ಚಿತ್ರದುರ್ಗ:
ಈ ಹಿಂದೆ ‘ದಲಿತನೆಂಬ ಕಾರಣಕ್ಕೆ ತನಗೆ ನಾಗ್ಪುರ ಆರೆಸ್ಸೆಸ್ ಕಛೇರಿಯಲ್ಲಿನ ವಸ್ತು ಸಂಗ್ರಹಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು’ ಎಂಬ ಆಡಿಯೋ ಮೂಲಕ ಭಾರೀ ಸುದ್ದಿಯಾಗಿದ್ದ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಇದೀಗ ಮತ್ತೊಂದು ಆಡಿಯೋ ಮೂಲಕ ಮುನ್ನೆಲೆಗೆ ಬಂದಿದ್ದಾರೆ.
ಅಂದಹಾಗೆ ಈ ಬಾರಿ ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಸಿಎಂ ಸಿದ್ದರಾಮಯ್ಯ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಮುಡಾ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯಗೆ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುತ್ತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಗೂಳಿಹಟ್ಟಿ ಶೇಖರ್ ಅವರದ್ದು ಎನ್ನಲಾದ ವೈರಲ್ ಆಗಿರುವ ಆಡಿಯೋದಲ್ಲಿ, ‘ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಸಿದ್ದರಾಮಯ್ಯ ಸಾಹೇಬರು ರಾಜಿನಾಮೆ ಕೊಡಬಾರದು. ಸಿಎಂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಲೇಬೇಕು’ ಎಂದು ಹೇಳಿದ್ದಾರೆ.
ಇನ್ನು, ‘ಸಿದ್ದರಾಮಯ್ಯ ಅವರಿಗೆ ಅನ್ಯಾಯ ಆದ್ರೆ ಯಾರೂ ಸಹಿಸೋದಿಲ್ಲ ಎಂದು ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ ಎನ್ನಲಾಗಿದ್ದು, ಆ ಆಡಿಯೋದಲ್ಲಿ, ‘2008 ರಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ನಾನು ಮೊದಲಿಗ. 1 ರೂಪಾಯಿ ಇಲ್ಲದೇ ಪುಕ್ಸಟ್ಟೆಯಾಗಿ ಸ್ವತಂತ್ರ ಕ್ಷೇತ್ರದಲ್ಲಿ ಆಯ್ಕೆಯಾದೆ. 1 ರೂಪಾಯಿ ಪಡೆಯದೇ ಪುಕ್ಸಟ್ಟೆಯಾಗಿ ಯಡಯೂರಪ್ಪಗೆ ಸಿಎಂ ಮಾಡಿದೆ. ಭೋವಿ ಸಮುದಾಯದವನಾಗಿ ಜನರಲ್ ಕ್ಷೇತ್ರದಲ್ಲಿ ಗೆದ್ದು ಬಿಎಸ್‌ವೈ ರನ್ನು ಸಿಎಂ ಮಾಡಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಮಾಡಿದ್ದೇ ಗೂಳಿಹಟ್ಟಿ ಶೇಖರ್’ ಎಂದು ಹೇಳಿದ್ದಾರೆ.
ಇನ್ನು, ‘ಎಚ್‌ಡಿ ಕುಮಾರಸ್ವಾಮಿ ಬಿಜೆಪಿಗೆ ವಚನ ಭ್ರಷ್ಠರಾದಾಗ ನಾನು ಯಡಿಯೂರಪ್ಪನವರನ್ನು ಬೆಂಬಲಿಸಿದೆ’ ಎಂದು ಆಡಿಯೋದಲ್ಲಿ ಹೇಳಿದ್ದು, ‘ಹೊಸದುರ್ಗ ಸಿದ್ದೇಶ್ವರ ದೇವಸ್ಥಾನದಲ್ಲಿ ಕುರುಬ ಸಮುದಾಯದ ಸಭೆ ಕರೆದಿದ್ರು. ಸಿದ್ದರಾಮಯ್ಯ ಸಿಎಂ ಆಗೋದಾದ್ರೆ ನಾನು ಬೆಂಬಲಿಸ್ತೀನಿ ಅಂದಿದ್ದೆ. ನಾನು ಸಿದ್ದರಾಮಯ್ಯನವರಿಗೆ ಸಿಎಂ ಆಗೋದಾದ್ರೆ ಓಟು ಹಾಕ್ತೀನಿ ಅಂದಿದ್ದೆ. ಆದ್ರೆ ಆಗ ಸಿದ್ದರಾಮಯ್ಯ ಬದಲಿಗೆ, ಯಡಿಯೂರಪ್ಪ ಸಿಎಂ ಆದ್ರು. ಬಿಎಸ್ ಯಡಿಯೂರಪ್ಪಗೆ ಪುಕ್ಸಟ್ಟೆ ಓಟು ಹಾಕಿದ್ದರಿಂದ ನನಗೆ ದುರಹಂಕಾರ’ ಎಂದು ಹೇಳಿದ್ದಾರೆ.
ಇನ್ನು, ‘ಅಂದು ಬಿಎಸ್‌ವೈ ಪರ ನಿಂತಂತೆ, ಇಂದು ಸಿದ್ದರಾಮಯ್ಯ ಪರ ನಿಲ್ಲ ಬೇಕಾಗುತ್ತದೆ’ ಎಂದು ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಹೇಳಿದ್ದು, ‘ನಾನಂತೂ ಸಿದ್ದರಾಮಯ್ಯ ಪರ ನಿಂತುಕೊಳ್ತೀನಿ. ಅವ್ರು ಎಲ್ಲಾ ಸಮುದಾಯವನ್ನ ಗೌರವದಿಂದ ತೆಗೆದುಕೊಂಡು ಹೋಗ್ತಾರೆ. ಆದ್ರೆ ಈಗ ಅವರ ಬಗ್ಗೆ ಅನೇಕ ಕಮೆಂಟ್ ಬರ್ತಿವೆ. ಯಡಿಯೂರಪ್ಪನವರ ಸಮಾಜದ ಶಾಸಕರೇ ಅಂದು ರಾಜಿನಾಮೆ ಕೊಡ್ಲಿಲ್ಲ. ಅವರ ಸಮಾಜದವರೇ ಅಂದು ಬಿಎಸ್‌ವೈ ಪರ ನಿಲ್ಲಲಿಲ್ಲ. ಆದ್ರೆ ನಾನು ಸ್ವತಂತ್ರವಾಗಿ ಗೆದ್ದು, ಬಿಎಸ್‌ವೈ ಪರ ಮೊದಲು ಕೈ ಎತ್ತಿದೆ. ಆದ್ರೆ ಅದರ ಕೀರ್ತಿ ಕೇಂದ್ರ, ರಾಜ್ಯ ಬಿಜೆಪಿ ನಾಯಕರಿಗೆ ಹೋಗುತ್ತೆ’ ಎಂದು ಹೇಳಿದ್ದಾರೆ.
ಇನ್ನು, ‘ಸಿದ್ದರಾಮಯ್ಯನವರ ಕಾಲು ಎಳೆಯಲು ಇಂದು ಕೋರ್ಟ್‌ನಲ್ಲಿ ಕೇಸ್ ನಡೀತಿವೆ.ನಾವು ಬಿಜೆಪಿ ಸರ್ಕಾರದಿಂದ ಹೊರ ಬಂದಾಗ ನಮ್ಮನ್ನು ಅನರ್ಹ ಮಾಡಿದ್ರು. ಹೈಕೋರ್ಟ್‌ನಲ್ಲಿ ನಮ್ಮ ಪರವಾಗಿ ಆದೇಶ ಬರಲಿಲ್ಲ ಎಂದಿರುವ ಗೂಳಿಹಟ್ಟಿ, ಆದ್ರೆ ನ್ಯಾಯ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ನಮ್ಮ ಪರವಾಗಿ ಬಂತು. ಈ ವೇಳೆ ಹೈಕೋರ್ಟ್‌ನಲ್ಲಿ ಬಿಎಸ್‌ವೈ ನಮ್ಮ ವಿರುದ್ಧ ಆಟ ಆಡಿದ್ರು. ಅಲ್ಲಿ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ಕಳಿಸಿತು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಕೇಸ್‌ನಲ್ಲಿ ಹೈಕೋರ್ಟ್ ಸಿಂಗಲ್, ಡಬಲ್ ಬೆಂಚಲ್ಲಿ ಅವರ ಪರ ನ್ಯಾಯ ಬರೋದು ಕಷ್ಟ. ಬಂದ್ರೆ ಎಸ್ಸಿ ಎಸ್‌ಟಿಗಳಿಗೆ ನ್ಯಾಯದೇವತೆ ಇಲ್ಲೇ ಇದ್ದಾರೆ ಎಂದು ತಿಳಿಯಬೇಕು ಎಂದಿರುವ ಗೂಳಿಹಟ್ಟಿ, ಈಗ ನಮ್ಮ ದೇವ್ರು