ಇರಾನ್ :
ಇರಾನ್ನಲ್ಲಿ ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹನಿಯಾ ಇದ್ದ ಟಹ್ರಾನ್ ನಿವಾಸವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ ನಡೆಸಿದೆ ಎನ್ನಲಾಗಿದೆ. ಇರಾನ್ ಸೇನೆ, ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೂಡ ಇದನ್ನು ದೃಢಪಡಿಸಿವೆ.
ಇಸ್ಮಾಯಿಲ್ ಹನಿಯಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಹಮಾಸ್, ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ಇಸ್ಮಾಯಿಲ್ ಹನಿಯಾ ಅವರ ಸಾವನ್ನು ದೃಢೀಕರಿಸುವ ಹೇಳಿಕೆಯನ್ನು ಹಮಾಸ್ ಸಹ ಬಿಡುಗಡೆ ಮಾಡಿದೆ ಮತ್ತು ಇಸ್ರೇಲ್ ಹತ್ಯೆಯ ಆರೋಪವನ್ನೂ ಮಾಡಿದೆ. ಆದರೆ, ಈ ಬಗ್ಗೆ ಇಸ್ರೇಲ್ ಯಾವುದೇ ಹೇಳಿಕೆ ನೀಡಿಲ್ಲ.
ಮಂಗಳವಾರ ಮುಂಜಾನೆ, ಇಸ್ಮಾಯಿಲ್ ಹನಿಯಾ ಅವರು ಇರಾನ್‌ನ ನೂತನ ಅಧ್ಯಕ್ಷರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇತ್ತೀಚೆಗಷ್ಟೇ ಇಸ್ರೇಲಿ ಭದ್ರತಾ ಪಡೆಗಳಿಂದ ಹನಿಯಾ ಅವರ ಮೂವರು ಮಕ್ಕಳು ಕೂಡ ಕೊಲ್ಲಲ್ಪಟ್ಟಿದ್ದರು. ಹನಿಯಾರ ಮೂವರು ಮಕ್ಕಳಾದ ಅಮೀರ್, ಹಜೆಮ್ ಹಾಗೂ ಮೊಹಮ್ಮದ್ ಗಾಜಾದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಹೊರಟಿದ್ದರು ಎಂದು ಇಸ್ರೇಲ್ ಸೇನೆ ಹೇಳಿತ್ತು.
ಹಮಾಸ್ ಹಾಗೂ ಇಸ್ರೇಲ್ ನಡುವಿನ ಯುದ್ಧವು 2023ರ ಅಕ್ಟೋಬರ್ 3ರಿಂದಲೂ ನಡೆಯುತ್ತಿದೆ. ಹಮಾಸ್ 250 ನಾಗರಿಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿತ್ತು. 150 ಒತ್ತೆಯಾಳುಗಳು ಇನ್ನೂ ಅವರ ವಶದಲ್ಲಿದ್ದಾರೆ. ಇಸ್ರೇಲಿ ದಾಳಿಯಲ್ಲಿ ಇದುವರೆಗೆ 39ಕ್ಕೂ ಹೆಚ್ಚು ಪ್ಯಾಲೆಸ್ತೀನ್ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿಕೊಂಡಿದೆ.