ಗುಬ್ಬಿ : ಅಸಮರ್ಪಕ ವಿದ್ಯುತ್ : ಗ್ರಾಮಸ್ಥರ ಪ್ರತಿಭಟನೆ

 ಗುಬ್ಬಿ : 

      ಅಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿರುವ ಗುಬ್ಬಿ ಬೆಸ್ಕಾಂ ಅಧಿಕಾರಿಗಳು ರೈತರ ಕಷ್ಟಕ್ಕ ಸ್ಪಂದಿಸುತ್ತಿಲ್ಲ. ಬೇಸಿಗೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ತ್ರೀ-ಫೇಸ್ ವಿದ್ಯುತ್ ನೀಡುವಲ್ಲಿ ಬೇಜವಾಬ್ದಾರಿ ತೋರುತ್ತಿರುವ ಹಿನ್ನಲೆ ಕೃಷಿ ಚಟುವಟಿಕೆ ಹಿನ್ನಡೆಯಾಗಿದೆ. ತೋಟಗಳು ಒಣಗಿನಿಂತು ವಾಣಿಜ್ಯ ಬೆಳೆಗಳು ಕೈ ಸೇರದೆ ರೈತನಿಗೆ ನಷ್ಟ ಉಂಟಾಗುತ್ತಿದೆ. ರೈತರ ಆರ್ಥಿಕ ಸಂಕಷ್ಟಕ್ಕೆ ಬೆಸ್ಕಾಂ ಅಧಿಕಾರಿಗಳು ನೇರ ಹೊಣೆ ಎಂದು ಆರೋಪಿಸಿ ಜಿ.ಹೊಸಹಳ್ಳಿ ಮತ್ತು ಹೇರೂರು ಗ್ರಾಮ ಪಂಚಾಯಿತಿಯ ಎಲ್ಲಾ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ನಡೆಸಿದರು.

      ವಿದ್ಯುತ್ ಸಮಸ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿರುವ ಮೂರು ಪಾಳ್ಯ ಸೇರಿದಂತೆ ಮಡೇನಹಳ್ಳಿ, ಜವರೇಗೌಡನಪಾಳ್ಯ, ತೊರೇಹಳ್ಳಿ, ಕಟ್ಟಿಗೇನಹಳ್ಳಿ, ಗೋಪಾಲಪುರ ಸೇರಿದಂತೆ ಹಲವು ಗ್ರಾಮದ ರೈತರು ಕಂಗಾಲಾಗಿದ್ದಾರೆ. ಬೇಸಿಗೆಯಲ್ಲಿ ಕೊಳವೆಬಾವಿಗಳಲ್ಲಿ ನೀರು ತಳಮುಟ್ಟುತ್ತಿದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿದರೆ ರೈತರ ಪಾಡೇನು ಎಂದು ಪ್ರಶ್ನಿಸಿದ ಗ್ರಾಪಂ ಸದಸ್ಯ ಜೆ.ಎಂ.ನರಸಿಂಹಮೂರ್ತಿ ಸುಟ್ಟು ಹೋಗುವ ಪರಿವರ್ತಕ ಬದಲಾವಣೆಗೆ ತಿಂಗಳುಗಟ್ಟಲೇ ಸಮಯ ಪಡೆದುಕೊಳ್ಳುತ್ತಿದ್ದಾರೆ. ಈ ಜತೆಗೆ ರೈತರಿಂದ ಲಂಚ ಹೊಡೆಯುವ ಅಧಿಕಾರಿಗಳು ಸಾವಿರಾರು ಹಣ ನೀಡಿದ್ದಲ್ಲಿ ಮಾತ್ರ ಪರಿವರ್ತಕ ತಕ್ಷಣ ಬರಲಿದೆ ಎನ್ನುತ್ತಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳು ಗಮನಹರಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಬೇಕು ಎಂದು ಕಿಡಿಕಾರಿದರು.

      ಬೆಳಿಗ್ಗೆ ಪಟ್ಟಣದ ಬೆಸ್ಕಾಂ ಕಚೇರಿ ಮುಂದೆ ಮೊಕ್ಕಂ ಹೂಡಿ ಧರಣಿ ನಡೆಸಿದ ನೂರಾರು ರೈತರು ವಿದ್ಯುತ್ ವಿತರಣೆಯಲ್ಲಿ ಸದಾಕಾಲ ತಡೆಯಾಗುತ್ತಲೇ ಇರುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ವಿದ್ಯುತ್ ನೀಡುವಲ್ಲಿ ಯಾವಾಗಲೂ ತಾಂತ್ರಿಕ ದೋಷವನ್ನೇ ಮುಂದಿಟ್ಟು ಕಾಲಹರಣ ಮಾಡುತ್ತಾರೆ. ದೂರು ಸಲ್ಲಿಸುವ ರೈತರಿಗೆ ಉತ್ತರ ಸಿದ್ದವಾಗಿಟ್ಟುಕೊಳ್ಳುವ ಅಧಿಕಾರಿಗಳು ಸ್ಪಲ್ಪ ಪ್ರಾಬ್ಲಂ ಎಂಬ ಮಾತುಗಳಾಡುತ್ತಾರೆ. ಆದರೆ ಮಧ್ಯೆ ಮಧ್ಯೆ ಕರೆಂಟ್ ವ್ಯತ್ಯಯವಾಗುವುದು ರೈತರ ಪಂಪ್‍ಸೆಟ್‍ಗಳಿಗೆ ತೀವ್ರ ಪೆಟ್ಟು ಬೀಳುತ್ತಿದೆ. ನೂರಾರು ಪಂಪ್ ಮೋಟಾರ್‍ಗಳು ಸುಟ್ಟುಹೋಗಿವೆ. ಏಕಾಏಕಿ ಟ್ರಿಪ್ ಆಗುವ ಕರೆಂಟ್ ಓವರ್‍ಲೋಡ್ ಮೂಲಕ ಎಲ್ಲಾ ವಿದ್ಯುತ್ ಪರಿಕರಗಳನ್ನು ಸುಟ್ಟು ಹಾಕುತ್ತಿದೆ ಎಂದು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ವೆಂಕಟೇಶ್ ದೂರಿದರು.

      ನಾಲ್ಕೈದು ಗಂಟೆಗಳ ತ್ರೀ-ಫೇಸ್ ಎಂದು ಸೂಚನಾ ಪಟ್ಟಿಯಲ್ಲಿ ನಮೂದಿಸುವ ಅಧಿಕಾರಿಗಳು ವಾಸ್ತವದಲ್ಲಿ ಎರಡು ಗಂಟೆಗಳ ಕಾಲ ಕೂಡಾ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಒವರ್‍ಲೋಡ್ ಹೆಸರಿನಲ್ಲೇ ದಿನಗಟ್ಟಲೇ ಕರೆಂಟ್ ನೀಡುವುದೇ ಇಲ್ಲ. ಆಗೂ ಇಂಗೂ ವಿದ್ಯುತ್ ಬಂದರೆ ಹತ್ತು ನಿಮಿಷದಲ್ಲೇ ಸಮಸ್ಯೆ ಎದುರಾಗುತ್ತಿದೆ. ಈ ತಾಂತ್ರಿಕ ಸಮಸ್ಯೆಗಳಿಗೆ ಸರಿಯದ ಉತ್ತರ ಹುಡುಕದ ಅಧಿಕಾರಿಗಳು ಹಳೇ ಕಂಬ ಮತ್ತು ತಂತಿ ಬದಲಾವಣೆ, ಸುಟ್ಟು ಮತ್ತೇ ಸಿದ್ದಗೊಂಡ ಪರಿವರ್ತಕಗಳತ್ತ ನಿಗಾವಹಿಸುವುದು, ತಂತಿಗಳಿಗೆ ತಗಲುವ ಮರದ ಕೊಂಬೆಗಳು, ಜಂಗಲ್ ನಿರ್ವಹಣೆ ಮಾಡುವ ಗೋಜಿಗೆ ಹೋಗುತ್ತಿಲ್ಲ. ನಿತ್ಯ ಸಮಸ್ಯೆಗಳೇ ಹೆಚ್ಚು ಕಾಣುತ್ತಿವೆ. ಬೇಸಿಗೆಯಲ್ಲಿ ರೈತರು ತೋಟ ಕಳೆದುಕೊಳ್ಳಲಿದ್ದಾರೆ ಎಂದು ರೈತಸಂಘದ ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಆರೋಪಿಸಿದರು.

       ಸ್ಥಳಕ್ಕೆ ಧಾವಿಸಿದ ಬೆಸ್ಕಾಂ ಎಇಇ ಅನಿಲ್ ಮತ್ತು ಎಸ್‍ಓ ರಾಜೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು ಸಮಸ್ಯೆಗೆ ಪರಿಹಾರವನ್ನು ಲಿಖಿತ ರೂಪದಲ್ಲಿ ನೀಡುವಂತೆ ಆಗ್ರಹಿಸಿದರು. ಮುಂದಿನ ವಾರದಲ್ಲಿ ಎಲ್ಲಾ ಸಮಸ್ಯೆಗೆ ಪರಿಹಾರ ಸೂಚಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

      ಈ ಸಂದರ್ಭದಲ್ಲಿ ಹೇರೂರು ಗ್ರಾಪಂ ಅಧ್ಯಕ್ಷ ಸೋಮಶೇಖರ್, ಗ್ರಾಪಂ ಸದಸ್ಯರಾದ ರಮೇಶ್, ಕೆಡಿಎಂ ಮಂಜಣ್ಣ, ರೇಣುಕಪ್ಪ, ಮುಖಂಡರಾದ ಪ್ರಕಾಶ್, ರಾಮು, ಸುರೇಶ್, ಹರಿಪ್ರಸಾದ್ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link