ಶಿರಸಿ:
ಹೆಚ್ಚಿನ ಶ್ರಮ ಬೇಡದೆ ನೈಸರ್ಗಿಕವಾಗಿ ಬೆಳೆಯುವ ಹಲಸು ಬರಗಾಲದ ಸಂದರ್ಭದಲ್ಲಿಯೂ ಸಮೃದ್ಧವಾಗಿದ್ದು, ಕೃಷಿಕರಿಗೆ ಆದಾಯದ ಸಿಹಿ ನೀಡುವ ಮೂಲವಾಗಿದೆ.
ಕಳೆದ ವರ್ಷ ಮಳೆ ಕೊರತೆಯ ಕಾರಣಕ್ಕೆ ತಾಲ್ಲೂಕಿನೆಲ್ಲೆಡೆ ಬರ ವ್ಯಾಪಿಸಿದೆ. ಕೃಷಿ, ತೋಟಗಾರಿಕಾ ಬೆಳೆಗಳು ಒಣಗಿ ರೈತರನ್ನು ನಷ್ಟದ ಕೂಪಕ್ಕೆ ತಳ್ಳಿವೆ.ಆದರೆ ರೈತರ ಜಮೀನುಗಳ ಬೇಲಿಯ ಅಂಚು, ಬೆಟ್ಟ, ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಬಿಟ್ಟಿರುವ ಹಲಸಿಗೆ ಬರಗಾಲದ ಸಂದರ್ಭದಲ್ಲಿ ಉತ್ತಮ ದರ ಲಭಿಸುತ್ತಿದ್ದು, ಹಲವು ರೈತರಿಗೆ ಆದಾಯ ತರುತ್ತಿದೆ.
‘ಪ್ರಸಕ್ತ ಸಾಲಿನಲ್ಲಿ ಇಲ್ಲಿನ ಕದಂಬ ಸಂಸ್ಥೆಯು ಹಲಸಿನ ಗುಜ್ಜೆ (ಎಳೆಯ ಕಾಯಿ) ಖರೀದಿ ಕೈಬಿಟ್ಟಿದೆ. ಬಲಿತ ಹಲಸು ಕಾಯಿಗಳಿದ್ದರೆ ಆಯಾ ಬೆಳೆಗಾರರ ಜತೆ ಗೃಹೋದ್ಯಮಿಗಳಿಗೆ ಸಂಪರ್ಕ ಮಾಡಿಸಿ, ಅವರು ತಯಾರಿಸುವ ಉತ್ಪನ್ನಗಳನ್ನು ಖರೀದಿಸುತ್ತಿದೆ. ಹೀಗಾಗಿ ವ್ಯಾಪಾರಿಗಳು, ಗೃಹೋದ್ಯಮಿಗಳು ನೇರವಾಗಿ ರೈತರ ಜಮೀನಿಗೆ ತೆರಳಿ ಹಲಸು ಖರೀದಿಸುತ್ತಿದ್ದಾರೆ. ಮನೆ ಬಾಗಿಲಲ್ಲಿ ಪ್ರತಿ ಕಾಯಿಗೆ ₹30ರಿಂದ ₹40 ದರ ಲಭ್ಯವಾಗುತ್ತಿದೆ’ ಎಂಬುದು ಶಿರಸಿಯ ರೈತ ಸತ್ಯನಾರಾಯಣ ಹೆಗಡೆ ಅಭಿಪ್ರಾಯ.
ಕೆಲ ರೈತರು ನಗರದ ಹೆದ್ದಾರಿಯಲ್ಲಿ ನೇರವಾಗಿ ವ್ಯಾಪಾರ ಮಾಡುತ್ತಿದ್ದಾರೆ. ವಾಹನ ಸವಾರರು, ಚಾಲಕರು, ಪ್ರವಾಸಿಗರನ್ನು ಈ ಹಲಸು ಆಕರ್ಷಿಸುತ್ತಿದೆ. ಹೊರ ಊರಿನ ಪ್ರವಾಸಿಗರು ಹಲಸು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.