ಮಂಡ್ಯ
ಜಿಲ್ಲೆಯ ಕೆರೆಗೋಡು ಗ್ರಾಮದ 108 ಅಡಿ ಎತ್ತರದ ಕಂಬದ ಮೇಲೆ ಹನುಮ ಧ್ವಜ ಹಾರಿಸಲಾಗಿತ್ತು. ಬಳಿಕ ಆ ಧ್ವಜವನ್ನು ಕೆಳಗಿಳಿಸಿ ರಾಷ್ಟ್ರಧ್ವಜ ಹಾರಿಸುತ್ತಿದ್ದಂತೆ ಅಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹಿಂದೂ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟಿಸಿದ್ದವು. ಲಾಠಿಚಾರ್ಜ್ ಕೂಡ ನಡೆದಿತ್ತು. ಇದೀಗ ಕೆರಗೋಡು ಹನುಮ ಧ್ವಜ ದಂಗಲ್ ಮತ್ತೆ ಮುನ್ನೆಲೆಗೆ ಬಂದಿದೆ. ಅರ್ಜುನ ಸ್ಥಂಭದಲ್ಲಿ ಹನುಮ ಧ್ವಜ ಹಾರಿಸಲು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದು, ಮತ್ತೊಂದು ಹೋರಾಟಕ್ಕೆ ಮುಂದಾಗಿವೆ.
ಏಪ್ರಿಲ್ 12ರಂದು ಮಂಡ್ಯದಲ್ಲಿ ಕರಾವಳಿ ಮತ್ತು ಮಲೆನಾಡು ಮಾದರಿಯಂತೆ ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ಬೃಹತ್ ಶೋಭಯಾತ್ರೆಗೆ ನಿರ್ಧರಿಸಲಾಗಿದೆ. ವಿಹೆಚ್ಪಿ, ಬಜರಂಗದಳ ಹಾಗೂ ಶ್ರೀರಾಮಾಂಜನೇಯ ಮಹೋತ್ಸವ ಸಮಿತಿಯಿಂದ ಈ ಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಶೋಭಾಯಾತ್ರೆಯಲ್ಲಿ ಟಿಪ್ಪು ಕೊಂದ ಉರಿಗೌಡ ಮತ್ತು ನಂಜೇಗೌಡ ನೆನಪಿಸಲು ಯೋಜನೆ ರೂಪಿಸಲಾಗಿದೆ.
ಹಿಂದೂಗಳ ಜಾಗೃತಿಗಾಗಿ ಶೋಭಾಯಾತ್ರೆ ಆಯೋಜನೆ ಮಾಡಲಾಗುತ್ತಿದ್ದು, ಡಿಜೆ ಹಾಗೂ ಕಲಾತಂಡಗಳು ಸೇರಿದಂತೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ. ಮಂಡ್ಯದ ಶಕ್ತಿ ದೇವತೆ ಕಾಳಿಕಾಂಭ ದೇವಸ್ಥಾನದಿಂದ ಬೃಹತ್ ಮೆರವಣಿಗೆ ನಡೆಯಲಿದೆ. ಬಳಿಕ ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ಉರೀಗೌಡ ಮತ್ತು ನಂಜೇಗೌಡ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಲಿದೆ. ಆ ಮೂಲಕ ಟಿಪ್ಪು ಕೊಂದವರೂ ನಮ್ಮ ಹಿಂದೂಗಳು ಎಂದು ಸಾರಲು ನಿರ್ಧರಿಸಲಾಗಿದೆ.
ಇನ್ನು ಈ ಶೋಭಾಯಾತ್ರೆಗೆ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ನಂದನಾಥ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ಶಾಸಕರುಗಳು ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
2024 ಜನವರಿ 22 ರಂದು ಇಡೀ ದೇಶ ರಾಮಮಂದಿರ ಉದ್ಘಾಟನೆಯ ಸಂಭ್ರಮದಲ್ಲಿತ್ತು. ಅದೇ ದಿನ ಕೆರೆಗೋಡು ಗ್ರಾಮದಲ್ಲಿ 108 ಅಡಿ ಎತ್ತರದ ಧ್ವಜಸ್ತಂಬದ ಮೇಲೆ ಹನುಮ ಧ್ವಜ ಹಾರಾಡಿತ್ತು. ಜನವರಿ 26 ರಂದು ಹನುಮಧ್ವಜ ಇಳಿಸಿ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಗಣರಾಜೋತ್ಸವ ಮುಗಿಯುತ್ತಿದ್ದಂತೆ ಮತ್ತೆ ಹನುಮಧ್ವಜ ಹಾರಿಸಲಾಗಿತ್ತು. ಆದರೆ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಧ್ವಜ ಹಾರಾಡುವಂತಿಲ್ಲ ಅನ್ನೋ ಕಾರಣ ನೀಡಿದ್ದ ಜಿಲ್ಲಾಡಳಿತ ಗ್ರಾಮಕ್ಕೆ ಎಂಟ್ರಿಕೊಟ್ಟಿತ್ತು.
ಬೆಳಗಿನಜಾವ 3 ಗಂಟೆ ಸುಮಾರಿಗೆ ಧ್ವಜ ಇಳಿಸಲು ಮುಂದಾಗಿದ್ದರು. ಆದರೆ ಘಟನೆ ಕಾಡ್ಗಿಟ್ಟಿನಂತೆ ಹಬ್ಬಿತ್ತು. ಗ್ರಾಮಸ್ಥರೆಲ್ಲಾ ಆಕ್ರೋಶಗೊಂಡಿದ್ದರು. ಕೊನೆಗೆ ನೂರಾರು ಪೊಲೀಸರ ಭದ್ರತೆ ನಡುವೆ ಹನುಮಧ್ವಜವನ್ನ ಕೆಳಗಿಳಿಸಲಾಗಿತ್ತು. ಬಳಿಕ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು, ಸ್ತಂಬದ ಬಳಿ ನುಗ್ಗಲು ಯತ್ನಿಸಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದು ಗೊತ್ತಾಗ್ತಿದ್ದಂತೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಲಾಗಿತ್ತು. ಈ ವೇಳೆ ಹತ್ತಾರು ಜನರಿಗೆ ಗಾಯಗಳಾಗಿದ್ದವು.








