ಬೆಂಗಳೂರು:
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕಲ್ ಡಿ ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ. ಪಾಟೀಲ್ ಮಾಧ್ಯಮದವರೊಂದಿಗೆ ಮಾತನಾಡಿ, ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರಾದ ಜಾನ್ ಮೈಕಲ್ ಡಿ ಕುನ್ಹಾ ಅವರ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದ ವರದಿಯನ್ನು ಸಚಿವ ಸಂಪುಟ ಅಂಗೀಕರಿಸಿದೆ. ಅಲ್ಲದೆ, ಕಾಲ್ತುಳಿತಕ್ಕೆ ಕಾರಣರಾದ ಖಾಸಗಿ ಸಂಸ್ಥೆ ಹಾಗೂ ಸರಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಪೊಲೀಸರ ತಪ್ಪಿದೆ ಎಂದು ಹೇಳಲಾಗಿದೆ ಹೀಗಾಗಿ ಅವರ ವಿರುದ್ಧ ಇಲಾಖಾ ತನಿಖೆ ಆಗಬೇಕು ಎಂದು ಸಚಿವರು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ. ಜತೆಗೆ ಖಾಸಗಿ ಸಂಸ್ಥೆಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಡಿಎನ್‍ಎ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ ಎಂದು ಎಚ್. ಕೆ. ಪಾಟೀಲ್ ಹೇಳಿದರು.
ಐಪಿಎಸ್ ಅಧಿಕಾರಿಗಳಾದ ಬಿ. ದಯಾನಂದ್, ವಿಕಾಸ್ ಕುಮಾರ್ ವಿಕಾಸ್, ಶೇಖರ್ ಟೆಕ್ಕನವರ್, ಎಸಿಪಿ ಸಿ. ಬಾಲಕೃಷ್ಣ, ಪೊಲೀಸ್ ಇನ್ಸ್ಪೆಕ್ಟರ್ ಗಿರೀಶ್ ಎ.ಕೆ. ವಿಜಯೋತ್ಸವನ್ನು ತಡೆಯಲು ವಿಫಲರಾಗಿದ್ದಾರೆ ಎಂದು ಏಕಸದಸ್ಯ ವಿಚಾರಣಾ ಆಯೋಗದಲ್ಲಿ ತಿಳಿಸಿತ್ತು. ಸದ್ಯ ವರದಿಯಂತೆ ಪೊಲೀಸ್ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ನಡೆಸಲು ಒಳಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆರ್‌ಸಿಬಿ, ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ಸ್ ಪ್ರೈವೇಟ್ ಲಿಮಿಟೆಡ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕೆಎಸ್‌ಸಿಎ ಮಾಜಿ ಅಧ್ಯಕ್ಷ ಎ ಶಂಕರ್, ಕೆಎಸ್‌ಸಿಎ ಮಾಜಿ ಖಜಾಂಚಿ ಜಯರಾಮ್, ಇ.ಎಸ್, ರಾಜೇಶ್ ಮೆನನ್, ಉಪಾಧ್ಯಕ್ಷರು ಆರ್‌ಸಿಬಿ ಎಸ್‌ಪಿಎಲ್, ಡಾ. ವೆಂಕಟವರ್ಧನ್, ಎಂ.ಡಿ. ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್‌ವರ್ಕ್ಸ್ ಇವರುಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಇಂಡಿಯನ್ ಪ್ರಿಮಿಯರ್ ಲೀಗ್‌ನಲ್ಲಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಅಂದು ಸಂಭ್ರಮವೋ ಸಂಭ್ರಮ. ಇದಕ್ಕಾಗಿ ಜೂನ್ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವದ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ನಿರೀಕ್ಷೆ ಮೀರಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಲು ಬಂದಿದ್ದರು. ಈ ವೇಳೆ ಏಕಾಏಕಿ ಕಾಲ್ತುಳಿತ ಉಂಟಾಗಿ 11 ಜನ ಅಮಾಯಕರ ಮೃತಪಟ್ಟಿದ್ದರು. 71 ಜನರು ಗಾಯಗೊಂಡಿದ್ದರು. ವಿಜಯೋತ್ಸವ ಸಂಭ್ರಮದಲ್ಲಿ ಭಾಗಿಯಾಗಲು ಉಚಿತ ಪ್ರವೇಶ ಘೋಷಣೆ ಮಾಡಿದಕ್ಕೆ ಮಿತಿಮೀರಿದ ಜನ ಬಂದಿರುವುದೇ ಈ ಅವಘಡ ನಡೆಯಲು ಕಾರಣ ಎಂದು ಹೇಳಲಾಗಿತ್ತು.
