ಮೈಸೂರು:
ಯಾವುದೇ ಅಲೆಯಿಂದ ಯದುವೀರ್ ಒಡೆಯರ್ ಆಯ್ಕೆಯಾಗಿಲ್ಲ. ಜನರ ಪ್ರೀತಿಯಿಂದ ಗೆಲುವು ಕಂಡಿದ್ದಾರೆ, ರಾಜರ ಕೊಡುಗೆಗಳನ್ನು ನಾವು ಸ್ಮರಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲಾಗಿದೆ. ಜನರು ಇದನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ. ಜನರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ. ಅದನ್ನ ಫಲಿತಾಂಶದ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಇನ್ನು ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದಂತೆ ಮಾಡಿಕೊಂಡ ಮನವಿಗೆ ಸಿಎಂ, ಡಿಸಿಎಂ ಸ್ಪಂದಿಸಲಿಲ್ಲ. ಅಭ್ಯರ್ಥಿಯನ್ನು ನಿಲ್ಲಿಸಿ ಒಂದು ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಾಗಿದೆ. ಜನರು ಮಹಾರಾಜರನ್ನೇ ಗೆಲ್ಲಿಸಿದ್ದಾರೆ. ಜಾತಿ ವಿಚಾರ ಮುಂದಿಟ್ಟುಕೊಂಡು ಮತಯಾಚನೆ ಮಾಡಿದವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಇನ್ನು ಮುಂದಾದರೂ ಏಕವಚನ, ದುರಹಂಕಾರದ ಮಾತುಗಳನ್ನು ಬಿಡಬೇಕು ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಜನರ ನಡುವೆ ಒಡಕುಂಟು ಮಾಡುವ ಮಾತುಗಳನ್ನು ನಾಯಕರು ಆಡಬಾರದು. ಯದವೀರ್ ಅವರಿಗೂ ಸಾಕಷ್ಟು ಜವಾಬ್ದಾರಿಗಳು ಇವೆ. ಇನ್ನು ಮುಂದಾದರೂ ಕಾಂಗ್ರೆಸ್ ಸರ್ಕಾರ ಯದವೀರ್ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.