ಹೆಚ್‌ ಡಿ ಕುಮಾರಸ್ವಾಮಿ ಕ್ಷಮೆ ಕೇಳಿದ್ದಾದರೂ ಏಕೆ ….?

ಹಾಸನ

    ಹೆಚ್.ಡಿ.ರೇವಣ್ಣ ನನ್ನ ಸಹೋದರ, ಅವರದ್ದು ಕೊಂಚ ದುಡುಕಿನ ಸ್ವಭಾವ. ಆದರೆ, ಕೆಲಸಗಾರ. ಅವರ ಪ್ರಯತ್ನ ಶ್ರಮದಿಂದ ಹಾಸನ ಜಿಲ್ಲೆ ಹೇಗೆ ಅಭಿವೃದ್ಧಿ ಹೊಂದಿದೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಅವರ ವರ್ತನೆ ಒರಟಾದರೂ ಹೃದಯ ಮೆದು. ಅವರ ಕಾರಣದಿಂದ ಏನಾದರೂ ನಿಮಗೆ ನೋವಾಗಿದ್ದರೆ ನಮ್ಮ ಕುಟುಂಬದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ದೇವೇಗೌಡರು ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದಾಗ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೇ ಬಿಟ್ಟು ಪಡುವಲಹಿಪ್ಪೆಯಲ್ಲಿ ಬೇಸಾಯ ಮಾಡಿ ಕುಟುಂಬವನ್ನು ನೋಡಿಕೊಂಡಿದ್ದವರು ರೇವಣ್ಣ. ನಾವು ನಿಮ್ಮ ಮಕ್ಕಳು, ನಿಮ್ಮಿಂದ ಬೆಳೆದಿದ್ದೇವೆ. ನೀವು ಕೊಟ್ಟ ಶಕ್ತಿಯಿಂದ ನಿಮ್ಮ ಮಾಡಿದ್ದೇವೆ, ಮಾಡುತ್ತಿದ್ದೇವೆ. ದೇವೇಗೌಡರ ದುಡಿಮೆ, ಸೇವೆ, ತ್ಯಾಗ ನಮಗೆ ಪ್ರೇರಣೆ. ಅವರ ಆದರ್ಶ ಹಾದಿಯಲ್ಲಿಯೇ ನಾವು ಸಾಗುತ್ತೇವೆ. ಈ ಜಿಲ್ಲೆಯ ಮಗನಾಗಿ ನಾನು ನನ್ನ ಕೆಲಸ ಮಾಡಿ ಜನಸೇವೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

    ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲೆಸಬೇಕಾದಾರೆ ಕೌಟುಂಬಿಕ ವಾತಾವರಣ ಚೆನ್ನಾಗಿರಬೇಕು. ಸಂಬಂಧಿಗಳಿಗೆ ಹೆಚ್ಚು ಮಹತ್ವ ನೀಡಬೇಕು. ಗ್ರಾಮಗಳಲ್ಲಿ ಅನ್ಯೋನ್ಯತೆ, ಕುಟುಂಬದ ಬಾಂಧವ್ಯ ಅಗತ್ಯ ಇಂದು ಅತಿ ಹೆಚ್ಚಾಗಿದೆ. ನಮ್ಮ ಬಾಲ್ಯದ ದಿನಗಳಲ್ಲಿ ಇದ್ದ ಹಳ್ಳಿಯ ಪರಿಸರ ಮತ್ತೆ ಬೇಕಿದೆ. ಆ ಪ್ರೀತಿ, ವಿಶ್ವಾಸ, ವಾತ್ಸಲ್ಯ ಬೇಕಾಗಿದೆ. ಈಗ ಎಲ್ಲ ಅನುಕೂಲಗಳಿವೆ, ಆರ್ಥಿಕವಾಗಿ ಎಲ್ಲರೂ ಚೆನ್ನಾಗಿದ್ದಾರೆ. ಆದರೆ ಮಾನವ ಸಂಬಂಧಗಳು ಮಾತ್ರ ಹಳಸುತ್ತಿವೆ ಎಂದು ನುಡಿದರು.

    ಹಣಕ್ಕಾಗಿ, ಆಸ್ತಿಗಾಗಿ ಅಣ್ಣತಮ್ಮಂದಿರು ಕತ್ತಿ ಮಸೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ. ತಂದೆ ತಾಯಿಯನ್ನೇ ಕೊಲ್ಲುವ ದುಷ್ಟ ಪ್ರವೃತ್ತಿ ಜಾಸ್ತಿ ಆಗುತ್ತಿದೆ. ಇದು ಹೋಗಬೇಕು. ಹಿಂದೆ ಊರಿನಲ್ಲಿ ಯಾರದೇ ಮನೆಯಲ್ಲಿ ಮದುವೆ ನಡೆಯುತ್ತಿದೆ ಎಂದರೆ ಊರಿಗೆಲ್ಲಾ ಹಬ್ಬದಂತಹ ವಾತಾವರಣ ಸೃಷ್ಟಿ ಆಗುತ್ತಿತ್ತು. ಪ್ರತಿಯೊಬ್ಬರೂ ಆ ಮನೆಯ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದರು. ಮತ್ತೆ ಅಂತಹ ವಾತಾವರಣ ಬರಲಿ ಎಂದು ನಾನು ಆಶಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

    ಸಣ್ಣಪುಟ್ಟ ಸಮಸ್ಯೆ ಇದ್ದರೂ ಹಳ್ಳಿಗಳಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ. ಚಿಕ್ಕ ಚಿಕ್ಕ ವಿಷಯಕ್ಕೂ ವೈಷಮ್ಯ ಬೆಳೆಯುತ್ತಿದೆ. ಆದರೆ, ಅಂತಹ ಪರಿಸ್ಥಿತಿಗಳು ಬರಬಾರದು. ಏನೇ ಇದ್ದರೂ ನೀವು ನೀವೇ ಪ್ರೀತಿ ವಿಶ್ವಾಸದಿಂದ ಅದನ್ನು ಬಗೆಹರಿಸಿಕೊಳ್ಳಬೇಕು. ಅದರಲ್ಲಿಯೂ ಗ್ರಾಮದ ಅಭಿವೃದ್ಧಿಗೆ ಯುವಕರ ಜವಾಬ್ದಾರಿ ಹೆಚ್ಚು ಎಂದು ಅವರು ಕಿವಿಮಾತು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap