ಗುಬ್ಬಿ : ವೈಭವಯುತವಾಗಿ ನಡೆದ ಜಾತ್ರಾ ಮಹೋತ್ಸವ

ಗುಬ್ಬಿ :

     ಪಟ್ಟಣದ ಐತಿಹಾಸಿಕ ಪ್ರಸಿದ್ದ ಶ್ರೀ ಗೋಸಲ ಚನ್ನಬಸವೇಶ್ವರಸ್ವಾಮಿವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾಧಿಗಳ ಸಮ್ಮುಖದಲ್ಲಿ ರಥೋತ್ಸವವು ಅತ್ಯಂತ ವೈಭವಯುತವಾಗಿ ನಡೆಯಿತು.

     ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನಡೆದವು ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾಧಿಗಳು ತಮ್ಮ ಇಷ್ಠಾರ್ಥ ಪೂಜೆ ಸಲ್ಲಿಸಿದರು. ಕೋವಿಡ್ ನಿಯಮಾವಳಿಗಳನ್ನು ಅನುಸರಿಸಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಧ್ವಜಾರೋಹಣದಿಂದ ಈವರೆವಿಗೆ ಸರ್ಕಾರದ ಆದೇಶದಂತೆ ಧಾರ್ಮಿಕ ಆಚರಣೆಗಳನ್ನು ನಡೆಸಲಾಗಿದೆ. ಪ್ರಮುಖ ಆಕರ್ಷಣೆಯ ರಥೋತ್ಸವ ಕಾರ್ಯಕ್ರಮವು ಬೆಳಿಗ್ಗೆಯಿಂದ ಎಲ್ಲಾ ಧಾರ್ಮಿಕ ಕೈಕಂರ್ಯಗಳನ್ನು ನಡೆಸಲಾಗಿ ಮದ್ಯಾಹ್ನ 1.15 ಕ್ಕೆ ರಥೋತ್ಸವ ಜರುಗಿಸಲಾಯಿತು.

      ಸಾವಿರಾರು ಭಕ್ತರ ಆಗಮನದ ಈ ಜಾತ್ರೆಯಲ್ಲಿ ಕೆಲ ನಿಯಮಾವಳಿಗಳನ್ನು ಜಿಲ್ಲಾಡಳಿತ ಜಾರಿ ಮಾಡಿತ್ತು. ಭಕ್ತರು, ಹದಿನೆಂಟು ಕೋಮಿನ ಮುಖಂಡರು ಮತ್ತು ಜಾತ್ರಾ ಸಮಿತಿ ಸರ್ಕಾರದ ಆದೇಶವನ್ನು ಜಾಚು ತಪ್ಪದೇ ಪಾಲಿಸಿ ಜಾತ್ರೆ ನಡೆಸಿದೆ. ಪೊಲೀಸರ ಬಿಗಿ ಬಂದೋಬಸ್ತ್‍ನೊಂದಿಗೆ ಭಕ್ತರಲ್ಲಿ ಕೊರೋನಾ ಜಾಗೃತಿ ಮೂಡಿಸಲಾಗುತ್ತಿತ್ತು. ಪ್ರತಿವರ್ಷದಂತೆ ನಡೆಯಬೇಕಿದ್ದ ಪಾನಕ ಫಲಹಾರ ಹಂಚುವ ಕಾರ್ಯಕ್ಕೆ ಈ ಬಾರಿ ಬ್ರೇಕ್ ಬಿದ್ದಿತು. ಅನೇಕ ಸಂಘಸಂಸ್ಥೆಗಳು ಪಾನಕ ವ್ಯವಸ್ಥೆ ಮಾಡುತ್ತಿದ್ದವು. ಈ ಬಾರಿ ಸರ್ಕಾರದ ಆದೇಶಕ್ಕೆ ಕಟ್ಟುಬಿದ್ದು ತಮ್ಮ ಸೇವಾ ಕಾರ್ಯವನ್ನು ಸ್ಥಗಿತಗೊಳಿಸಿದವು.

      ದೇವಾಲಯದಲ್ಲಿ ಭಕ್ತರ ಸರದಿಯಲ್ಲಿ ಸಾಮಾಜಿಕ ಅಂತರ ಕಾಯುವ ಜಾಗೃತಿ ಮೂಡಿಸಲಾಯಿತು. ಈ ಬಾರಿ ಕೊರೋನಾ ಅರಿವು ಮೂಡಿಸಿಕೊಂಡ ಬಹುತೇಕ ಭಕ್ತರು ಮಾಸ್ಕ್ ಕಡ್ಡಾಯವಾಗಿ ಬಳಸಿದ್ದು ವಿಶೇಷ ಎನಿಸಿತ್ತು. ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದರು. ದಾಸೋಹ ವ್ಯವಸ್ಥೆಯಲ್ಲೂ ಗಡಿಬಿಡಿ ಆಗದಂತೆ ಮುನ್ನೆಚ್ಚರಿಕೆವಹಿಸಲಾಯಿತು. ಈ ಜಾತ್ರೆಗೆ ಆಗಮಿಸುವ ಭಕ್ತರು ಹರಕೆ ಕಟ್ಟುವ ಮತ್ತು ಹರಕೆ ಸಲ್ಲಿಸುವ ಸಂಪ್ರದಾಯ ಶತಮಾನಗಳಿಂದ ನಡೆದು ಬಂದಿದೆ. ರಥೋತ್ಸವಕ್ಕೆ ಬಾಳೆಹಣ್ಣು ದವನ ಎಸೆಯುವ ಮೂಲಕ ತಮ್ಮ ಭಕ್ತಿ ಪ್ರದರ್ಶಿಸಿದ ಭಕ್ತರಲ್ಲಿ ಸವ ವಿವಾಹಿತ ಜೋಡಿಗಳ ಸಂಖ್ಯೆ ಹೆಚ್ಚಾಗಿತ್ತು. ಈ ಬಾರಿ ಬಸವಣ್ಣನ ಮೇಲೇರಿ ನಗಾರಿ ಬಾರಿಸುವ ಯುವಕರ ನೃತ್ಯ ತಂಡ ಜಾತ್ರೆಯಲ್ಲಿ ವಿಶೇಷವಾಗಿ ಆಕರ್ಷಿಸಿತು.

      ಹೊರ ಜಿಲ್ಲೆಯ ಭಕ್ತರ ಸಂಖ್ಯೆ ವಿರಳ ಎನಿಸಿದರೂ ಸ್ಥಳೀಯರು ಶ್ರದ್ದಾಭಕ್ತಿಯಿಂದಲೇ ಬೆಳಿಗ್ಗೆಯಿಂದ ಮದ್ಯಾಹ್ನದವರೆಗೆ ಸುಡುಬಿಸಿಲು ಲೆಕ್ಕಿಸದೇ ರಥೋತ್ಸವ ನೋಡಿದರು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ನೊಣವಿನಕೆರೆ ಶ್ರೀ ಕರಿವೃಷಭ ದೇಶೀಕೇಂದ್ರ ಸ್ವಾಮೀಜಿ, ತೊರೇಮಠಾಧ್ಯಕ್ಷ ಶ್ರೀ ರಾಜಶೇಖರ ಸ್ವಾಮೀಜಿ, ಬೆಟ್ಟದಹಳ್ಳಿ ಗವಿಮಠಾಧ್ಯಕ್ಷ ಶ್ರೀ ಚಂದ್ರಶೇಖರ ಸ್ವಾಮೀಜಿ, ತವಡೇಹಳ್ಳಿ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಡಾ:ಪ್ರದೀಪ್‍ಕುಮಾರ್‍ಹಿರೇಮಠ್. ತುಮಕೂರು ತಹಸೀಲ್ದಾರ್ ಜಿ.ವಿ.ಮೋಹನ್‍ಕುಮಾರ್, ಕಂದಾಯ ನಿರೀಕ್ಷಕ ರಮೇಶ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಜಿ.ಎನ್.ಅಣ್ಣಪ್ಪಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು, 18 ಕೋಮಿನ ಮುಖಂಡರು ಮತ್ತು ಭಕ್ತಾಧಿಗಳು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link