ಮುಂಬೈ:
ಗುರುವಾರ ಮುಂಬೈನ ಪೊವೈ ಪ್ರದೇಶದಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದ ಆರೋಪಿ ರೋಹಿತ್ ಆರ್ಯ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಪೊಲೀಸರ ಪ್ರಕಾರ, ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಆರ್ಯ ಏರ್ ಗನ್ ಬಳಸಿ ಪೊಲೀಸರ ಮೇಲೆ ಗುಂಡು ಹಾರಿಸಿದನು , ಇದರಿಂದಾಗಿ ಪೊಲೀಸರು ಒಂದು ಸುತ್ತಿನ ಗುಂಡು ಹಾರಿಸಿದರು. ಗುಂಡು ಆರ್ಯನ ಎದೆಗೆ ತಗುಲಿತ್ತು. ಚಿಕಿತ್ಸೆಯ ಸಮಯದಲ್ಲಿ ಆತ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಯನ್ನು ಜೆಜೆ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿದೆ.
ಆರ್‌ಎ ಸ್ಟುಡಿಯೋಸ್ ಫಿಲ್ಮ್ ಸ್ಟುಡಿಯೋದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ಆಡಿಷನ್ ಇದೆ ಎಂದು ಬಿಂಬಿಸಿದ್ದ ಆರ್ಯ 8 ರಿಂದ 14 ವರ್ಷ ವಯಸ್ಸಿನ ಮಕ್ಕಳನ್ನು ಸುಮಾರು ಎರಡು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಪೊವೈ ಪೊಲೀಸ್ ಠಾಣೆಯ ತಂಡವು ಮಧ್ಯಾಹ್ನ 1:45 ರ ಸುಮಾರಿಗೆ ತುರ್ತು ಕರೆ ಸ್ವೀಕರಿಸಿ ಸ್ಥಳಕ್ಕೆ ತ್ವರಿತವಾಗಿ ಆಗಮಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಾತುಕತೆಗಳು ತಕ್ಷಣವೇ ಪ್ರಾರಂಭವಾದವು, ಆದರೆ ಆತ ಮಕ್ಕಳನ್ನು ಬಿಡುಗಡೆ ಮಾಡಲು ನಿರಾಕರಿಸಿದ.
ಪೊಲೀಸ್ ತಂಡವು ಸ್ನಾನಗೃಹದ ಮೂಲಕ ಬಲವಂತವಾಗಿ ಪ್ರವೇಶಿಸಿ ಎಲ್ಲಾ 17 ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿತು. ಮಕ್ಕಳನ್ನು ಒತ್ತೆ ಇಡುವ ಮೊದಲು ಆರ್ಯ ಒಂದು ವಿಡಿಯೋ ಮಾಡಿದ್ದ ಅದರಲ್ಲಿ ಆತ, ನಾನು ರೋಹಿತ್ ಆರ್ಯ. ಆತ್ಮಹತ್ಯೆಯಿಂದ ಸಾಯುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಇಲ್ಲಿ ಕೆಲವು ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿದ್ದೇನೆ”. ಅಷ್ಟೇ ಅಲ್ಲದೇ, “ನಿಮ್ಮಿಂದ ಬರುವ ಸಣ್ಣದೊಂದು ತಪ್ಪು ನಡೆಯೂ ನನ್ನನ್ನು ಪ್ರಚೋದಿಸುತ್ತದೆ” ಎಂದು ಆತ ಎಚ್ಚರಿಸಿದ್ದ. ಸ್ಥಳಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ.
ನಗೆ ಸರಳ ಸಂಭಾಷಣೆಗಳು ಬೇಕು, ಅದಕ್ಕಾಗಿಯೇ ನಾನು ಈ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದೇನೆ. ನಾನು ಅವರನ್ನು ಒಂದು ಯೋಜನೆಯ ಭಾಗವಾಗಿ ಒತ್ತೆಯಾಳಾಗಿ ಇರಿಸಿದ್ದೇನೆ. ನಾನು ಬದುಕಿದ್ದರೆ, ನಾನು ಅದನ್ನು ಮಾಡುತ್ತೇನೆ; ನಾನು ಸತ್ತರೆ, ಬೇರೆ ಯಾರಾದರೂ ಮಾಡುತ್ತಾರೆ, ಆದರೆ ಅದು ಖಂಡಿತವಾಗಿಯೂ ಸಂಭವಿಸುತ್ತದೆ ಏಕೆಂದರೆ ನಿಮ್ಮ ಸಣ್ಣದೊಂದು ತಪ್ಪು ನಡೆಯು ನನ್ನನ್ನು ಈ ಇಡೀ ಸ್ಥಳಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಾಯುವಂತೆ ಮಾಡುತ್ತದೆ ಎಂದು ಹೇಳಿದ್ದ.
ಪೊಲೀಸರು ಘಟನಾ ಸ್ಥಳದಿಂದ ಏರ್ ಗನ್ ಮತ್ತು ಕೆಲವು ರಾಸಾಯನಿಕ ಪಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಆತ ಮಹಾರಾಷ್ಟ್ರ ಸರ್ಕಾರ ವಿರುದ್ಧವೂ ಆರೋಪ ಮಾಡಿದ್ದ. ಮುಖ್ಯಮಂತ್ರಿಗಳ ನನ್ನ ಶಾಲೆ, ಸುಂದರ ಶಾಲೆ ಅಭಿಯಾನದಡಿಯಲ್ಲಿ ಪ್ರಾರಂಭಿಸಲಾದ ಪಿಎಲ್‌ಸಿ ನೈರ್ಮಲ್ಯ ಮೇಲ್ವಿಚಾರಣಾ ಯೋಜನೆ ಎಂಬ ನೈರ್ಮಲ್ಯ ಅಭಿಯಾನಕ್ಕೆ ಇಲಾಖೆಯು ತನಗೆ ಹಣ ಪಾವತಿ ಮಾಡಿಲ್ಲ ಎಂದು ಆತ ಹೇಳಿದ್ದ. ಆದಾಗ್ಯೂ, ಮಹಾರಾಷ್ಟ್ರ ಶಿಕ್ಷಣ ಕಾರ್ಯದರ್ಶಿ ರಂಜಿತ್ ಸಿಂಗ್ ಡಿಯೋಲ್, ಈ ಯೋಜನೆಗಾಗಿ ರೋಹಿತ್ ಆರ್ಯ ಅವರಿಗೆ 2 ಕೋಟಿ ರೂ.ಗಳನ್ನು ಪಾವತಿಸಲು ಯಾವುದೇ ಒಪ್ಪಂದವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

 


