ಸ್ಪೋಟಕ ಹೇಳಿಕೆ ನೀಡಿದ ಎಚ್‌ ಡಿ ಕುಮಾರಸ್ವಾಮಿ….!

ಮೈಸೂರು:

   ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

   ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ) ಹಗರಣ ಇದೀಗ ಗಂಭೀರ ಸ್ವರೂಪ ಪಡೆಯುತ್ತಿದ್ದು, ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬೀಳುತ್ತಿದೆ. ಇದೀಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಸ್ಪೋಟಕ ಹೇಳಿಕೆ ನೀಡಿದ್ದು, ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದ ಮುಡಾ ಹಗರಣ ಬಯಲಾಗಿದೆ ಎಂದು ಹೇಳಿದ್ದಾರೆ.

   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ? ಇದರ ಹಿಂದೆ ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರವಿದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

   ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಪತ್ನಿಗೆ ಆ ಜಾಗ ಹೇಗೆ ಬಂತು ಎಂದೂ ನನಗೆ ಗೊತ್ತಿದೆ. 62 ಕೋಟಿ ರೂ. ಪರಿಹಾರ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ರೈತರಿಗೂ ಪರಿಹಾರ ಕೊಡಿಸಲಿ ಎಂದರು. 

  ಕಾನೂನು ಸಲಹೆಗಾರ ಈಗ ಎಂಎಲ್ ಎ ಆಗಿದ್ದಾರೆ. ಅವರು ಸಿಎಂ ಪರ ಸುದೀರ್ಘವಾಗಿ ಮಾತನಾಡಿದ್ದಾರೆ. 62 ಕೋಟಿ ರೂ ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ ಹಲವು ಅಭಿವೃದ್ಧಿ‌ ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ. ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡುತ್ತೀರಾ? ರೈತರನ್ನು ಬೀದಿಗೆ ನಿಲ್ಲಿಸಿದ್ದೀರಿ ಇದು ಸರಿಯಾ? ನಿಮ್ಮ ಪತ್ನಿಯ ಹಣ ಕೇಳುತ್ತಿದ್ದೀರಲ್ಲಾ ಆ‌ ದೇವರು ಮೆಚ್ಚುತ್ತಾನಾ ಎಂದು ಖಾರವಾಗಿ ಪ್ರಶ್ನಿಸಿದರು.

   ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದ ಎಚ್ ಡಿಕೆ, ಜನತಾ ದರ್ಶನದ ಬಗ್ಗೆ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ದೂರ ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡುತ್ತಿದ್ದೀರಿ? ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರಿ? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದರು.

Recent Articles

spot_img

Related Stories

Share via
Copy link
Powered by Social Snap