ರಾಜ್ಯಕ್ಕೆ ಸದ್ದಿಲ್ಲದೆ ಕಾಲಿಟ್ಟ ಗುಜರಾತ್ ಒಣಮೆಣಸಿನಕಾಯಿ!

ಬೆಂಗಳೂರು:

      ಕೆಲ ದಿನಗಳಿಂದ ಅಮುಲ್ ಕಂಪನಿ ಕರ್ನಾಟಕಕ್ಕೆ ಕಾಲಿಟ್ಟಾಗಿನಿಂದ  ಭಾರೀ ವಿವಾದ ಎಬ್ಬಿಸಿತ್ತು. ಆ ವಿವಾದ ತಕ್ಕಮಟ್ಟಿಗೆ ತಣ್ಣಗಾಯಿತು ಎನ್ನುವಷ್ಟರಲ್ಲಿ ಉತ್ತರ ಕರ್ನಾಟಕದ ಅಸ್ಮಿತೆಯಾದ ಬ್ಯಾಡಗಿ ಮೆಣಸಿನಕಾಯಿಗೆ ಗುಜರಾತ್ ಮೂಲದ ಮೆಣಸಿನಕಾಯಿ ತಳಿ ಸೆಡ್ಡು ಹೊಡೆದಿದೆ. ಏಷ್ಯಾದಲ್ಲೇ ಅತಿ ದೊಡ್ಡ ಮೆಣಸಿನಕಾಯಿ ಮಾರುಕಟ್ಟೆಯೆಂದೇ ಖ್ಯಾತಿ ಪಡೆದಿರುವ ಬ್ಯಾಡಗಿ ಮಾರುಕಟ್ಟೆಗೆ ಗುಜರಾತ್ ಮೆಣಸಿನಕಾಯಿಗಳು ಈಗಾಗಲೇ ಲಗ್ಗೆಯಿಟ್ಟಿವೆ.

     ಗುಜರಾತ್ ನಿಂದ ಕ್ವಿಂಟಾಲ್ ಗಟ್ಟಲೆ ಮೆಣಸಿನ ಕಾಯಿ ಲೋಡ್ ಈಗಾಗಲೇ ಹಾವೇರಿ ಮಾರುಕಟ್ಟೆಗೆ ಕಾಲಿಟ್ಟಿದೆ ಎಂದು ಮೂಲಗಳು ಹೇಳಿವೆ. ಬ್ಯಾಡಗಿ ಮೆಣಸಿನ ಕಾಯಿಯ ಬೆಲೆ ಈಗ ಗಗನಕ್ಕೇರಿದ್ದು, ಈ ಸಂದರ್ಭವನ್ನು ಉಪಯೋಗಿಸಿಕೊಂಡು ಗುಜರಾತ್ ಮೆಣಸಿನಕಾಯಿ ದಾಸ್ತಾನನ್ನು ಹಾವೇರಿ ಮಾರುಕಟ್ಟೆಯಲ್ಲಿ ನುಗ್ಗಿಸಲಾಗಿದೆ ಎಂದು ಹೇಳಲಾಗಿದೆ.

       ಬ್ಯಾಡಗಿ ಮೆಣಸಿನಕಾಯಿ ಬ್ರಾಂಡ್ ಅಡಿಯಲ್ಲಿ ಕಡ್ಡಿ ಹಾಗೂ ಡಬ್ಬಿ ಎಂಬ ಎರಡು ಜಾತಿಗಳಿವೆ. ಗುಜರಾತ್ ನಿಂದ ಬಂದಿರುವ ಮೆಣಸಿನಕಾಯಿಯನ್ನು ಪುಷ್ಪ ಎಂದು ಕರೆಯುತ್ತಾರೆ. ಇದಕ್ಕೆ ಲಾಲಿ ಎಂಬ ಮತ್ತೊಂದು ಹೆಸರೂ ಇದೆ. ಇದರ ಖಾರ ಬ್ಯಾಡಗಿ ಮೆಣಸಿನಕಾಯಿಯಷ್ಟು ಪ್ರಖರವಾಗಿರುವುದಿಲ್ಲ. ಆದರೂ, ಪರವಾಗಿಲ್ಲ ಎನ್ನುವಂತಿದೆ. ಇನ್ನು, ಬಣ್ಣದಲ್ಲಿ ಬ್ಯಾಡಗಿ ಮೆಣಸಿನಕಾಯಿಗಿಂತ ಗಾಢವಾದ ಕೆಂಪು ಬಣ್ಣ ಹೊಂದಿದೆ. ಆದರೆ, ಬಿಸಿಲಿನಲ್ಲಿ ತುಂಬಾ ಹೊತ್ತು ಇಟ್ಟರೆ ಅದರ ಬಣ್ಣ ಕ್ರಮೇಣ ಕುಂದುತ್ತದೆ.

     ಹಾವೇರಿ ಮಾರುಕಟ್ಟೆಯಲ್ಲಿ ಸುಮಾರು 20,000 ಕ್ವಿಂಟಾಲ್ ನಷ್ಟು ಗುಜರಾತ್ ಮೆಣಸಿನಕಾಯಿ ಮಾರಾಟವಾಗಿದೆ ಎಂದು ವರ್ತಕರು ತಿಳಿಸಿದ್ದಾರೆ. ಅಲ್ಲದೆ, ಇನ್ನೂ ಅನೇಕ ವರ್ತಕರು, ಇದರ ಬೆಲೆ ಕಡಿಮೆ ಇರುವುದರಿಂದ ಗುಜರಾತ್ ವರ್ತಕರಿಂದ ಸಾವಿರಾರು ಕ್ವಿಂಟಾಲ್ ಗಳಷ್ಟು ಖರೀದಿಸಿ, ಹಾವೇರಿಯಲ್ಲೇ ಇರುವ ನಾನಾ ಕೋಲ್ಡ್ ಸ್ಟೋರೇಜ್ ಗಳಲ್ಲಿ ದಾಸ್ತಾನು ಮಾಡಿದ್ದಾರೆ ಎಂದು ಹೇಳಲಾಗಿದೆ. ಬ್ಯಾಡಗಿ ಮಾರುಕಟ್ಟೆಯ ಮೆಣಸಿನಕಾಯಿ ಮಾರಾಟಗಾರರಲ್ಲಿ ಏನಿಲ್ಲವೆಂದರೂ ಸುಮಾರು 70 ಮಂದಿಯ ಬಳಿ ಗುಜರಾತ್ ಮೂಲದ ಮೆಣಸಿನಕಾಯಿಯ ದಾಸ್ತಾನು ಇದೆ ಎಂದು ಮೂಲಗಳು ತಿಳಿಸಿವೆ.

     ಸದ್ಯದ ಮಟ್ಟಿಗೆ ಹಾವೇರಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಗುಜರಾತ್ ಮೆಣಸಿನಕಾಯಿಗಳು ಯಾವುದೇ ರೀತಿಯ ಪೈಪೋಟಿ ನೀಡದೇ ಇರಬಹುದು. ಆದರೆ, ನಮ್ಮಲ್ಲಿ ಮೆಣಸಿನಕಾಯಿ ಬೆಳೆ ನಷ್ಟವಾದಾಗ, ಬೆಲೆ ಮತ್ತಷ್ಟು ಏರಿಕೆಯಾಗಿದ್ದಾಗ ಅಂಥ ಸಂದರ್ಭಗಳನ್ನು ಉಪಯೋಗಿಸಿಕೊಂಡು ಮಾರುಕಟ್ಟೆಯನ್ನು ಗುಜರಾತ್ ಮೆಣಸಿನಕಾಯಿಯು ಕಬಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರೈತರ ಅಭಿಪ್ರಾಯವಾಗಿದೆ.

     ಈ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ರಾಣೇಬೆನ್ನೂರಿನ ರೈತರೊಬ್ಬರು, “ಬ್ಯಾಡಗಿ ಮೆಣಸಿನಕಾಯಿಯು ತನ್ನದೇ ವಿಶೇಷವಾದ ಹೆಗ್ಗುರುತಿನೊಂದಿಗೆ ಇಡೀ ವಿಶ್ವದಲ್ಲೇ ತನ್ನ ಐಡೆಂಟಿಟಿ ಕಂಡುಕೊಂಡಿದೆ. ಅದೇ ಕಾರಣಕ್ಕೆ ನಾನಾ ದೇಶಗಳಲ್ಲೂ ತನ್ನ ಬೇಡಿಕೆಯನ್ನು ಇಂದಿಗೂ ಉಳಿಸಿಕೊಂಡಿದೆ. ಹಾಗಾಗಿ, ರಾಜ್ಯ ಸರ್ಕಾರವು ಬ್ಯಾಡಗಿ ಮೆಣಸಿನಕಾಯಿಯ ಹೆಗ್ಗುರುತನ್ನು ರಕ್ಷಿಸಿಕೊಳ್ಳಲು ಏನಾದರೂ ಕ್ರಮ ಕೈಗೊಳ್ಳಬೇಕು’’ ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap