ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ : ಹಂಸಲೇಖ

ಬೆಂಗಳೂರು:

       ಈ ವರ್ಷ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಂದ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಾಗುವುದು ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡುತ್ತಿದ್ದಂತೆ ಅದಕ್ಕೆ ಸಂಗೀತ ನಿರ್ದೇಶಕ, ಗೀತರಚನೆಕಾರ ಹಂಸಲೇಖ ಹರ್ಷ ವ್ಯಕ್ತಪಡಿಸಿದ್ದಾರೆ.

     ಈ ಸುದ್ದಿ ಹೊರಬರುತ್ತಿದ್ದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ಜನರಿಂದ ವ್ಯಕ್ತವಾಗುತ್ತಿದೆ. ಎರಡು ವರ್ಷಗಳ ಹಿಂದೆ ಹಂಸಲೇಖ ಅವರು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಗಳ ಬಗ್ಗೆ ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. 

     ನಂತರ ಕಾಂಗ್ರೆಸ್ ಪಕ್ಷದ ಪರವಾಗಿ ಬಿಜೆಪಿ ಸರ್ಕಾರ ವಿರುದ್ಧ ಪ್ರತಿಭಟನಾ ರ್ಯಾಲಿಯಲ್ಲಿ ಕೂಡ ಹಂಸಲೇಖ ಭಾಗವಾಗಿದ್ದರು. ಹೀಗಾಗಿ ಹಂಸಲೇಖ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿ ಕಾಂಗ್ರೆಸ್ ಸರ್ಕಾರ ಋಣ ತೀರಿಸಿದೆ ಎಂದು ಹಲವರು ಟೀಕೆ ಮಾಡುತ್ತಿದ್ದಾರೆ.

 
    ಅದಕ್ಕೂ ಒಂದು ನಿಯಂತ್ರಣ ಬೇಕು. 35 ವರ್ಷದ ಹಿಂದೆ ಆಗಿದ್ದರೆ ನಾನು ಏನೇನೋ ಮಾತನಾಡುತ್ತಿದ್ದೆ. ಮೊದಲು ನಾವು ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ ತಿಳಿಸಬೇಕು. ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರು ಆದಾಗ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರು ಟ್ವೀಟ್​ ಮಾಡಿದ್ದರು. ದಸರಾ ಎಂಬುದು ದೊಡ್ಡ ಸಂಭ್ರಮ. ಅಂಥ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್​ ಫೈಟರ್​ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಮನೆಯವರು ಪ್ರತ್ಯೇಕವಾಗಿ ಅಭಿನಂದನೆ ತಿಳಿಸಿದ್ದಾರೆ’ ಎಂದು ಹೇಳಿದ್ದಾರೆ.

 

     ನಮ್ಮ ನಾಡಿನಲ್ಲಿ ಒಕ್ಕೂಟ ವ್ಯವಸ್ಥೆ ಬರುವುಕ್ಕೂ ಮುನ್ನ, ಸಂವಿಧಾನ ಸಿದ್ಧವಾಗುವುದಕ್ಕೂ ಮುನ್ನ, ಸಂವಿಧಾನದಲ್ಲಿ ಏನೆಲ್ಲ ಇರಬೇಕು ಎಂಬುದನ್ನು ಆಲೋಚಿಸುವುದಕ್ಕೂ ಮುನ್ನ ಅದನ್ನೆಲ್ಲ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರು ಇಲ್ಲಿ ಜಾರಿಗೊಳಿಸಿದ್ದರು. ಅವರು ಒಂದು ಪ್ರಜಾ ಪ್ರತಿನಿಧಿ ಸಭೆ ಎಂಬ ಪರಿಕಲ್ಪನೆಯನ್ನು ಜಾರಿ ಮಾಡಿದ್ದರು.

     ಅದು ಇಡೀ ಭಾರತಕ್ಕೆ ಬೆಳಕಾಯಿತು. ಪ್ರಜಾ ಪ್ರತಿನಿಧಿ ಸಭೆ ಎಂದರೆ ರಾಜ್ಯದ ಹಳ್ಳಿಗಾಡಿನ ಕೃಷಿಕ, ಕಾರ್ಮಿಕ, ಶ್ರಮಿಕ ವರ್ಗದಿಂದ ಓರ್ವ ಪ್ರತಿನಿಧಿ ಅರಮನೆಯಲ್ಲಿ ಇರಬೇಕು. ಅವನು ಪ್ರಶ್ನೆಗಳನ್ನು ಕೇಳಬೇಕು. ಯೋಜನೆಯಲ್ಲಿ ಆತ ಭಾಗವಹಿಸಬೇಕು. ಮಹಾರಾಜನ ಮಟ್ಟಕ್ಕೆ ಅವನು ಮಾತನಾಡಬೇಕು ಎಂದು ಅವರು ಕನಸು ಕಂಡಿದ್ದರು. ಆ ಕನಸು ಈಗ ನನಸಾಗಿದೆ. ನಾನು ಪ್ರಜಾ ಪ್ರತಿನಿಧಿ ಆಗಿದ್ದೀನೋ ಇಲ್ಲವೋ ಗೊತ್ತಿಲ್ಲ. ಕಲಾ ಪ್ರತಿನಿಧಿಯಂತೂ ಆಗಿದ್ದೇನೆ. ಕನ್ನಡ ಚಿತ್ರರಂಗದ ಪರವಾಗಿ ನಾನು ಇದನ್ನು ಸ್ವೀಕರಿಸಿ, ಅಲ್ಲಿ ದೀಪ ಹಚ್ಚಲಿದ್ದೇನೆ’ ಎಂದು ಹಂಸಲೇಖ ಹೇಳಿದ್ದಾರೆ.

    ‘ಮನಸ್ಸಿನಲ್ಲಿ ಹಾಡುಗಳು ಉಕ್ಕುತ್ತಿವೆ. ಇದು ಒಳ್ಳೆಯ ಸಂದರ್ಭ. ಹಾಡು ಮಾಡಬಹುದು. ಈಗ ಒಂದು ಸಾಲು ಬರುತ್ತಿದೆ. ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ​ ಮೆಟ್ಟಬೇಕು. ಕನ್ನಡವನ್ನು ಯಾರು ಮೆಟ್ಟುತ್ತಾರೋ ಅವರನ್ನು ಮೆಟ್ಟಬೇಕು. ಒಂದು ರಾಜ್ಯ ಹಲವು ಸಿದ್ಧಾಂತ, ಸಂಘಟನೆಯಿಂದ ಹೋರಾಡುತ್ತಿರುತ್ತದೆ. ಅವರನ್ನೆಲ್ಲ ಒಗ್ಗಟ್ಟಿಗೆ ತರೋದು ಕಷ್ಟ.

    ಆದರೆ ಕನ್ನಡ ಎಂದರೆ ಎಲ್ಲರೂ ಒಂದಾಗಬೇಕು. ಕನ್ನಡ ಎಂದ ತಕ್ಷಣ ಎಲ್ಲ ಪಕ್ಷಗಳು ಒಂದಾಗಬೇಕು. ಸಂವಿಧಾನ ನಮಗೆ ಸ್ವಾತಂತ್ರ್ಯ ಕೊಟ್ಟಿದೆ. ಸ್ವಾತಂತ್ರ್ಯ ಅನ್ನೋದು ಒಂದು ಸವಿಯಾದ ಗಾಳಿ. ಅದು ಭಾಷೆಯ ಮೂಲಕ ಗೊತ್ತಾಗುತ್ತದೆ. ಕನ್ನಡದ ಕಾಲು ಹಿಡಿದುಕೊಂಡರೆ ಅದು ನಮ್ಮನ್ನು ಕಾಪಾಡುತ್ತದೆ. ಆ ಸ್ವಾತಂತ್ರ್ಯವನ್ನು ಇಟ್ಟುಕೊಂಡು ನಾವು ಸಂವಿಧಾನವನ್ನು ಪ್ರಶ್ನಿಸಬಹುದು. ಅದನ್ನು ಕಳೆದುಕೊಳ್ಳಬಾರದು. ನಾವು ಕನ್ನಡವನ್ನು ಕಳೆದುಕೊಳ್ಳಬಾರದು’ ಎಂದು ಕವಿಗಳ ಶೈಲಿಯಲ್ಲಿ ಹಂಸಲೇಖ ಪ್ರತಿಕ್ರಿಯಿಸಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link