‘ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಹೋಗುವುದಿಲ್ಲ’ – ಗುಬ್ಬಿ ಶಾಸಕ

 ಎಂ.ಎನ್.ಕೋಟೆ :

     ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಜೆಡಿಎಸ್ ಪಕ್ಷದಿಂದ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಿ, ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ತಾಲ್ಲೂಕಿನ ನಿಟ್ಟೂರು ಹೋಬಳಿ ಹರದಗೆರೆ ಗ್ರಾಮದ ಬೋವಿ ಕಾಲೋನಿ ರಸ್ತೆಗೆ ಸುಮಾರು 2 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ತಾಲ್ಲೂಕಿನ ಎಲ್ಲಾ ಭಾಗದಲ್ಲಿಯೂ ಸಹ ನಮ್ಮ ಅಭ್ಯರ್ಥಿಗಳು ಇದ್ದಾರೆ. ಸಾಕಷ್ಟು ಜನ ಆಕಾಂಕ್ಷಿಗಳು ಸಹ ಇದ್ದಾರೆ. ಮಾನದಂಡ ಅನುಸರಿಸಿ ಟಿಕೆಟ್ ನೀಡಲಾಗುತ್ತದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಸದೃಢರಾಗಿ ಎಂದು ನಮ್ಮ ಕಾರ್ಯಕರ್ತರಿಗೆ ಈಗಾಗಲೆ ಹೇಳಿದ್ದೇವೆ.

      ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸುಮ್ಮನೆ ಗಾಳಿ ಸುದ್ದಿ ಹರಡುತ್ತಿದೆ. ಇದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಸುದ್ದಿ ಯಾರು ಹಬ್ಬಿಸಿದರೊ ಅವರನ್ನೇ ಕೇಳಬೇಕು. ವಿರೋಧಿಗಳು ನನ್ನ ಬಗ್ಗೆ ಸುಮ್ಮನೆ ಮಾತನಾಡುವುದನ್ನು ಬಿಡಲಿ. ನಾನು ಜೆಡಿಎಸ್‍ನಲ್ಲೇ ಇರುತ್ತೇನೆ. ಮುಂಬರುವ ಜಿಪಂ, ತಾಪಂ ಕ್ಷೇತ್ರಗಳಿಗೆ ಜೆಡಿಎಸ್‍ನಿಂದ ನಮ್ಮ ಅಭ್ಯರ್ಥಿಗಳು ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಪಕ್ಷದಿಂದ ಯಾರಿಗಾದರೂ ಟಿಕೆಟ್ ಕೊಡಲಿ, ಎಲ್ಲರು ಒಗ್ಗಟ್ಟಾಗಿ ಜಿ.ಪಂ, ತಾ.ಪಂ ಕ್ಷೇತ್ರಗಳನ್ನು ಗೆಲ್ಲಬೇಕು. ಕೋವಿಡ್ ಹಿನ್ನೆಲೆಯಲ್ಲಿ ಶಾಸಕರ ಅಭಿವೃದ್ಧಿ ಅನುದಾನ ಬಂದಿರಲಿಲ್ಲ. ಈಗ ನಿಧಾನವಾಗಿ ಹಣ ಬಿಡುಗಡೆಯಾಗುತ್ತಿದ್ದು, ತಾಲ್ಲೂಕಿನ ಎಲ್ಲಾ ರಸ್ತೆಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯುತ್ತಿವೆ. ಗುಣಮಟ್ಟದ ಕೆಲಸ ಮಾಡಲು ತಿಳಿಸಿದ್ದೇನೆ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪಾಧ್ಯಕ್ಷ ಶಂಕರಪ್ಪ, ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಡಿ ದೊಡ್ಡಕೆಂಪಯ್ಯ, ವೇಣುಗೋಪಾಲ್, ಶಿವರಾಜು, ಯೋಗೀಶ್, ಮುಖಂಡರಾದ ಯೋಗಾನಂದ್‍ಕುಮಾರ್, ಪಿಡಿಓ ಮಂಜುನಾಥ್, ಎಂಜಿನಿಯರ್ ಲಿಂಗರಾಜು, ಮುಖಂಡರಾದ ಮಂಜುನಾಥ್, ಗ್ರಾಪಂ ಮಾಜಿ ಸದಸ್ಯ ಚಿದಾನಂದ್, ಪರಮೇಶ್, ಗುತ್ತಿಗೆದಾರ ಶಿವಣ್ಣ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap