ಕೇಂದ್ರ ರೈಲ್ವೆ ಸಚಿವರಿಂದ ಗುಬ್ಬಿ-ನಿಟ್ಟೂರು ಜೋಡಿ ಹಳಿ ಮಾರ್ಗ ಲೋಕಾರ್ಪಣೆ

 ತುಮಕೂರು  : 

      ನಿಟ್ಟೂರು ನಡುವಿನ 9 ಕಿಲೋಮೀಟರ್ ಜೋಡಿ ಹಳಿ ಕಾಮಗಾರಿಯನ್ನು 75.5 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಿ ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಎಂದು ಕೇಂದ್ರದ ರೈಲ್ವೆ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕರ ವ್ಯವಹಾರ ಆಹಾರ ಮತ್ತು ನಾಗರಿಕ ಸರಬರಾಜು ಮಂತ್ರಿ ಪಿಯೂಷ್ ಗೋಯಲ್ ತಿಳಿಸಿದರು.

ಗುಬ್ಬಿ-ನಿಟ್ಟೂರು ನಡುವಿನ 9 ಕಿಲೋಮೀಟರ್ ಜೋಡಿ ರೈಲು ಮಾರ್ಗವನ್ನು ವಿಡಿಯೋ ಲಿಂಕ್ ಮೂಲಕ ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

      ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಎರಡು ಪ್ರಮುಖ ಸೇತುವೆ ಮತ್ತು 15 ಸಣ್ಣ ಸೇತುವೆಗಳನ್ನು ನಿರ್ಮಿಸಲಾಗಿದೆ. ಗುಬ್ಬಿ ಮತ್ತು ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಟ್‍ಫಾರ್ಮ್ ಆಶ್ರಯ, ಉನ್ನತಮಟ್ಟದ ಪ್ಲಾಟ್‍ಫಾರ್ಮ್, ಫುಟ್ ಓವರ್ ಬ್ರಿಡ್ಜ್, ಶೌಚಾಲಯ, ಬೆಂಚು, ವಾಟರ್ ಬೂತ್‍ಗಳನ್ನು ನಿರ್ಮಿಸಲಾಗಿದೆ ಎಂದರು.

      ಗುಬ್ಬಿ ನಿಟ್ಟೂರು ನಡುವೆ ಅನುಷ್ಟಾನವಾಗಿರುವ ಈ ಜೋಡಿ ಹಳಿ ನಿರ್ಮಾಣ ಕಾಮಗಾರಿಯು ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ತುಮಕೂರು ಮತ್ತು ಅರಸೀಕೆರೆ (96 ಕಿಲೋಮೀಟರ್) ಹಳಿ ದ್ವಿಪಥೀಕರಣ ಯೋಜನೆಯ ಭಾಗವಾಗಿದೆ. ಈ ಯೋಜನೆಯನ್ನು 2015-16ರಲ್ಲಿ 783 ಕೋಟಿ ರೂ ವೆಚ್ಚದಲ್ಲಿ ಕೈಗೊಳ್ಳಲಾಗಿತ್ತು. ದ್ವಿಪಥೀಕರಣದಿಂದ ಬೆಂಗಳೂರಿನಿಂದ ಹುಬ್ಬಳ್ಳಿ, ಬೆಳಗಾವಿ, ಮುಂಬೈ, ಮತ್ತಿತರ ಸ್ಥಳಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗದ ಸಾಲಿನ ಸಾಮಥ್ರ್ಯ ಹೆಚ್ಚಾಗುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಂತರ್‍ಸಂಪರ್ಕ ಅಭಿವೃದ್ಧಿಯಾಗುತ್ತದೆ. ರೈಲುಗಳು ವೇಗವಾಗಿ ಚಲಿಸಲು ಸಹಾಯಕವಾಗುತ್ತದೆ ಎಂದು ತಿಳಿಸಿದರಲ್ಲದೆ 96 ಕಿಲೋಮೀಟರ್ ದೂರದ ಈ ದ್ವಿಪಥೀಕರಣ ಯೋಜನೆಯಲ್ಲಿ 74 ಕಿಲೋಮೀಟರ್‍ನಷ್ಟು ಕಾಮಗಾರಿ ಈಗಾಗಲೇ ಅನುಷ್ಟಾನಗೊಂಡಿದೆ. ಉಳಿದ ಕಾಮಗಾರಿಯು ಉತ್ತಮವಾಗಿ ಪ್ರಗತಿಯಲ್ಲಿದ್ದು, ಬಾಣಸಂದ್ರ -ನಿಟ್ಟೂರು ನಡುವಿನ ಯೋಜನೆಯನ್ನು ಜೂನ್ ಮಾಹೆಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

