ವಾಷಿಂಗ್ಟನ್:
ಅಮೆರಿಕಾದ ಪ್ರಸಿದ್ಧ ಸ್ಥಳಗಳಲ್ಲಿ ಒಂದಾದ ಫೇರ್‌ಮೌಂಟ್ ಪಾರ್ಕ್‌ನಲ್ಲಿ ಭೀಕರ ಗುಂಡಿನ ದಾಳಿ ನಡೆದಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಅಪ್ರಾಪ್ತರು ಮೃತಪಟ್ಟಿದ್ದರೆ. ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಲೆಮನ್ ಹಿಲ್ ಡ್ರೈವ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಹಲವಾರು ಮಂದಿ ರಾತ್ರಿ ಸಮಯದಲ್ಲಿ ಪಾರ್ಕ್‌ನಲ್ಲಿ ವಿಶ್ರಮಿಸುತ್ತಿರುವ ವೇಳೆ ಈ ದಾಳಿ ನಡೆಸಲಾಗಿದೆ. ಘಟನೆಯ ನಂತರದ ದೃಶ್ಯಗಳಲ್ಲಿ, ಆ ಸ್ಥಳದಲ್ಲಿ ಪೊಲೀಸ್ ಕಾರುಗಳು ಪಾರ್ಕ್ ಒಳಗೆ ನಿಂತಿರುವುದು ಮತ್ತು ಹೆಲಿಕಾಪ್ಟರ್ ಒಂದು ಸುತ್ತಾಡುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಘಟನೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಗುಂಡಿನ ದಾಳಿಗೆ ಸಂಬಂಧಿಸಿದಂತೆ ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬುದರ ಕುರಿತು ಪೊಲೀಸರು ಮಾಹಿತಿ ಹಂಚಿಕೊಂಡಿಲ್ಲ.
ಈ ಘಟನೆಗೂ ಕೇವಲ ಒಂದು ದಿನದ ಮುಂಚೆ, ಸೌತ್ ಕ್ಯಾರೊಲಿನಾದ ಲಿಟಲ್ ರಿವರ್ ಇದೇ ರೀತಿಯ ಗುಂಡಿನ ದಾಳಿಯ ಘಟನೆ ನಡೆದಿದ್ದು, 11 ಮಂದಿ ಗಾಯಗೊಂಡಿರುವ ಮಾಹಿತಿ ಲಭ್ಯವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಮತ್ತು ಘಟನೆಯ ಹಿನ್ನೆಲೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಘಟನೆ ಮಾಹಿತಿ ಸಿಗುತ್ತಿದ್ದಂತೆ 12ಕ್ಕೂ ಹೆಚ್ಚು ಪೊಲೀಸ್ ಕಾರುಗಳು ಮತ್ತು ಆಂಬ್ಯುಲೆನ್ಸ್ಗಳು ಪ್ರದೇಶದತ್ತ ಸಾಗುತ್ತಿರುವ ವಿಡಿಯೋಗಳು ಕಂಡು ಬಂದಿವೆ. ಗುಂಡಿನ ದಾಳಿ ಕುರಿತು ಮಾತನಾಡಿರುವ ನಾರ್ತ್ ಮಿರ್ಟಲ್ ಬೀಚ್ ಪೊಲೀಸ್ ಅಧಿಕಾರಿ ಆಕಸ್ಮಿಕವಾಗಿ ಕಾಲಿಗೆ ಗುಂಡು ತಗುಲಿದ್ದು, ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದ್ದಾರೆ.
ಅಮೆರಿಕದಲ್ಲಿ ಜನನಿಬಿಡ ಪ್ರದೇಶದಲ್ಲಿ ಹಾಗೂ ಶಾಲಾ ಆವರಣಗಳಲ್ಲಿ ಗುಂಡಿನ ದಾಳಿಯ ವರದಿಯಾಗುತ್ತಲೇ ಇರುತ್ತವೆ. ಈ ಬಗ್ಗೆ ಅಲ್ಲಿನ ಅಧ್ಯಕ್ಷರು ಕಳವಳ ವ್ಯಕಪಡಿಸುತ್ತಲೇ ಇರುತ್ತಾರೆ. ಆದರೆ ಇಂತಹ ಅನಿರೀಕ್ಷಿತ ದಾಳಿಗಳನ್ನು ತಡೆಯುವಲ್ಲಿ ಸಫಲವಾಗಿಲ್ಲ. ಎರಡೂ ಗುಂಡಿನ ದಾಳಿಗಳು ಅಮೆರಿಕದ, ಸಾರ್ವಜನಿಕ ಸ್ಥಳಗಳು ಮತ್ತು ಸಮುದಾಯ ಸಭೆ ಪ್ರದೇಶಗಳಲ್ಲಿ ನಡೆದಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಳವಳಗಳನ್ನು ಹೆಚ್ಚಿಸುತ್ತಿವೆ.
