ಒಳಮೀಸಲಾತಿ ಮಾದಿಗ ಸಮುದಾಯದ ಏಕೈಕ ಆಸರೆ; ಎಚ್.ಆಂಜನೇಯ

 *ಚಿತ್ರದುರ್ಗ:

     ಬಲಾಢ್ಯರ ಮಧ್ಯೆ ಕೂಲಿ-ಅನಕ್ಷರತೆ ಕಾರಣಕ್ಕೆ ಮೀಸಲು ಪಡೆಯುಲ್ಲಿ ವಿಫಲವಾಗಿರುವ ಮಾದಿಗ ಸಮುದಾಯಕ್ಕೆ ಒಳಮೀಸಲಾತಿಯೊಂದೇ ಏಕೈಕ ಆಸರೆ ಎಂದು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

     ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನಸಂಖ್ಯೆ ಆಧಾರಿತ ಒಳಮೀಸಲಾತಿ ಹೋರಾಟಕ್ಕೆ 30 ವರ್ಷದ ಇತಿಹಾಸ ಇದೆ. ಪ್ರತ್ಯೇಕ ಮೀಸಲಾತಿ ಕಲ್ಪಿಸಬೆಕು. ವಗೀಕರಣ ಮಾಡಬೇಕೆಂಬುದು ನಮ್ಮ ದಶಕದ ಒತ್ತಾಯ ಎಂದರು.

      ಈ ಮಧ್ಯೆ ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ತೀರ್ಪು ನೀಡಿದ್ದು, ಮಾದಿಗ ಸಮುದಾಯಕ್ಕೆ ಜೀವ ಬಂದಂತಾಗಿದೆ. ಜೊತೆಗೆ ತೆಲಂಗಾಣ, ಹರಿಯಾಣ, ಪಂಜಾಬ್, ಆಂಧ್ರದಲ್ಲಿ ಮೀಸಲಾತಿ ಜಾರಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

      ರಾಜ್ಯದಲ್ಲೂ ಈ ಸಂಬಂಧ ನ್ಯಾ.ನಾಗಮೋಹನ್ ದಾಸ್ ಏಕಸದಸ್ಯ ವಿಚಾರಣಾ ಆಯೋಗ ರಚಿಸಿ, ಎರಡು ತಿಂಗಳು ಗಡುವು ನೀಡಲಾಗಿತ್ತು. ಆದರೆ, ಗಡುವು ಅವಧಿ ಮುಗಿದರೂ ವರದಿ ಸಲ್ಲಿಕೆ ಆಗಿಲ್ಲ. ಆಯೋಗಕ್ಕೆ 40 ಇಲಾಖೆಗಳು ಸ್ಪಷ್ಟ ಅಂಕಿ-ಅಂಶ ನೀಡುವಲ್ಲೂ ನಿರ್ಲಕ್ಷ್ಯ ತೋರಿದ್ದು, ಜೊತೆಗೆ ದತ್ತಾಂಶ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಆದ್ದರಿಂದ ಮಾದಿಗ ಸಮುದಾಯದಲ್ಲಿ ಆತಂಕ ಎದುರಾಗಿದೆ ಎಂದು ತಿಳಿಸಿದರು.

     2011ರ ಗಣತಿ, ಸದಾಶಿವ ಆಯೋಗ, ಕಾಂತರಾಜ್ ಆಯೋಗದ ವರದಿಯಲ್ಲಿನ ಅಂಕಿ-ಅಂಶ ಹಾಗೂ ಈಗಾಗಲೇ ಸಂಗ್ರಹಿಸಿರುವ ಮಾಹಿತಿಯ ಆಧಾರದಡಿ ನಾಗಮೋಹನ್ ದಾಸ್ ಆಯೋಗದಿಂದ ವರದಿ ತಕ್ಷಣ ಪಡೆದು, ಒಳಮೀಸಲಾತಿ ಜಾರಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

     ಈಗಾಗಲೇ ಬಹಳಷ್ಟು ವಿಳಂಬ ಆಗಿದೆ. ಜೊತೆಗೆ ಮಾದಿಗ ಸಮುದಾಯ ಪ್ರತಿಭಟನೆ ಹಾದಿ ಹಿಡಿದಿದೆ. ಈ ವಿಷಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ನೀತಿ ಅನುಸರಿಸುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದರು.

     ಸಾಮಾಜಿಕ ನ್ಯಾಯದ ಹರಿಕಾರ, ನೊಂದ ಜನರ ಪರ ಮುಖ್ಯಮಂತ್ರಿ ಎಂದೇ ದೇಶದಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿರುವ ಸಿದ್ದರಾಮಯ್ಯ, ಒಳಮೀಸಲಾತಿ ಜಾರಿ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಜಾರಿಗೆ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಒಂದೊಮ್ಮೆ ವಿಳಂಬವಾದಲ್ಲಿ ನಾನು ಸೇರಿ ಬಹುತೇಕರು ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಲಿದೆ ಎಂದು ತಿಳಿಸಿದರು.