     ಇದೇ ಸಮಯದಲ್ಲಿ ಗುಬ್ಬಿ ರೈಲು ನಿಲ್ದಾಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಗುಬ್ಬಿ ನಿಟ್ಟೂರು ಜೋಡಿ ಮಾರ್ಗವನ್ನು ಲೋಕಾರ್ಪಣೆ ಮಾಡಿದ ಸಚಿವರನ್ನು ಅಭಿನಂದಿಸಿದರು.

ಬೆಂಗಳೂರು-ಮೀರಜ್ ಮಾರ್ಗದ ಈ ಜೋಡಿ ಹಳಿ ಮಾರ್ಗವು ಅರಸಿಕೆರೆವರೆಗೂ ಬಾಕಿಯಿರುವ 22 ಕಿಲೋಮೀಟರ್‍ನ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ಬೆಂಗಳೂರು-ಬೆಳಗಾಂ ಮಾರ್ಗವು ರಾಜ್ಯದ ಜನತೆಗೆ ಸದ್ಬಳಕೆಯಾಗುತ್ತದೆ. ಚಿತ್ರದುರ್ಗ-ತಿಪಟೂರು ರೈಲು ಸಂಪರ್ಕ ನಿರ್ಮಿಸಿದರೆ ತುಮಕೂರಿನವರು ಮಂಗಳೂರು, ಮೈಸೂರಿಗೆ ಹೋಗಲು ಅನುಕೂಲವಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.

     ಬೆಂಗಳೂರಿನಿಂದ-ತುಮಕೂರಿನವರೆಗೂ ಸಬರ್ಬನ್/ಮೆಟ್ರೊ ರೈಲು ಮಾರ್ಗವನ್ನು ವಿಸ್ತರಣೆ ಮಾಡಿದರೆ ತುಮಕೂರು-ಬೆಂಗಳೂರು ರಸ್ತೆಯ ವಾಹನ ಸಂಚಾರ ದಟ್ಟಣೆ ಕಡಿಮೆ ಆಗುವುದಲ್ಲದೆ, ಪ್ರತಿದಿನ ಪ್ರಯಾಣಿಸುವವರಿಗೆ ಪ್ರಯೋಜನವಾಗುತ್ತದೆ. ರೈಲ್ವೆ ಅಂಡರ್ ಪಾಸ್ ಮತ್ತು ಲೆವೆಲ್ ಕ್ರಾಸಿಂಗ್‍ನಲ್ಲಿ ಸಮಸ್ಯೆಗಳಿದ್ದು, ನಿವಾರಿಸಲು ರೈಲ್ವೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

      ಸಂಸದ ಜಿ.ಎಸ್ ಬಸವರಾಜು ಮಾತನಾಡಿ, ನನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳನ್ನು ಆದಷ್ಟು ಬೇಗ ಕೈಗೆತ್ತಿಕೊಂಡು ಪೂರ್ಣಗೊಳಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ತುಮಕೂರಿನವರೆಗೂ ಇರುವ ರೈಲು ಮಾರ್ಗದ ವಿದ್ಯುದೀಕರಣ ಸೌಲಭ್ಯವನ್ನು ಅರಸೀಕೆರೆವರೆಗೂ ವಿಸ್ತರಿಸಬೇಕೆಂದು ಬೇಡಿಕೆಯಿಟ್ಟರು.

ದಾವಣಗೆರೆ-ತುಮಕೂರು, ರಾಯದುರ್ಗ-ತುಮಕೂರು ರೈಲು ಮಾರ್ಗವನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರಲ್ಲದೆ, ಕೋವಿಡ್ 19 ಕಾರಣದಿಂದ ಪ್ಯಾಸೆಂಜರ್ ಟ್ರೈನ್ ಅನ್ನು ಸ್ಥಗಿತಗೊಳಿಸಿರುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಆದಷ್ಟು ಬೇಗ ಪ್ಯಾಸೆಂಜರ್ ರೈಲು ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್ ಕುಮಾರ್ ವರ್ಮಾ, ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಕೆ.ಸಿ ಸ್ವಾಮಿ, ಗುಬ್ಬಿ ಪಟ್ಟಣ ಪಂಚಾಯತಿ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