ಇರೋದು ಸುಪ್ರೀಂ ಕೋರ್ಟ್‌ನಲ್ಲಿ. ಅಲ್ಲಿ ಸಿದ್ದರಾಮಯ್ಯನವರಿಗೆ ನ್ಯಾಯ ಸಿಗುತ್ತೆ. ಈಗ ನಮ್ಮ ಹಿಂದುಳಿದವರು ಸಿಎಂ ಆಗಿದ್ದಾರೆ. ಹಾಗಾಗಿ ಹೈಕೋರ್ಟ್‌ನಲ್ಲಿ ಅವ್ರಿಗೆ ನ್ಯಾಯ ಸಿಗಲ್ಲ ಇದು ನನ್ನ ವೈಯಕ್ತಿಕ ಅಭಿಪ್ರಾಯ. ಸುಪ್ರೀಂ ಕೋರ್ಟ್‌ನಲ್ಲಿ ಡಿಸೈಡ್ ಆಗೋವರೆಗೆ ಸಿದ್ದರಾಮಯ್ಯ ಸಿಎಂ ಆಗಿರಬೇಕು ಎಂದು ಹೇಳಿದ್ದಾರೆ.
ಇನ್ನು ಇದೇ ವೈರಲ್ ಆಗಿರುವ ಆಡಿಯೋದಲ್ಲಿ, ‘ಸಿಂಗಲ್ ಹಾಗೂ ಡಬಲ್ ಬೆಂಚಲ್ಲಿ ಉಲ್ಟಾ ಆದ್ರೆ ಬಿಜೆಪಿ ರಾಜಿನಾಮೆ ಕೊಡಿ ಅಂತಾರೆ. ನಮ್ಮ ಭಾರತ ಮಾತೆ, ನ್ಯಾಯ ದೇವತೆ ಸುಪ್ರೀಂ ಕೋರ್ಟ್‌ನಲ್ಲಿ ಕೂತಿದ್ದಾಳೆ. ಸುಪ್ರೀಂ ಕೋರ್ಟ್‌ನಲ್ಲಿ ಬರೋವರೆಗೆ ಸಿದ್ದರಾಮಯ್ಯ ರಾಜಿನಾಮೆ ಕೇಳಬಾರ್ದು. 2008 ರಲ್ಲಿ ಅವಿಶ್ವಾಸ ನಿರ್ಣಯ ಮಾಡಿದಾಗ ಅಲ್ಲಿ ಬಿಎಸ್‌ವೈ ಗೆದ್ರು. ಆದ್ರೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಗೆದ್ದು ಬಂದಾಗ ಇಲ್ಲಿ ಬಿಎಸ್‌ವೈ ಸಿಎಂ ಇರಲಿಲ್ಲ. ಹಾಗಾಗಿ ಸಿದ್ದರಾಮಯ್ಯ ಸಿಎಂ ಆಗಿ ಇರಲೇಬೇಕು. ಈಗ ಹೈಕೋರ್ಟ್‌ನಲ್ಲಿ ತೀರ್ಪು ಬಂದ ತಕ್ಷಣ ಸಿಎಂ ರಾಜೀನಾಮೆ ಕೊಡಬಾರ್ದು. ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರ ಆದರೆ ಆಗ ಸಿಎಂ ರಾಜಿನಾಮೆ ಕೇಳಲಿ. ಇದು ನನ್ನ ವೈಯಕ್ತಿಕ ಜೊತೆಗೆ ಸಾಮಾನ್ಯ ಜನರ ಅಭಿಪ್ರಾಯ ಎಂದು ಗೂಳಿಹಟ್ಟಿ ಹೇಳಿದ್ದಾರೆ.
ಸಿದ್ದರಾಮಯ್ಯಗೆ ಅನ್ಯಾಯ ಆದ್ರೆ ಯಾರೂ ಸಹಿಸಲ್ಲ ಎಂದು ಕೂಡ ಇದೇ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಹೇಳಿದ್ದಾರೆ. ಮೂಲಗಳ ಪ್ರಕಾರ ಗೂಳಿಹಟ್ಟಿ ಶೇಖರ್ ಅವರೇ ಈ ಆಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎನ್ನಲಾಗಿದೆ.