     ನುಡಿದಂತೆ ನಡೆಯುವ ಸಿದ್ದರಾಮಯ್ಯ ಎಂಬ ಜನಮೆಚ್ಚುಗೆಗೆ ಪಾತ್ರರಾಗಿರುವ ಸಿಎಂ, ಈಗಾಗಲೇ ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ. ಅದೇ ರೀತಿ 6ನೇ ಗ್ಯಾರಂಟಿ ಎಂದು ಘೋಷಿಸಿದ್ದ ಮೀಸಲಾತಿ ವರ್ಗೀಕರಣವನ್ನು ಈ ತಿಂಗಳ ಅಂತ್ಯದೊಳಗೆ ಜಾರಿಗೊಳಿಸಬೇಕು. ಈ ಮೂಲಕ ಮಾದಿಗ ಹಾಗೂ ನೊಂದ ಸಮುದಾಯದ ಪ್ರೀತಿಗೆ ಪಾತ್ರರಾಗಬೇಕು ಎಂದು ಹೇಳಿದರು.

      ಒಂದೊಮ್ಮೆ ಒತ್ತಡ ತಂತ್ರಗಳಿಗೆ ಮಣಿದು ವಿಳಂಬ ನೀತಿ ಅನುಸರಿಸುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆದ್ದರಿಂದ ನಮ್ಮ ಹಕ್ಕು ಒಳಮೀಸಲಾತಿ ವಿಷಯದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು. ಜಾರಿಗೊಳಿಸಿದ ಬಳಿಕ ಏನಾದ್ರೂ ಸಮಸ್ಯೆಗಳು ಇದ್ದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿ ಜಾತಿಗಣತಿ ನಡೆಸಲಿ. ಈಗ ಶಾಲಾ-ಕಾಲೇಜ್ ರಜೆ ಇರುವ ಕಾರಣಕ್ಕೆ ಶಿಕ್ಷಕ ವರ್ಗವನ್ನು ಸಮರ್ಥವಾಗಿ ಬಳಸಿಕೊಂಡು ಸರ್ವೇ ನಡೆಸಬಹುದು. ಆಧಾರ್ ಕಾರ್ಡ್ ಲಿಂಕ್ ಕೂಡ ಮಾಡಬಹುದು. ಈ ರೀತಿಯ ಸರ್ವೇ ಎಲ್ಲ ಸಮಸ್ಯೆಗಳಿಗೆ ಉತ್ತರ ಆಗಲಿದೆ ಎಂದರು.

      ಮಗು ಅಳುವುದಕ್ಕಿಂತ ಮುಂಚಿತವಾಗಿಯೇ ಹಾಲುಣಿಸುವ ಹೃದಯವಂತಿಕೆ ಅಗತ್ಯ. ಈ ವಿಷಯದಲ್ಲಿ ಸಿದ್ದರಾಮಯ್ಯ ನೊಂದ ಜನರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ದೃಢಪಡಿಸಿದ್ದಾರೆ. ಈಗ ಅವರ ಮುಂದಿರುವ ಒಳಮೀಸಲಾತಿ ವಿಷಯದಲ್ಲೂ ಅಮ್ಮನ ಹೃದಯದ ನಡೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸದಾಶಿವ ಆಯೋಗ ಕಾಂಗ್ರೆಸ್ ಸರ್ಕಾರದಲ್ಲಿ ರಚನೆಗೊಂಡು, ಬಳಿಕ ಸಲ್ಲಿಕೆಯಾಯಿತು. ಆದರೆ, ಈ ವರದಿ ಕುರಿತು ಎಲ್ಲ ರಾಜಕೀಯ ಪಕ್ಷಗಳಿಗೆ ಒಂದು ರೀತಿ ಭೂತ, ನಾಗರಹಾವು ಭೀತಿ ಇದೆ. ಆದ್ದರಿಂದಲೇ ಆ ವರದಿಯನ್ನು ಯಾವುದೇ ಪಕ್ಷಗಳು ಮುಟ್ಟಲು ಹೋಗಲಿಲ್ಲ. ಬಿಜೆಪಿಯಂತೂ ವರದಿಯನ್ನೇ ತಿರಸ್ಕರಿಸಿತು ಎಂದು ಎಚ್.ಆಂಜನೇಯ ಬೇಸರಿಸಿದರು.

     ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಜಿಪಂ ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ತಾಪಂ ಮಾಜಿ ಸದಸ್ಯ ಸಮರ್ಥರಾಯ ಇದ್ದರು.

Recent Articles

spot_img

Related Stories

Share via
Copy link