ತುಮಕೂರು :

ಅಕಾಲಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜ. 9 ಮತ್ತು 10 ನಡೆಯಬೇಕಿದ್ದ ಇತಿಹಾಸ ಪ್ರಸಿದ್ದ ಗೂಳೂರು ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ. ಗೂಳೂರಿನ ಗಣೇಶ ದೇವಾಲಯದಲ್ಲಿ ಶುಕ್ರವಾರ ಗ್ರಾಮದ 18 ಕೋಮಿನ ಜನಾಂಗದವರು ಸಭೆ ಸೇರಿ, ಅಕಾಲಿಕ ಮಳೆಯಾಗುತ್ತಿರುವುದರಿಂದ ಜಾತ್ರೆಗೆ ಅಡಚಣೆಯಾಗುತ್ತದೆ. ಹಾಗಾಗಿ ಮುಂಜಾಗ್ರತೆಯಾಗಿಯೇ ಜ.23 ಮತ್ತು 24ಕ್ಕೆ ಜಾತ್ರೆಯನ್ನು ಮುಂದೂಡಲು ತೀರ್ಮಾನ ಕೈಗೊಂಡಿದ್ದಾರೆ.
ಈ ಬಾರಿಯ ಎರಡನೇ ಬಾರಿಗೆ ಗಣೇಶ ಜಾತ್ರೆಯನ್ನು ಮುಂದೂಡಲಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಡಿಸೆಂಬರ್ ತಿಂಗಳಲ್ಲಿ ನಿಗದಿಯಾಗಿದ್ದ ಜಾತ್ರೆಯನ್ನು ಜನವರಿ 9 ಮತ್ತು 10ಕ್ಕೆ ಮುಂದೂಡಲಾಗಿತ್ತು. ಈಗ ಅಕಾಲಿಕ ಮಳೆಯಿಂದಾಗಿ ಮತ್ತೆ ಮುಂದಕ್ಕೆ ಹಾಕಲಾಗಿದೆ ಎಂದು ಗೂಳೂರು ಗಣೇಶ ಭಕ್ತಮಂಡಳಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯ್ತಿ ಸದಸ್ಯ ಜಿ.ಎಸ್.ಶಿವಕುಮಾರ್ ತಿಳಿಸಿದ್ದಾರೆ.
ಅನಿವಾರ್ಯ ಕಾರಣಗಳಿಂದ 2ನೇ ಬಾರಿಗೆ ಗಣೇಶ ಜಾತ್ರೆಯನ್ನು ಮುಂದೂಡಿರುವುದರಿಂದ ಭಕ್ತಾದಿಗಳು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ ಅವರು, ಅಕಾಲಿಕ ಮಳೆಯಿಂದಾಗಿ ಗಣೇಶೋತ್ಸವದ ರಥ ಗ್ರಾಮದಿಂದ ಕೆರೆಯಂಗಳಕ್ಕೆ ಹೋಗಲು ಸಾಧ್ಯವಿಲ್ಲ. ಹೊಲಗಳಲ್ಲಿ ರಥ ಸಾಗುವುದಿಲ್ಲ. ಹಾಗಾಗಿ ಜಾತ್ರೆಯನ್ನು ಮುಂದೂಡಲಾಗಿದೆ ಎಂದು ಹೇಳಿದರು.

ಜ.23 ಶನಿವಾರದಂದು ರಾತ್ರಿ 10 ಗಂಟೆಗೆ ಗಣೇಶಮೂರ್ತಿಯನ್ನು 18 ಕೋಮಿನ ಜನಾಂಗದವರ ಸಮ್ಮುಖದಲ್ಲಿ ದೇವಾಲಯದಿಂದ ಹೊರಗೆ ತರಲಾಗುವುದು. ಮಧ್ಯರಾತ್ರಿವರೆಗೂ ಮೆರವಣಿಗೆ ನಡೆಸಲಾಗುವುದು. ಜಾತ್ರೆಯ ವಿಶೇಷವಾಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸಹ ಏರ್ಪಡಿಸಲಾಗುತ್ತದೆ ಎಂದರು.
ಜಾತ್ರಾ ಮಹೋತ್ಸವದಲ್ಲಿ ವಿವಿಧ ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಿ ಗಣೇಶೋತ್ಸವದ ಮೆರವಣಿಗೆಯಲ್ಲಿ ಆಕರ್ಷಕ ಪ್ರದರ್ಶನ ನೀಡಲಿವೆ. ಜ. 24 ಭಾನುವಾರ ಮಧ್ಯಾಹ್ನ 12 ಗಂಟೆಗೆ ಮತ್ತೆ ಗಣೇಶಮೂರ್ತಿಯ ಮೆರವಣಿಗೆ ಆರಂಭವಾಗಲಿದ್ದು, ಗ್ರಾಮದ ರಾಜಬೀದಿಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿ ಸಂಜೆ ಕೆರೆಯಲ್ಲಿ ಆಕರ್ಷಕ ಮದ್ದುಗುಂಡಿನ ಪ್ರದರ್ಶನದೊಂದಿಗೆ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ನಡೆಯಲಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾಲ ನಡೆಯುವ ಗಣೇಶ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ಶ್ರೀಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಅವರು ಮನವಿ ಮಾಡಿದರು. ಸಭೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣೇಗೌಡ, ಗ್ರಾಮದ ಮುಖಂಡರಾದ ನವೀನ್, ಚಿಕ್ಕರಂಗಪ್ಪ, ಚಂದ್ರಶೇಖರ್, ಬಿ.ಕೆ. ಕೃಷ್ಣಮೂರ್ತಿ, ಗೂಳೂರು ಸಿದ್ದರಾಜು ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








