ಶಿಕ್ಷಣ, ಆರೋಗ್ಯ ಕ್ಷೇತ್ರಗಳು ವ್ಯಾಪಾರೀಕರಣ ಆಗುತ್ತಿರುವುದು ಆತಂಕ ಮೂಡಿಸುತ್ತಿದೆ

 ಗುಬ್ಬಿ : 

      ಸಮಾಜದಲ್ಲಿ ನಿಜ ಅರ್ಥದ ಸೇವೆ ಒದಗಿಸಬೇಕಾದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಸಂಪೂರ್ಣ ವ್ಯಾಪರೀಕರಣ ಆಗಿರುವುದು ಆತಂಕ ಮೂಡಿಸುತ್ತಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ವಿಷಾದಿಸಿದರು.

      ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕರು ಕಾಲೇಜಿನ ಮೊದಲ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗುಣಮಟ್ಟದ ಶಿಕ್ಷಣ ಒದಗಿಸುವ ಸರ್ಕಾರ ಬಜೆಟ್‍ನಲ್ಲಿ ವಿಶೇಷವಾಗಿ ಮೀಸಲು ಅನುದಾನ ನೀಡುತ್ತದೆ. ದೇಶದ ಅಭಿವೃದ್ಧಿ ಶಿಕ್ಷಣದಲ್ಲಿ ಅಡಗಿದೆ ಎಂಬ ಅಂಶವನ್ನು ಮನಗಂಡ ಸರ್ಕಾರ ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಿದೆ. ಆದರೇ ಈಚೆಗೆ ಶಿಕ್ಷಣ ಕ್ಷೇತ್ರವು ಖಾಸಗಿ ಮಟ್ಟದಲ್ಲಿ ವ್ಯವಹಾರ ನಡೆಸುವಲ್ಲಿ ಮುಂದಾಗಿದೆ. ಇದೇ ಮಾದರಿಯಲ್ಲಿ ಆರೋಗ್ಯ ಕ್ಷೇತ್ರವೂ ನಡೆದುಕೊಳ್ಳುತ್ತಿರುವುದು ಅತ್ಯಂತ ಕೆಟ್ಟ ಸಂಗತಿ ಎಂದರು.

      ಸಕಲ ಸಲವತ್ತು ಒದಗಿಸಿ ಗುಣಮಟ್ಟದ ಶಿಕ್ಷಣ ಒದಗಿಸುವ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರು ಅಸಡ್ಡೆ ತೋರುತ್ತಿದ್ದು, ಇವರು ಹೀಗೇಕೆ ನಡೆದುಕೊಳ್ಳುತ್ತಾರೊ ತಿಳಿಯುತ್ತಿಲ್ಲ. ರ್ಯಾಂಕ್ ಪಡೆದು ಶಿಕ್ಷಣ ಪಡೆದ ಅರ್ಹ ಶಿಕ್ಷಕರನ್ನು ಹೊಂದಿರುವ ಸರ್ಕಾರಿ ಶಾಲೆಗಳ ಬಗ್ಗೆ ಮೊದಲು ಸಮುದಾಯ ಆಸಕ್ತಿ ತೋರಬೇಕು. ಗುಬ್ಬಿಯಲ್ಲಿ 2 ಸಾವಿರ ದಾಖಲಾತಿ ಇರುವ ಸರ್ಕಾರಿ ಡಿಗ್ರಿ ಕಾಲೇಜು ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು. ಸರ್ಕಾರಿ ಶಾಲೆಗಳಿಗೆ ಬೇಕಿರುವ ಸವಲತ್ತುಗಳ ಪಟ್ಟಿ ನೀಡುವ ಸಿಬ್ಬಂದಿಗಳು ಮತ್ತು ಅಭಿವೃದ್ಧಿ ಸಮಿತಿ ಸದಸ್ಯರು ಮುಂದಿನ ಬೆಳವಣಿಗೆ ಬಗ್ಗೆ ಗಮನಹರಿಸಬೇಕು. ಕೆಲಸವಾಗುವವರೆಗೆ ಬೆನ್ನತ್ತಿ ಕಾರ್ಯ ಪೂರ್ಣಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

      ಈ ಸಂದರ್ಭದಲ್ಲಿ ಪ್ರಾಚಾರ್ಯ ಮಂಜುನಾಥ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಿ.ಆರ್.ಶಂಕರ್‍ಕುಮಾರ್, ಸದಸ್ಯರಾದ ಜಿ.ಆರ್.ಅಪ್ಪಾಜಿ, ಜಿ.ಎಸ್.ಸತೀಶ್, ಎಸ್‍ಡಿಎಂಸಿ ಅಧ್ಯಕ್ಷ ಜಿ.ಆರ್.ರಮೇಶ್, ಉಪನ್ಯಾಸಕರಾದ ಯತೀಶ್, ಲೋಕೇಶ್, ಪರಮೇಶ್, ದೇವಿಕಾ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link