ಚಿಕ್ಕಬಳ್ಳಾಪುರ:
ನಗರದ ಇಬ್ಬರು ಹಣ್ಣಿನ ವ್ಯಾಪಾರಿಗಳ ತಮಾಷೆ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಒಂದೇ ಜಾಗದಲ್ಲಿ ಅಕ್ಕಪಕ್ಕದಲ್ಲೇ ಕೂತು ವ್ಯಾಪಾರ ಮಾಡುತ್ತಿದ್ದವರ ಜೀವನದಲ್ಲಿ ಮಂಗಳವಾರ ದುರಂತ ನಡೆದು ಹೋಗಿದೆ. ತಮಾಷೆಯಲ್ಲೇ ಶುರುವಾದ ಜಗಳ, ನೋಡ ನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಅರ್ಬಾಜ್‌ನನ್ನು ಫರ್ಹಾದ್ ಕೊಲೆ ಮಾಡಿದ್ದಾನೆ.
ಅರ್ಬಾಜ್ ಮತ್ತು ಫರ್ಹಾದ್, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಎಂಜಿ ರಸ್ತೆಯಲ್ಲಿರುವ ಸರ್ಕಾರಿ ಆಸ್ಪತ್ರೆ ಎದುರು ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಕೂಡ ಎಂದಿನಂತೆ ವ್ಯಾಪಾರ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ನಿನ್ನೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಅರ್ಬಾಜ್‌ನ ಕೊಲೆ ಆಗಿದೆ. ನಿತ್ಯವೂ ಇಬ್ಬರು ಪರಸ್ಪರ ಮಾತಿನ ಮೂಲಕ ಕಾಲೆಳೆಯುತ್ತಿದ್ದರು. ಅದರಂತೆಯೇ ನಿನ್ನೆ ಶುರುವಾದ ಮಾತು ಗಲಾಟೆಗೆ ತಿರುಗಿದೆ.
ನೋಡ ನೋಡುತ್ತಿದ್ದಂತೆ ಫರ್ಹಾದ್, ಅರ್ಬಾಜ್ ಮೇಲೆ ಕತ್ತರಿಯಿಂದ ಇರಿದಿದ್ದಾನೆ. ರಕ್ತಸ್ರಾವವಾಗಿ ಅಲ್ಲೇ ಕುಸಿದು ಬಿದ್ದಿದ್ದ ಅರ್ಬಾಜ್‌ನನ್ನು ಎದುರಲ್ಲೇ ಇರುವ ಆಸ್ಪತ್ರೆಗೆ ಸೇರಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಪ್ರಾಣ ಬಿಟ್ಟಿದ್ದಾನೆ. ಸದ್ಯ ಚಿಂತಾಮಣಿ ನಗರ ಪೊಲೀಸರು ಆರೋಪಿ ಫರ್ಹಾದ್‌ನನ್ನು ಬಂಧಿಸಿದ್ದಾರೆ.
ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿ ಹೊಡೆದು ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದ ಘಟನೆ ದಾವಣಗೆರೆ ನಗರದ ಆರ್ಟಿಒ ಕಚೇರಿ ಬಳಿಯ ಬೂದಾಳ್ ರಸ್ತೆಯಲ್ಲಿ ನಡೆದಿತ್ತು. ಅಪಘಾತದಲ್ಲಿ ಮೃತಪಟ್ಟ ಯುವಕ ಉತ್ತರ ಪ್ರದೇಶ ಮೂಲದವನು ಎಂದು ತಿಳಿದು ಬಂದಿದ್ದು, ಯುಪಿಯಿಂದ ಬಂದು ಶಿವನಗರದಲ್ಲಿ ಸಲೂನ್ ಶಾಂಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಇನ್ನಿಬ್ಬರ ಮಾಹಿತಿ ತಿಳಿದು ಬಂದಿರಲಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿತ್ತು.
