಾಡಿ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಎಫ್ಐಆರ್ ಮಾಡಿದ ಗುಬ್ಬಿ ಪೊಲೀಸರ ತನಿಖೆ ಕೂಡಾ ಎಫ್ಎಸ್ಎಲ್ ವರದಿ ಬರಬೇಕು ಎಂಬ ಕಾರಣದಲ್ಲೇ ಪ್ರಕರಣ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ ಜಿ.ಆರ್.ರಮೇಶ್, ಈ ಸಂಬಂಧ ಶಿಕ್ಷಣ ಸಚಿವರ ಗಮನಕ್ಕೂ ತಂದಿದೆ. ಆದರೂ ತನಿಖೆ ವಿಳಂಬವಾಗಿದೆ. ಸ್ಥಳಕ್ಕೆ ಶಿಕ್ಷಣ ಆಯುಕ್ತರು ಆಗಮಿಸಿ ಆರೋಪಿ ಬಂಧಿಸುವ ಭರವಸೆ ನೀಡುವವರೆಗೆ ಅನಿರ್ಧಿಷ್ಟಾವದಿ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಾ.ಪ್ರದೀಪ್ಕುಮಾರ್ ಹಿರೇಮಠ ಹಾಗೂ ಸಿಪಿಐ ರಾಮಕೃಷ್ಣಯ್ಯ ಅವರಿಗೂ ಗುಲಾಬಿ ನೀಡಿ ಸಿಹಿ ಹಂಚಿದ ಪ್ರತಿಭಟನಾಕಾರರು ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ಸಿಹಿ ಹಂಚಿ ಆರೋಪಿ ರಕ್ಷಿಸಿ ವರ್ಷ ಪೊರೈಸಿದ್ದಕ್ಕೆ ಅಭಿನಂದನೆ ಸಲ್ಲಿಸಿ ವಿಡಂಬಾನಾತ್ಮಕವಾಗಿಯೇ ಖಂಡಿಸಿದರು. ಬೆಳಿಗ್ಗೆಯಿಂದ ಗಾಂಧೀಜಿ ಭಾವಚಿತ್ರದೊಂದಿಗೆ ಮೌನ ಪ್ರತಿಭಟನೆ ಆರಂಭಿಸಿ ಇಡೀ ಘಟನೆಯ ವಿವರ ಪಡೆದ ಸಾರ್ವಜನಿಕರು ಶಿಕ್ಷಣ ಮತ್ತು ಪೊಲೀಸ್ ಇಲಾಖೆಗೆ ಛೀಮಾರಿ ಹಾಕಿ ಬಿಇಓ ಸೋಮಶೇಖರ್ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.
ಪ್ರತಿಭಟನೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಅದಲಗೆರೆ ಶ್ರೀನಿವಾಸ್, ಜಿ.ಎಸ್.ಮಂಜುನಾಥ್, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ವಿನಯ್ಕುಮಾರ್, ಉಪಾಧ್ಯಕ್ಷ ಮಧು, ವಾಸು, ರಮೇಶ್ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