ಶಿರೂರು:
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಹೆದ್ದಾರಿ ಬಳಿ ಗುಡ್ಡ ಕುಸಿದಿದ್ದ ಸ್ಥಳಕ್ಕೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಮಳೆ, ನೆರೆ ಪರಿಸ್ಥಿತಿ, ಹಾನಿ ಇತ್ಯಾದಿಗಳ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವರು ಸಚಿವರ ಜತೆಯಲ್ಲಿ ಇದ್ದರು.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಘಟನೆಗಳು ಏನೇ ಇರಲಿ, ಇಂತಹ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲಿಸಬೇಕು. ಬೆಂಗಳೂರಿನಲ್ಲಿ ಕೂತು ಆದೇಶ ನೀಡುವುದಲ್ಲ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಎಂದು ರಾಜ್ಯ ಸರ್ಕಾರ ರಾಜಕಾರಣ ಮಾಡಬಾರದು. ಹಾನಿಯಾದ ಕುಟುಂಬದ ಜೊತೆ ಸರ್ಕಾರ ಇರಬೇಕು. ಘಟನೆ ಆಗಿದ್ದರ ಬಗ್ಗೆ ನನಗೆ ಬೇಸರವಿದೆ ಎಂದರು.
ಅವೈಜ್ಞಾನಿಕ ಕಾಮಗಾರಿಯಿಂದ ಘಟನೆ ನಡೆದಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರೀಯಾ ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದ ಒಂದೇ ಕುಟುಂಬದ ಐವರು ಮೃತಪಟ್ಟಿರುವುದು ದುರಂತ. 2018 ರಲ್ಲಿ ನಾನು ಸಿಎಂ ಆಗಿದ್ದಾಗ ಕೊಡಗಿನಲ್ಲಿ ಭೂ ಕುಸಿತ ಆಗಿತ್ತು. ಆಗ ಮನೆ ಕಳೆದುಕೊಂಡವರಿಗೆ ಹತ್ತು ಲಕ್ಷ ಹಣ ಕೊಟ್ಟಿದ್ದೆವು ಎಂದು ತಮ್ಮ ಅವಧಿಯಲ್ಲಿ ನಡೆದ ಘಟನೆಯನ್ನು ನೆನೆದರು. ಇನ್ನು ಎನ್ಡಿಆರ್ಎಫ್ ಈ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತಿದೆ. ಅದು ಕೇಂದ್ರ ಸರ್ಕಾರದ ಅಂಗವಲ್ಲವೇ, ಮೊದಲು ಇಂತಹ ಘಟನೆಯಲ್ಲಿ ರಾಜಕಾರಣ ಮಾಡುವುದನ್ನ ರಾಜ್ಯ ಸರ್ಕಾರ ಬಿಡಲಿ ಎಂದು ವಾಗ್ದಾಳಿ ನಡೆಸಿದರು.
ಇನ್ನು ಕುಮಾರಸ್ವಾಮಿಯವರು ಭೇಟಿ ನೀಡದಂತೆ ಸಿದ್ದರಾಮಯ್ಯ ಸರ್ಕಾರ ತಡೆದಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಘಟಕ, ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಭೇಟಿ ನೀಡುವುದು ಸುದ್ದಿಯಾಗದಂತೆ ತಡೆಯಲು ಯತ್ನಿಸಿರುವುದು ಸಿದ್ದರಾಮಯ್ಯನವರ ಅಂಜು ಬುರುಕುತನ ತೋರಿಸುತ್ತದೆ ಎಂದು ಆರೋಪಿಸಿದೆ.
ರಕ್ಷಣಾ ಕಾರ್ಯಾಚರಣೆ ಸ್ಥಳದಿಂದ ಐದು ಕಿ.ಮೀ ದೂರದಲ್ಲೇ ಬ್ಯಾರಿಕೇಡ್ ಹಾಕಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದಾರೆ. ಮಾಧ್ಯಮಗಳ ಸ್ವಾತಂತ್ರ್ಯ ಹತ್ತಿಕ್ಕುವ ನಿಮ್ಮ ಈ ನಡೆ ಸಂವಿಧಾನ ವಿರೋಧಿ ಅಲ್ಲವೇ ಮುಖ್ಯಮಂತ್ರಿಗಳೇ ಎಂದು ಜಾತ್ಯಾತೀತ ಜನತಾದಳ ಟ್ವೀಟ್ ಮೂಲಕ ಪ್ರಶ್ನಿಸಿದೆ.
ಶಿರೂರು ಸುತ್ತಮುತ್ತ ನಿಷೇಧಾಜ್ಞೆ ಜಾರಿ: ಈ ಸ್ಥಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮತ್ತೆ ಕುಸಿತ ಉಂಟಾಗಬಹುದು ಎಂಬ ಭೀತಿಯಲ್ಲಿ ಸೆಕ್ಷನ್ 144 ಜಾರಿ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.