RSS ಕಾರ್ಯಕರ್ತನ ಕೊಲೆ ಪ್ರಕರಣ… ಹಂತಕನಿಗೆ ಪೊಲೀಸರಿಂದ ಗುಂಡೇಟು

ಫಿರೋಜ್‌ಪುರ: 

    ಆರ್‌ಎಸ್‌ಎಸ್ ಕಾರ್ಯಕರ್ತ  ನವೀನ್ ಅರೋರಾ ಹತ್ಯೆಯಲ್ಲಿ  ಭಾಗಿಯಾಗಿದ್ದ ಎನ್ನಲಾದ ಪ್ರಮುಖ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಫಜಿಲ್ಕಾದಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ನವೀನ್ ಅರೋರಾ ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದರ ಪ್ರಮುಖ ಶೂಟರ್ ಬಾದಲ್ ಮೇಲೆ ಬುಧವಾರ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಾದಲ್ ಮತ್ತು ಹೆಡ್ ಕಾನ್‌ಸ್ಟೆಬಲ್‌ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನವೀನ್ ಅರೋರಾ ಹತ್ಯೆಯ ಬಳಿಕ ತನಿಖೆಯನ್ನು ತೀವ್ರಗೊಳಿಸಿರುವ ಪೊಲೀಸರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಮತ್ತು ಬಾದಲ್‌ನ ಸಹಚರರನ್ನು ಬಂಧಿಸಲು ಫಜಿಲ್ಕಾದ ಸ್ಮಶಾನಕ್ಕೆ ತೆರಳಿದ್ದರು. ಈ ವೇಳೆ ಅವರಲ್ಲಿ ಇಬ್ಬರು ಪೊಲೀಸ್ ಪಡೆಗಳನ್ನು ಗುರುತಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಪೊಲೀಸರು ಕೂಡ ಫೈರಿಂಗ್ ನಡೆಸಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ತೀವ್ರ ಗುಂಡಿನ ಚಕಮಕಿ ನಡೆದಿದೆ. ಇದರಿಂದ ಬಾದಲ್ ಗಾಯಗೊಂಡರೆ ಪೊಲೀಸ್ ಪಡೆಯಲಿದ್ದ ಹೆಡ್ ಕಾನ್‌ಸ್ಟೆಬಲ್‌ ವೊಬ್ಬರಿಗೂ ತೀವ್ರ ಗಾಯಗಳಾಗಿವೆ. ಬಳಿಕ ಬಾದಲ್‌ನನ್ನು ಬಂಧಿಸಲಾಗಿದೆ. 

    ಹೆಡ್ ಕಾನ್‌ಸ್ಟೆಬಲ್‌ ಮತ್ತು ಬಾದಲ್ ನನ್ನು ಚಿಕಿತ್ಸೆಗಾಗಿ ಫಜಿಲ್ಕಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಫಿರೋಜ್‌ಪುರ ಎಸ್‌ಎಸ್‌ಪಿ ಭೂಪಿಂದರ್ ಸಿಂಗ್, ಆರ್‌ಎಸ್‌ಎಸ್‌ನೊಂದಿಗೆ ಸಂಬಂಧ ಹೊಂದಿದ್ದ ನವೀನ್ ಅರೋರಾ ಅವರನ್ನು ಫಿರೋಜ್‌ಪುರದಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ನವೀನ್ ಮನೆಗೆ ಹಿಂದಿರುಗುತ್ತಿದ್ದಾಗ ಇಬ್ಬರು ಅಪರಿಚಿತರು ಅವರ ಮೇಲೆ ಗುಂಡು ಹಾರಿಸಿದ್ದರು. ನವೀನ್ ಹತ್ಯೆಗೆ ಸಂಬಂಧಿಸಿ ಇನ್ನು ಅನೇಕರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ಮುಂದುವರಿಸಿರುವುದಾಗಿ ಅವರು ತಿಳಿಸಿದ್ದಾರೆ.

    ಆರ್‌ಎಸ್‌ಎಸ್ ನಾಯಕ ಬಲದೇವ್ ರಾಜ್ ಅರೋರಾ ಅವರ ಪುತ್ರ ನವೀನ್ ಅರೋರಾ ಅವರನ್ನು ನವೆಂಬರ್ 15 ರಂದು ಫಿರೋಜ್‌ಪುರದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಬೈಕ್ ನಲ್ಲಿ ಬಂದ ಇಬ್ಬರು ಅಪರಿಚಿತರು ನವೀನ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. 

    ಅರೋರಾ ಹತ್ಯೆಯ ಬಳಿಕ ತನಿಖೆಯ ಮುಂದುವರಿದ ಭಾಗವಾಗಿ ಹಲವಾರು ಮಂದಿಯನ್ನು ಬಂಧಿಸಲಾಗಿದೆ. ಕಳೆದ ವಾರ ಅರಿಫ್ಕೆ ಗ್ರಾಮದಲ್ಲಿ ನಡೆದ ಪ್ರತ್ಯೇಕ ಗುಂಡಿನ ಚಕಮಕಿಯ ಬಳಿಕ ಪ್ರಮುಖ ಶಂಕಿತ ಗುರ್ಸಿಮ್ರಾನ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಯೋಜನೆ ರೂಪಿಸಿರುವ ಶಂಕೆಯ ಮೇರೆಗೆ ಹರ್ಷ್ ಮತ್ತು ಕನವ್ ಎಂಬವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.

Recent Articles

spot_img

Related Stories

Share via
Copy link