ವಾಷಿಂಗ್ಟನ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಸೆಪ್ಟೆಂಬರ್ 19, 2025ರಂದು ಡೊನಾಲ್ಡ್ ಟ್ರಂಪ್ ಸರ್ಕಾರ ಎಚ್ 1ಬಿ ವೀಸಾಗಳಿಗೆ ದುಬಾರಿ 1 ಲಕ್ಷ ಡಾಲರ್ ಶುಲ್ಕವನ್ನು ಘೋಷಿಸಿತ್ತು. ಇದು ಉದ್ಯೋಗದಾತರು ಅಂದರೆ ಕಂಪನಿಗಳು ಮತ್ತು ವೀಸಾ ಹೊಂದಿರುವವರಿಗೆ ಭಾರಿ ಆಘಾತ ಉಂಟು ಮಾಡಿತ್ತು. ಇದೀಗ ಎಚ್-1ಬಿ ವೀಸಾ ಶುಲ್ಕದ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಎಳೆದಿದೆ. ಅಮೆರಿಕದಲ್ಲಿ ಈಗಾಗಲೇ ಇದ್ದು, ತಮ್ಮ ವೀಸಾ ಸ್ಥಿತಿಯನ್ನು ಬದಲಾಯಿಸಿಕೊಳ್ಳುವವರಿಗೆ ಈ ದುಬಾರಿ ಶುಲ್ಕ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರಿಂದಾಗಿ ಅಮೆರಿಕದಲ್ಲಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ನಿರಾಳತೆ ಸಿಕ್ಕಿದೆ.
ಎಫ್ – 1 (ವಿದ್ಯಾರ್ಥಿ ವೀಸಾ) ದಿಂದ ಎಚ್ – 1ಬಿ ವೀಸಾಕ್ಕೆ ಬದಲಾಗುವವರು ಅಥವಾ ಅಮೆರಿಕದೊಳಗೆ ತಮ್ಮ ವಾಸ್ತವ್ಯವನ್ನು ವಿಸ್ತರಿಸಲು ಕೋರುವವರು ಈ 1 ಲಕ್ಷ ಡಾಲರ್ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದರೆ, ಅಮೆರಿಕದ ಹೊರಗಿನಿಂದ ಹೊಸದಾಗಿ ಎಚ್ – 1ಬಿ ವೀಸಾಗೆ ಅರ್ಜಿ ಸಲ್ಲಿಸುವ ಕೆಲಸಗಾರರಿಗೆ ಅಥವಾ ಅಮೆರಿಕದಲ್ಲಿದ್ದು, ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನ ದೇಶವನ್ನು ತೊರೆಯಬೇಕಾದವರಿಗೆ ಈ ಶುಲ್ಕ ಅನ್ವಯಿಸುತ್ತದೆ ಎಂದು ಯುಎಸ್‌ಸಿಐಎಸ್ ತಿಳಿಸಿದೆ.
H-1B ವೀಸಾ ಅಮೆರಿಕದ ತಾತ್ಕಾಲಿಕ ವೀಸಾ ಆಗಿದ್ದು, ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು 1990 ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರುವ ಜನರಿಗೆ ರಚಿಸಲಾಯಿತು. ಆರಂಭದಲ್ಲಿ ವೀಸಾವನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ, ಆದರೆ ಗರಿಷ್ಠ ಆರು ವರ್ಷಗಳವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಪಡೆದವರಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. H-1B ವೀಸಾ ಹೊಂದಿರುವವರಲ್ಲಿ ಭಾರತೀಯರು ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ಮಾಹಿತಿಯ ಪ್ರಕಾರ, ಕಳೆದ ವರ್ಷ ಭಾರತವು H-1B ವೀಸಾಗಳ ಅತಿದೊಡ್ಡ ಫಲಾನುಭವಿಯಾಗಿದ್ದು, ಅನುಮೋದಿತ ಫಲಾನುಭವಿಗಳಲ್ಲಿ ಶೇ. 71 ರಷ್ಟಿದೆ.
ಈಗಾಗಲೇ ಎಚ್ – 1ಬಿ ವೀಸಾ ಹೊಂದಿರುವವರು ಅಮೆರಿಕವನ್ನು ಪ್ರವೇಶಿಸಲು ಅಥವಾ ಇಲ್ಲಿಂದ ನಿರ್ಗಮಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಸಂಸ್ಥೆ ಖಚಿತಪಡಿಸಿದೆ. ಸೆಪ್ಟೆಂಬರ್ 21, 2025ರ ನಂತರ ಅಮೆರಿಕದ ಹೊರಗಿನಿಂದ, ಮಾನ್ಯ ಎಚ್ – 1ಬಿ ವೀಸಾ ಇಲ್ಲದವರ ಪರವಾಗಿ ಸಲ್ಲಿಸಲಾದ ಹೊಸ ಅರ್ಜಿಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಶುಲ್ಕ ಪಾವತಿಗಾಗಿ ಆನ್‌ಲೈನ್ ಪೋರ್ಟಲ್ ಅನ್ನೂ ಸ್ಥಾಪಿಸಲಾಗಿದೆ.
